ನಕ್ಸಲ್ ಅಟ್ಟಹಾಸ: ೧೦ ಪೊಲೀಸ್ ಸಿಬ್ಬಂದಿ-ಚಾಲಕನ ಹತ್ಯೆ

ನವದೆಹಲಿ, ಏ. ೨೬: ಚತ್ತೀಸ್‌ಗಢದಲ್ಲಿ ನಕ್ಸಲರು ನಡೆಸಿದ ಬಾಂಬ್ ಸ್ಫೋಟದಲ್ಲಿ ೧೦ ಮಂದಿ ಪೊಲೀಸ್ ಸಿಬ್ಬಂದಿಗಳು, ಓರ್ವ ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಅರನ್ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು, ಪೊಲೀಸ್ ಜಿಲ್ಲಾ ರಿಸರ್ವ್ ಗಾರ್ಡ್(ಡಿಆರ್‌ಜಿ)ಗಳ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಕ್ತಾಯಗೊಳಿಸಿ ವಾಪಸ್ಸಾಗುತ್ತಿದ್ದಾಗ ರಾಜ್ಯ ರಾಜಧಾನಿ ರಾಯ್‌ಪುರದಿಂದ ೪೫೦ ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ಭದ್ರತಾ ಪಡೆಗಳು ಸಂಚರಿಸುತ್ತಿದ್ದ ಮಿನಿ ಗೂಡ್ಸ್ ವಾಹನವನ್ನು ನಕ್ಸಲರು ಸುಧಾರಿತ ಸ್ಫೋಟ ಸಾಧನದ ಮೂಲಕ ಸ್ಫೋಟಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಪಕ್ಷಗಳಿಂದ ಅಬ್ಬರದ ಪ್ರಚಾರ-ಮತದಾರರ ಓಲೈಕೆಗೆ ಕಸರತ್ತು

ಬೆಂಗಳೂರು, ಏ. ೨೬: ರಾಜ್ಯದಲ್ಲಿ ಮೇ ೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇನ್ನೂ ಹದಿನೈದು ದಿನಗಳು ಮಾತ್ರ ಬಾಕಿ ಉಳಿದಿದ್ದು, ಮತದಾರರನ್ನು ಓಲೈಸಲು ರಾಜಕೀಯ ನಾಯಕರು ರಾಜ್ಯದಾದ್ಯಂತ ತಮ್ಮ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಮೂರು ಪಕ್ಷಗಳಿಂದಲೂ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಆಡಳಿತಾರೂಢ ಬಿಜೆಪಿಯು ಇತರ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು, ರಾಜ್ಯ ನಾಯಕರೊಂದಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಸಭೆಗಳು, ರೋಡ್ ಶೋ ಮತ್ತು ಸಂವಾದಾತ್ಮಕ ಸಭೆಗಳನ್ನು ನಡೆಸುತ್ತಿದೆ. ಇತ್ತ ಕಾಂಗ್ರೆಸ್ ತನ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರಿಂದ ಎರಡನೇ ದಿನದ ಪ್ರಚಾರ ಕಾರ್ಯ ನಡೆಸಿದೆ. ಜೆಡಿಎಸ್ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (೮೯) ಮತ್ತು ಅವರ ಪುತ್ರ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಂತಹ ನಾಯಕರೊಂದಿಗೆ ಬಿಜೆಪಿ ಇಂದು ತನ್ನ ಸಂಪೂರ್ಣ ಶಕ್ತಿಯನ್ನು ಪ್ರಚಾರದಲ್ಲಿ ಬಳಸಿಕೊಂಡಿದೆ.

