ಸೋಮವಾರಪೇಟೆ, ಏ. ೨೪: ಧರ್ಮ ಹಾಗೂ ಜಾತಿಗಳ ನಡುವೆ ಒಡೆದು ಆಳುವ ನೀತಿಯನ್ನು ಈ ಹಿಂದಿನಿAದಲೂ ಕಾಂಗ್ರೆಸ್ ಅನುಸರಿಸುತ್ತಾ ಬಂದಿದೆ. ಇದರ ಮುಂದುವರೆದ ಭಾಗವಾಗಿ ಅಗತ್ಯವಿಲ್ಲದ ಟಿಪ್ಪು ಜಯಂತಿಯನ್ನು ಹೇರಲಾಗಿತ್ತು. ಬಿಜೆಪಿ ಸರ್ಕಾರ ಇದನ್ನು ರದ್ದುಗೊಳಿಸಿ ಸಾಮಾಜಿಕ ಶಾಂತಿಗೆ ಮುನ್ನುಡಿ ಬರೆದಿದೆ ಎಂದು ಶಾಸಕ ಹಾಗೂ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಶನಿವಾರಸಂತೆಯಲ್ಲಿ ಆಯೋಜಿ ಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಶಾದಿ ಭಾಗ್ಯ, ಟಿಪ್ಪು ಜಯಂತಿಗಳು ಬೇಕೆಂದು ಯಾರೂ ಕೇಳಿರಲಿಲ್ಲ, ಅವು ಅಂದಿನ ಕಾಂಗ್ರೆಸ್ ಸರ್ಕಾರದ ಒಡೆದಾಳುವ ನೀತಿಯ ತಂತ್ರಗಳಾಗಿದ್ದವು ಎಂದರು.
ಶಾದಿ ಭಾಗ್ಯವು ಒಂದು ವರ್ಗದ ಓಲೈಕೆಗೆ ಮಾಡಿದ ಯೋಜನೆ. ಈ ಯೋಜನೆಗೆ ಭಾರೀ ಪ್ರಚಾರ ಕೊಡ ಲಾಯಿತೇ ವಿನಃ ಫಲಾನುಭವಿಗಳ ಸಂಖ್ಯೆ ತೀರಾ ಕಡಿಮೆ. ಶಾದಿ ಭಾಗ್ಯವು ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಮಾತ್ರ ಎಂಬುದು ಸಮುದಾಯಗಳ ನಡುವೆ ಕಂದಕ ಸೃಷ್ಟಿಸಿತೇ ವಿನಃ, ಅದರಿಂದ ಮುಸ್ಲಿಂ ಸಮುದಾಯಕ್ಕೂ ಹೆಚ್ಚಿನ ಉಪಯೋಗ ಆಗಿಲ್ಲ ಎಂದು ರಂಜನ್ ಅಭಿಪ್ರಾಯಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲ್ಲೂರಿಕೊಪ್ಪ ಮಾದಪ್ಪ ಮಾತನಾಡಿ, ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೂ ಮುನ್ನ ಗೋಪೂಜೆ ನೆರವೇರಿಸಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಅದಕ್ಕೂ ಮೊದಲು ಅವರು ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕಿತ್ತು. ಕಾಂಗ್ರೆಸ್ ಪಕ್ಷದ ಮುಖಂಡರು ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಇದು ಒಂದು ವರ್ಗವನ್ನು ಓಲೈಸುವ ತಂತ್ರವಾಗಿದೆ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಜಿ. ಮೇದಪ್ಪ, ಪಕ್ಷದ ಪ್ರಮುಖರಾದ ಎಂ.ಬಿ. ಅಭಿಮನ್ಯುಕುಮಾರ್, ವಿ.ಕೆ. ಲೋಕೇಶ್, ವಿ.ಎಂ. ವಿಜಯ, ಬಿ.ಜೆ. ದೀಪಕ್, ಭುವನೇಶ್ವರಿ, ಶನಿವಾರಸಂತೆ ಚುನಾವಣಾ ಉಸ್ತುವಾರಿ ಶ್ರೀನಿಧಿ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.