ಕಣಿವೆ, ಏ. ೨೬: ಕುಶಾಲನಗರ ಪುರಸಭಾ ವ್ಯಾಪ್ತಿಯ ಸುಮಾರು ೨೫ ರಿಂದ ೩೦ ಸಾವಿರ ಮಂದಿಗೆ ಕುಡಿಯುವ ನೀರನ್ನು ಕುಶಾಲನಗರದ ಬೈಚನಹಳ್ಳಿಯ ಕಾವೇರಿ ನದಿಯಿಂದ ಯಂತ್ರಾಗಾರದ ಮೂಲಕ ಪೂರೈಸಲಾಗುತ್ತಿದೆ. ಮಳೆಯಿಲ್ಲದೇ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದರೂ ಕೂಡ ಕುಶಾಲನಗರದ ನಾಗರಿಕರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲ ಎಂದು ಜಲಮಂಡಳಿ ಅಭಿಯಂತರ ಆನಂದ್ ‘ಶಕ್ತಿ'ಗೆ ತಿಳಿಸಿದ್ದಾರೆ.

ಕಳೆದ ವಾರ ನದಿಯಲ್ಲಿ ಸಂಪೂರ್ಣವಾಗಿ ನೀರು ಸ್ಥಗಿತದ ಭೀತಿ ಮೂಡಿಸಿತ್ತಾದರೂ, ನದಿ ಭಾಗದ ವೀರಾಜಪೇಟೆ ತಾಲೂಕಿನ ವಿವಿಧೆಡೆ ಮಳೆ ಆದ ಕಾರಣ ಸ್ವಲ್ಪ ಪ್ರಮಾಣದಲ್ಲೇ ನೀರು ಹರಿದು ಮುಂದೆ ಸಾಗಿ ಬಂದಿದೆ. ಅಂದರೆ ಬಿಸಿಲ ತಾಪಕ್ಕೆ ಅಲ್ಲಲ್ಲಿ ನದಿಯೊಳಗೆ ನೀರು ಕ್ಷೀಣಿಸಿದ ಕಾರಣ ತಗ್ಗು ಪ್ರದೇಶಗಳೆಲ್ಲಾ ತುಂಬಿ ಎರಡು ದಿನಗಳ ಬಳಿಕ ಕುಶಾಲನಗರದ ಕಾವೇರಿ ನದಿ ದಂಡೆಯ ನೀರೆತ್ತುವ ಜಲಾಗಾರದ ಬಳಿ ಹರಿದು ಬಂದು ಆತಂಕವನ್ನು ದೂರ ಸರಿಸಿದೆ.

ಅಲ್ಲದೇ ಇದೀಗ ಮತ್ತೆ ಮಳೆಯಾದ ಕಾರಣ ನದಿಯಲ್ಲಿ ನೀರಿನ ಸ್ಥಗಿತದ ಸಮಸ್ಯೆ ಬಾಧಿಸುವುದಿಲ್ಲ. ಹಾಗಾಗಿ ಸಾರ್ವಜನಿಕರಿಗೆ ನೀರಿನ ಅಭಾವದ ಚಿಂತೆ ಬೇಡ. ಆದರೆ ನೀರನ್ನು ಮಿತವಾಗಿ ಬಳಸಬೇಕು. ಕಾಯಿಸಿಯೇ ಕುಡಿಯಬೇಕು ಎಂದು ಇಂಜಿನಿಯರ್ ಆನಂದ್ ಮನವಿ ಮಾಡಿದ್ದಾರೆ.

-ಕೆ.ಎಸ್. ಮೂರ್ತಿ