ಮುಳ್ಳೂರು, ಏ. ೨೭: ಇಲ್ಲಿನ ಶ್ರೀ ಬಸವೇಶ್ವರ ದೇವರ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನ ಸಮಿತಿ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಪೂಜಾ ಮಹೋತ್ಸವ ಸೋಮವಾರ ಸಂಜೆಯಿAದ ಪ್ರಾರಂಭಗೊAಡು ಮಂಗಳವಾರ ಬೆಳಿಗ್ಗೆ ಕೊನೆಗೊಂಡಿತು.

ಸೋಮವಾರ ಸಂಜೆ ಕುಂಭ ಕಲಶ ಹೊತ್ತ ಮಹಿಳೆಯರು ವಾದ್ಯಗೋಷ್ಠಿಯೊಂದಿಗೆ ಗ್ರಾಮದ ಮುಖ್ಯಬೀದಿ ಮೂಲಕ ದೇವಸ್ಥಾನವನ್ನು ತಲುಪಿದರು. ನಂತರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರಸ್ವಾಮಿ ದೇವರಿಗೆ ವಿವಿಧ ಪೂಜಾ ವಿಧಿ ವಿಧಾನ ನೆರವೇರಿಸಿದ ಬಳಿಕ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ವಾದ್ಯಗೋಷ್ಠಿಯೊಂದಿಗೆ ಊರಿನ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ನಂತರ ರಾತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ಮಂಗಳವಾರ ಬೆಳಿಗ್ಗೆ ದೇವಸ್ಥಾನದ ಮುಂಭಾಗದಲ್ಲಿ ಕೆಂಡೋತ್ಸವ ನಡೆಯಿತು. ಬಳಿಕ ಅರ್ಚಕರಿಂದ ದೇವರಿಗೆ ಪೂಜೆ ಮತ್ತು ಭಕ್ತಾದಿಗಳಿಂದ ಪೂಜೆಯ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದೊಂದಿಗೆ ವಾರ್ಷಿಕ ಪೂಜಾ ಮಹೋತ್ಸವ ಕೊನೆಗೊಂಡಿತು.