ಗೋಣಿಕೊಪ್ಪ, ಏ. ೨೪: ಮೇಯಲು ಬಂದು ಆಕಸ್ಮಿಕವಾಗಿ ಕೆಸರಿನಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದ ಹಸುವನ್ನು ೧೨ ವರ್ಷದ ಬಾಲಕನೋರ್ವ ಸ್ನೇಹಿತರೊಂದಿಗೆ ಸೇರಿ ರಕ್ಷಿಸಿರುವ ಘಟನೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮದ ಚೇನಿಹಡ್ಲು ಹಾಡಿಯಲ್ಲಿ ನಡೆದಿದೆ.

ಹಾಡಿ ನಿವಾಸಿ ದಿನೇಶ್ ಅವರ ಪುತ್ರ ಪೊನ್ನಂಪೇಟೆ ಸಾಯಿಶಂಕರ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಅರ್ಜುನ ಸಾಗರ್ ಎಂದಿನAತೆ ಸ್ನೇಹಿತರೊಂದಿಗೆ ಆಟವಾಡುವ ಸಂದರ್ಭದಲ್ಲಿ ಹಸು ಕೆಸರಿನಲ್ಲಿ ಹೂತು ಹೋಗಿ ಪಾರಾಗಲು ಪ್ರಯತ್ನ ನಡೆಸುತ್ತಿರುವ ದೃಶ್ಯ ಕಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ತಕ್ಷಣ ಮನವರಿಕೆ ಮಾಡಿಕೊಂಡ ಬಾಲಕ ತನ್ನ ಸ್ನೇಹಿತರೊಡಗೂಡಿ ನಿರಂತರವಾಗಿ ಐದು ಗಂಟೆಗಳ ಕಾಲ ಪ್ರಯತ್ನಿಸಿ ಹಸುವನ್ನು ರಕ್ಷಣೆ ಮಾಡಿದ್ದಾನೆ.

ತಿತಿಮತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿರುವ ವಿಜಯ ಅವರ ಹಸು ಇದಾಗಿದ್ದು, ಬೆಳಿಗ್ಗೆ ಹಸುವನ್ನು ಮೇಯಲು ಬಿಟ್ಟು ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಹಸು ಆಹಾರ ಅರಸುತ್ತಾ ಕೆಸರಿನಲ್ಲಿ ಹೆಜ್ಜೆ ಇಟ್ಟು ಮೂಕವೇದನೆ ಅನುಭವಿಸಿತ್ತು. ಬಾಲಕ ಹಸುವನ್ನು ಕೆಸರಿನಿಂದ ಮೇಲೆ ತರಲು ಹಸುವಿನ ಬಾಯಿಗೆ ಹುಲ್ಲು ನೀಡುತ್ತಲೇ ಪ್ರಯತ್ನಿಸಿ ಸಫಲನಾಗಿದ್ದಾನೆ.

- ಎನ್.ಎನ್. ದಿನೇಶ್