ಭಾರತೀಯ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ

ಸಿAಗಾಪುರ, ಏ. ೨೬: ಒಂದು ಕಿಲೋಗ್ರಾಂ ಗಾಂಜಾವನ್ನು ಕಳ್ಳಸಾಗಣೆ ಮಾಡಲು ಸಂಚು ರೂಪಿಸಿದ ಅಪರಾಧಿಯೊಬ್ಬನನ್ನು ಸಿಂಗಾಪುರ ಸರಕಾರ ಗಲ್ಲಿಗೇರಿಸಿದೆ. ಮರಣದಂಡನೆ ಶಿಕ್ಷೆಯನ್ನು "ತುರ್ತಾಗಿ ಮರುಪರಿಶೀಲಿಸುವಂತೆ" ಸಿಂಗಾಪುರ ಸರ್ಕಾರಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಮನವಿ ಮಾಡಿದ್ದರೂ ಮತ್ತು ಬ್ರಿಟಿಷ್ ಉದ್ಯಮಿ ರಿಚರ್ಡ್ ಬ್ರಾನ್ಸನ್ ಗಲ್ಲು ಶಿಕ್ಷೆ ನಿಲ್ಲಿಸುವಂತೆ ಕೇಳಿಕೊಂಡಿದ್ದರೂ ಸಹ ಅದನ್ನು ನಿರ್ಲಕ್ಷಿಸಿ ಮರಣದಂಡನೆ ಶಿಕ್ಷೆ ಜಾರಿಗೊಳಿಸಲಾಗಿದೆ. "೪೬ ವರ್ಷದ ಸಿಂಗಪುರದ ತಂಗರಾಜು ಸುಪ್ಪಯ್ಯ ಎಂಬಾತನನ್ನು ಇಂದು ಚಾಂಗಿ ಜೈಲು ಸಂಕೀರ್ಣದಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ" ಎಂದು ಸಿಂಗಾಪುರ್ ಜೈಲು ಸೇವೆಯ ವಕ್ತಾರರು ಎಎಫ್‌ಪಿಗೆ ತಿಳಿಸಿದ್ದಾರೆ. ಗಾಂಜಾ ಕಳ್ಳಸಾಗಣೆಗೆ ಸಂಚು ರೂಪಿಸುವ ಮೂಲಕ ಗಾಂಜಾ ಸಾಗಣೆಗೆ ಕುಮ್ಮಕ್ಕು ನೀಡಿದ್ದಕ್ಕಾಗಿ ೨೦೧೭ ರಲ್ಲಿ ತಂಗರಾಜುಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಜಿನೀವಾ ಮೂಲದ ಡ್ರಗ್ ಪಾಲಿಸಿ ಕುರಿತ ಗ್ಲೋಬಲ್ ಕಮಿಷನ್ ಸದಸ್ಯ ಬ್ರಾನ್ಸನ್ ಸೋಮವಾರ ತಮ್ಮ ಬ್ಲಾಗ್‌ನಲ್ಲಿ ತಂಗರಾಜು ಅವರನ್ನು ಬಂಧಿಸುವ ಸಮಯದಲ್ಲಿ ಡ್ರಗ್ಸ್ "ಎಲ್ಲಿಯೂ ಇರಲಿಲ್ಲ" ಎಂದು ಬರೆದಿದ್ದಾರೆ ಮತ್ತು ಸಿಂಗಾಪುರ್ ಅಮಾಯಕ ವ್ಯಕ್ತಿಯನ್ನು ಕೊಲ್ಲುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಮಂಗಳವಾರ ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಂಗಾಪುರದ ಗೃಹ ವ್ಯವಹಾರಗಳ ಸಚಿವಾಲಯ, ತಂಗರಾಜು ಅವರ ಅಪರಾಧವು ಸಾಬೀತಾಗಿದೆ ಎಂದು ಹೇಳಿತ್ತು.

ಶ್ರೀರಾಮ, ಕೃಷ್ಣನ ಜನ್ಮಸ್ಥಳದಲ್ಲಿ ಪಾಪದ ಕೆಲಸ ಮಾಡಲು ಬಿಡಲ್ಲ: ಯೋಗಿ ಆದಿತ್ಯನಾಥ್

ಬಸವನಬಾಗೇವಾಡಿ, ಏ. ೨೬: ಶ್ರೀ ರಾಮ, ಕೃಷ್ಣನ ಜನ್ಮಸ್ಥಳದಲ್ಲಿ ಪಾಪದ ಕೆಲಸಗಳನ್ನ ಮಾಡಲು ಬಿಡಲ್ಲ, ಉತ್ತರ ಪ್ರದೇಶದಲ್ಲಿ ಗೂಂಡಾಗಳನ್ನು ಮಟ್ಟಹಾಕಿದ್ದೇವೆ. ಶ್ರೀರಾಮನ ಪರಮಭಕ್ತ ಆಂಜನೇಯನ ಜನ್ಮಸ್ಥಳ ಕರ್ನಾಟಕ, ಇಲ್ಲಿನ ಜನರು ನಿರ್ಭೀತಿಯಿಂದ ಜೀವನ ಸಾಗಿಸಬೇಕು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಇಂದು ಬಿಜೆಪಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಸಮಾಜವನ್ನು ಜಾತಿ ಹೆಸರಿನಲ್ಲಿ ಒಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಯೋಗಿ ಆದಿತ್ಯನಾಥ್, ಜಗಜ್ಯೋತಿ ಬಸವಣ್ಣನವರ ಪವಿತ್ರ ಭೂಮಿಗೆ ಬಂದಿದ್ದು ನನ್ನ ಸೌಭಾಗ್ಯ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಆಗ್ತಿದೆ. ೧೦೦೦ ವರ್ಷಗಳ ಹಿಂದಿನಿAದ ಕರ್ನಾಟಕ-ಯುಪಿ ನಡುವೆ ಬಾಂಧವ್ಯವಿದೆ. ದೇಶದ ಪ್ರತಿ ನಾಗರಿಕನ ಸಶಕ್ತಿಕರಣಗೊಳಿಸುವುದು ನಮ್ಮ ಉದ್ದೇಶ ಎಂದರು. ಇದಕ್ಕೂ ಮುನ್ನ ಮಂಡ್ಯದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಆದಿ ಚುಂಚನಗಿರಿಗೆ ನನ್ನ ನಮಸ್ಕಾರಗಳು. ಮಂಡ್ಯದ ಉತ್ಸಾಹಿ ಕಾರ್ಯಕರ್ತರಿಗೆ ಉತ್ತರ ಪ್ರದೇಶದವನಾದ ನಾನು ನಮಸ್ಕರಿಸುತ್ತೇನೆ. ಇಂದು ಮಂಡ್ಯದಲ್ಲಿ ನಾನು ಬಂದಿರುವುದು ಸಂತಸ ತಂದಿದೆ ಎಂದರು.

