ಕಣಿವೆ, ಏ. ೨೭ : ಕಳೆದ ೩೦ ವರ್ಷಗಳಿಗೆ ಹೋಲಿಸಿದಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚು ದಾಖಲಾಗುತ್ತಿ ರುವ ಗರಿಷ್ಠ ತಾಪಮಾನದಿಂದಾಗಿ (೩೭ ಡಿಗ್ರಿ ಸೆಲ್ಸಿಯಸ್) ಕೃಷಿಕರು ತಮ್ಮ ಹೊಲಗದ್ದೆ - ತೋಟಗಳಲ್ಲಿ ಅಳವಡಿಸಿಕೊಂಡಿರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಇದರಿಂದಾಗಿ ಕೃಷಿಕರ ಜೀವ ಸಂಜೀವಿನಿಯಾಗಿರುವ ಬಹಳಷ್ಟು ಕೊಳವೆ ಬಾವಿಗಳು ಸ್ಥಗಿತಗೊಳ್ಳುತ್ತಿವೆ.

ಕೊಳವೆ ಬಾವಿಗಳನ್ನು ನಂಬಿ ಕೃಷಿ ಮಾಡಿದ್ದ ಬಹುತೇಕ ಕೃಷಿಕರಲ್ಲಿ ಬೆಳೆ ನಾಶದ ಭೀತಿ ಆರಂಭವಾಗಿದೆ. ಈ ಬಾರಿ ಭೂಮಿ ಬಿರಿಯುವಷ್ಟು ಸುಡುತ್ತಿರುವ ತಾಪಮಾನಕ್ಕೆ ಕೊಳವೆ ಬಾವಿಗಳು ಕೂಡ ಬೆಚ್ಚಿವೆ.

ಮಳೆ ಬಿದ್ದು ಭೂಮಿ ತಣಿಯದಿದ್ದಲ್ಲಿ ರೈತರು ಬೆಳೆದ ಯಾವುದೇ ತರಕಾರಿ, ಕಾಯಿ ಪಲ್ಯೆ, ಆಹಾರ ಧಾನ್ಯದ ಬೆಳೆಗಳು ಹಾಗೂ ತೋಟಗಾರಿಕಾ ಬೆಳೆಗಳ ಮೇಲೆ ಮಾರಕ ಪರಿಣಾಮ ಉಂಟಾಗಲಿದೆ ಎಂಬುದು ಕೃಷಿಕರ ಅಳಲಾಗಿದೆ.

ಕುಶಾಲನಗರ ತಾಲೂಕಿನಾದ್ಯಂತ ಇರುವ ೫೭ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ೫೨೦೦ ರಷ್ಟು ಕೊಳವೆ ಬಾವಿಗಳನ್ನು ಅಳವಡಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಈ ಪೈಕಿ ೪೮೦೦ ಕ್ಕೂ ಹೆಚ್ಚಿನ ಕೊಳವೆ ಬಾವಿಗಳು ಕುಶಾಲನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿಯಲ್ಲಿ ದಾಖಲಾಗಿವೆ.

ಕಾನೂನು ಬಾಹಿರವಾದ ಸಂಪರ್ಕಗಳು ಕೆಲವು ಇದ್ದು, ಎಲ್ಲಾ ಕೊಳವೆ ಬಾವಿಗಳ ಅಂತರ್ಜಲ ಕ್ಷೀಣಿಸಿದೆ. ಈ ಅನಿರೀಕ್ಷಿತ ಬೆಳವಣಿಗೆ ಯಿಂದಾಗಿ ರೈತರಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ಈಗಾಗಲೇ ಅವ್ಯಾಹತವಾಗಿ ಶುಂಠಿ ಕೃಷಿ ಕೈಗೊಂಡ ಅನೇಕ ಕೃಷಿಕರು ನದಿ, ಹಳ್ಳ ಕೊಳ್ಳ ಮತ್ತು ಕೆರೆಗಳ ನೀರನ್ನು ಹೊರತುಪಡಿಸಿ ಕೊಳವೆ ಬಾವಿಗಳಿಗೆ ಹೆಚ್ಚಿನ ಒತ್ತು ನೀಡಿ ಅಲ್ಲಿ ಶುಂಠಿ ಬಿತ್ತನೆ ಮಾಡಿದ ಹೊಲ ಗದ್ದೆ, ಕಾಡು ಮೇಡುಗಳಲ್ಲಿ ಅಳವಡಿಸಿರುವ ಕೊಳವೆ ಬಾವಿಗಳು ನೀರಿಲ್ಲದೇ ಬತ್ತಲಾರಂಭಿಸಿವೆ.

ಕಳೆದ ಬಾರಿ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ದರ ದೊರಕಿದ ಹಿನ್ನೆಲೆಯಲ್ಲಿ ಈ ವರ್ಷ ಶುಂಠಿ ಬೆಳೆಯಲು ಕೊಳವೆ ಬಾವಿಗಳು ಇರುವ ಹೊಲಗಳಿಗೆ ಎಕರೆ ಯೊಂದಕ್ಕೆ ತಲಾ ೬೦ ರಿಂದ ೬೫ ಸಾವಿರ ರೂಗಳಿಗೆ ಪಡೆದು ಶುಂಠಿ ಬಿತ್ತನೆ ಮಾಡಿರುವ ಶುಂಠಿ ಬೆಳೆಗಾರರ ಸ್ಥಿತಿ ಡೋಲಾಯಮಾನ ವಾಗಿದೆ.

ನೀರು ಪಾತಾಳಕ್ಕಿಳಿದಿರುವ ಕೊಳವೆ ಬಾವಿಗಳ ಪುನಶ್ಚೇತನಕ್ಕೆ ಮತ್ತೆ ಲಕ್ಷಾಂತರ ರೂಗಳನ್ನು ವ್ಯಯ ಮಾಡಿದರೂ ಕೂಡ ನೀರು ಸಿಗದ ದುಸ್ಥಿತಿ ಇದೆ. ಇದಕ್ಕೆಲ್ಲಾ ಏಕೈಕ ಪರಿಹಾರ ಎಂದರೆ ಸರಾಗವಾಗಿ ಮಳೆ ಸುರಿಯಬೇಕಿದೆ. ಮಳೆ ಸುರಿದು ಭೂಮಿ ತಣಿದು ಅಂತರ್ಜಲ ವೃದ್ಧಿಯಾದರೆ ಮಾತ್ರ ಕೃಷಿಕನ ನೆಮ್ಮದಿ ವೃದ್ಧಿಸುತ್ತದೆ.

-ವರದಿ : ಕೆ.ಎಸ್. ಮೂರ್ತಿ