ಕರಿಕೆ, ಏ. ೨೬: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಮಳೆಯ ಕೊರತೆಯಿಂದಾಗಿ ಗೇರು ಬೆಳೆದ ರೈತರು ತೀವ್ರ ನಷ್ಟ ಅನುಭವಿಸುವ ಆತಂಕ ಎದುರಾಗಿದೆ. ಕೊಡಗಿನ ಸಂಪಾಜೆ, ಕರಿಕೆ, ಪೆರಾಜೆ, ಚೆಂಬು ಈ ನಾಲ್ಕು ಗ್ರಾಮಗಳು ಭೌಗೋಳಿಕವಾಗಿ ಕೊಡಗಿಗೆ ಸೇರಿದ್ದರೂ ಇಲ್ಲಿನ ವಾತಾವರಣ ದ.ಕ. ಜಿಲ್ಲೆಯನ್ನು ಹೋಲುತ್ತದೆ. ಇದರಿಂದಾಗಿ ಈ ಭಾಗದಲ್ಲಿ ಗೇರು ಬೀಜದ ಬೆಳೆಯನ್ನು ಪ್ರಮುಖ ತೋಟಗಾರಿಕ ಬೆಳೆಯಾಗಿ ಬೆಳೆಯುತ್ತಾರೆ.

ಸಾಮಾನ್ಯವಾಗಿ ಗೇರು ಮರಗಳು ಅಕ್ಟೋಬರ್ ಕಾವೇರಿ ತುಲಾಸಂಕ್ರಮಣದ ನಂತರ ಎಲೆಯುದುರಲು

(ಮೊದಲ ಪುಟದಿಂದ) ಆರಂಭಿಸಿ ನವೆಂಬರ್-ಡಿಸೆAಬರ್ ತಿಂಗಳಲ್ಲಿ ಹೂಬಿಡುತ್ತದೆ. ಇದರಲ್ಲಿ ಇತ್ತಿಚಿನ ದಿನಗಳಲ್ಲಿ ಬೇಗನೆ ಫಸಲು ನೀಡುವ ಹೈಬ್ರೀಡ್ ತಳಿಗಳು ಜನವರಿಯಿಂದಲೇ ಫಸಲು ನೀಡುತ್ತಿದ್ದು, ನಾಟಿ ತಳಿ ಫೆಬ್ರವರಿಯಿಂದ ಮೇ ತನಕ ಫಸಲು ಯಥೇಚ್ಛವಾಗಿರುತ್ತದೆ. ಜನವರಿ ಮತ್ತು ಮೇ ತಿಂಗಳ ಮಧ್ಯೆ ಮೂರು ನಾಲ್ಕು ಮಳೆಯ ಅಗತ್ಯ ಗೇರುಮರಗಳಿಗಿದ್ದು, ಇದರಿಂದಾಗಿ ಹೂಗಳು ಕಾಯಿಬಿಡಲು ಅನುಕೂಲಕರವಾಗುತ್ತದೆ.

ಆದರೆ ಈ ಬಾರಿ ನಿರಂತರ ಮೋಡದ ವಾತವಾರಣ ಹಾಗೂ ಸರಿಯಾದ ಮಳೆ ಬಾರದ ಕಾರಣ ಹೂಗಳು ಒಣಗಿ ಶೇ ೬೦ ರಷ್ಟು ಪ್ರಮಾಣದ ಬೆಳೆ ನಷ್ಟವಾಗಿದೆ. ಮಾರುಕಟ್ಟೆಯಲ್ಲಿ ಕಚ್ಚಾ ಗೇರುಬೀಜಕ್ಕೆ ನೂರರಿಂದ ನೂರ ಹತ್ತರವರೆಗೆ ಬೆಲೆಯಿದ್ದು, ರೈತರು ಕಚ್ಚಾ ಬೀಜವನ್ನೇ ಮಾರಾಟ ಮಾಡುತ್ತಾರೆ. ಇದು ಪ್ರಮುಖ ತೋಟಗಾರಿಕ ಬೆಳೆಯಾಗಿದ್ದು, ಕೊಡಗು ತೋಟಗಾರಿಕಾ ಇಲಾಖೆ ವತಿಯಿಂದ ಗೇರು ಬೆಳೆಯನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಗಿಡ ನಾಟಿ ಮಾಡಲು ಸಹಾಯಧನ ಕೂಡ ನೀಡುತ್ತಿದೆ. ಆದರೆ ಇದೀಗ ಪ್ರತಿಕೂಲವಾದ ವಾತಾವರಣದಿಂದ ಬೆಳೆ ನಷ್ಟ ಸಂಭವಿಸಿರುವ ಬೆಳೆಗಾರರ ಸಂಕಷ್ಟಕ್ಕೆ ಇಲಾಖೆ ಸ್ಪಂದಿಸಬೇಕೆAಬುದೇ ಗೇರು ಬೆಳೆಗಾರರ ಆಗ್ರಹ. -ಸುಧೀರ್ ಹೊದ್ದೆಟ್ಟಿ