‘ಭಯೋತ್ಪಾದನಾ ದೇಶ' ಪಾಕಿಸ್ತಾನದೊಂದಿಗೆ ಮಾತುಕತೆ ಬಹಳ ಕಷ್ಟ: ವಿದೇಶಾಂಗ ಸಚಿವ ಜೈಶಂಕರ್

ಪನಾಮಾ ಸಿಟಿ, ಏ. ೨೬: ‘ಭಾರತದ ವಿರುದ್ಧ ಗಡಿಯಾಚೆ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದು ಬಹಳ ಕಷ್ಟ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಪನಾಮಾದ ವಿದೇಶಾಂಗ ಸಚಿವೆ ಜನೈನ ತೆವಾನೇ ಮೆನ್ಕೋಮೋ ಅವರೊಡನೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್, ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದು ಬಹಳ ಕಷ್ಟ. ಗಡಿಯಾಚೆಗಿನ ಭಯೋತ್ಪಾದನೆ ಚಟುವಟಿಕೆಯನ್ನು ಪ್ರೋತ್ಸಾಹಿಸುವುದು, ಪ್ರಾಯೋಜಿಸುವುದು ಮತ್ತು ನಡೆಸುವುದನ್ನು ಅವರು ನಿಲ್ಲಿಸಬೇಕೆಂದು ನಾವು ಯಾವಾಗಲೂ ಹೇಳುತ್ತೇವೆ. ಮುಂದೊAದು ದಿನ ಪಾಕಿಸ್ತಾನವು ಇಂತಹ ಚಟುವಟಿಕೆಗಳನ್ನು ನಿಲ್ಲಿಸುತ್ತದೆ ಎಂದು ನಾವು ಆಶಿಸುತ್ತೇವೆ ಎಂದು ಹೇಳಿದರು. ಅಂತೆಯೇ ಪಾಕಿಸ್ತಾನದೊಂದಿಗೆ ನಾವು ಉತ್ತಮ ನೆರೆಯ ಸಂಬAಧ ಬಯಸುತ್ತೇವೆ. ಆದರೆ ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ್ದಾಗಿದೆ ಎಂದು ಭಾರತ ಯಾವಾಗಲೂ ಹೇಳುತ್ತಾ ಬಂದಿದೆ. ನಾವಿಬ್ಬರೂ (ಭಾರತ ಮತ್ತು ಪಾಕಿಸ್ತಾನ) ಎಸ್.ಸಿ.ಒ. ದ ಸದಸ್ಯ ರಾಷ್ಟçಗಳು. ಆದ್ದರಿಂದ ಸಭೆಗಳಿಗೆ ನಾವು ಸಾಮಾನ್ಯವಾಗಿ ಹಾಜರಾಗುತ್ತೇವೆ. ಈ ಬಾರಿಯ ಎಸ್.ಸಿ.ಒ. ದ ಅಧ್ಯಕ್ಷತೆ ನಮಗೆ ಸಿಕ್ಕಿದೆ. ಆದ್ದರಿಂದ ಈ ಶೃಂಗಸಭೆ ಭಾರತದಲ್ಲಿ ನಡೆಯುತ್ತಿದೆ ಎಂದರು. ಮೇ ತಿಂಗಳಲ್ಲಿ ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್.ಸಿ.ಒ.) ಶೃಂಗಸಭೆಯಲ್ಲಿ ಭಾಗವಹಿಸಲು ತಮ್ಮ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಾಕಿಸ್ತಾನ ಖಚಿತಪಡಿಸಿದ ಬೆನ್ನಲ್ಲೇ ಜೈಶಂಕರ್ ಅವರು ಈ ಹೇಳಿಕೆ ನೀಡಿದ್ದಾರೆ.