ಮಡಿಕೇರಿ, ಏ. ೨೩: ಹತ್ತು ಕುಟುಂಬ ಹದಿನೆಂಟ್ ಗೋತ್ರದ ಗೌಡ ಜನಾಂಗದ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ-ಪರಂಪರೆಗಳನ್ನು ಉಳಿಸಿ, ಬೆಳೆಸುವದಲ್ಲದೆ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಕೊಡಗು ಗೌಡ ಯುವ ವೇದಿಕೆಯ ಮುಂದಿನ ಸಾಲಿನ ಅಧ್ಯಕ್ಷರಾಗಿ ಪಾಣತ್ತಲೆ ಜಗದೀಶ್ ಮಂದಪ್ಪ ಆಯ್ಕೆಯಾಗಿದ್ದಾರೆ.

ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಮುಂದಿನ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಈ ಹಿಂದೆ ಉಪಾಧ್ಯಕ್ಷರಾಗಿದ್ದ ಜಗದೀಶ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರುಗಳಾಗಿ ಕೋಚನ ಅನೂಪ್ ಹಾಗೂ ಬಾಳಾಡಿ ಮನೋಜ್, ಕಾರ್ಯದರ್ಶಿಯಾಗಿ ಪುದಿಯನೆರವನ ರಿಶಿತ್ ಮಾದಯ್ಯ, ಖಜಾಂಚಿಯಾಗಿ ಮೂಲೆಮಜಲು ಮನೋಜ್ ಕುಮಾರ್ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ವೇದಿಕೆ ವತಿಯಿಂದ ಇದುವರೆಗೆ ನಡೆಸಲಾದ ಕಾರ್ಯಕ್ರಮಗಳ ಬಗ್ಗೆ ಪರಾಮಾರ್ಶೆ ಮಾಡಲಾಯಿತು. ಮುಂದಿನ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಲಾಯಿತು. ಕಾರ್ಯದರ್ಶಿ ಕಟ್ಟೆಮನೆ ರೋಶನ್, ಖಜಾಂಚಿ ನೆಯ್ಯಣಿ ಸಂಜು, ಕ್ರೀಡಾಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಗೌರವ ಸಲಹೆಗಾರರಾದ ಯಾಲದಾಳು ಹರೀಶ್ ಸೇರಿದಂತೆ ವಿವಿಧ ಉಪಸಮಿತಿಗಳ ಅಧ್ಯಕ್ಷರುಗಳು, ವೇದಿಕೆಯ ಸದಸ್ಯರುಗಳು ಪಾಲ್ಗೊಂಡಿದ್ದರು.

ಹಿAದಿನ ಸಾಲಿನ ಅಧ್ಯಕ್ಷ ಮನೋಹರ್ ಮಾದಪ್ಪ ನೂತನ ಅಧ್ಯಕ್ಷ ಜಗದೀಶ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.