ಕೊಡಗಿನ ಮಟ್ಟಿಗೆ ಅತೀ ಹೆಚ್ಚು ಮಠಗಳನ್ನು ಹೊಂದಿರುವ ಖ್ಯಾತಿ ಸೋಮವಾರಪೇಟೆ ತಾಲೂಕಿನದ್ದಾ ಗಿದ್ದು, ಅದರಲ್ಲೂ ಉತ್ತರ ಕೊಡಗಿ ನಲ್ಲಿ ೫ ಮಠಗಳು ನೆಲೆಯಾಗಿವೆ. ಇದರಲ್ಲಿ ಮುದ್ದಿನಕಟ್ಟೆ ಮಠವು ಭಕ್ತರ ಪಾಲಿನ ಶ್ರದ್ಧಾಕೇಂದ್ರವಾಗಿ ರೂಪುಗೊಂಡಿದ್ದು, ಪ್ರಸ್ತುತ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಶ್ರೀ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ.

ಕೊಡಗಿನ ಮಟ್ಟಿಗೆ ಇದೇ ಪ್ರಥಮ ಎಂಬAತೆ ಮಠಕ್ಕೆ ಸೇರಿದ ಜಾಗದಲ್ಲಿ ಸಂಸ್ಕೃತ, ವೇದ ಕಲಿಕೆಯೊಂದಿಗೆ ಜ್ಯೋತಿಷ್ಯ ಪಠಣಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನೂತನ ಶಾಲೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶನಿವಾರಸಂತೆ ಸಮೀಪದ ಮಾದ್ರೆಯಲ್ಲಿರುವ ಮುದ್ದಿನ ಕಟ್ಟೆ ಮಠವು ಕೊಡಗಿನ ರಾಜ ಮುದ್ದುವೀರ ರಾಜೇಂದ್ರ ಅವರ ಪೂರ್ಣ ಸಹಕಾರದಿಂದ ನಿರ್ಮಾಣಗೊಂಡಿದ್ದು, ಇಂದಿಗೂ ಭಕ್ತರ ಪಾಲಿಗೆ ಧಾರ್ಮಿಕ ಶ್ರದ್ಧಾಕೇಂದ್ರವಾಗಿ ನೆಲೆನಿಂತಿದೆ.

ಮೂಲತಃ ಉಜ್ಜೆöÊನಿ ಮರುಳಸಿದ್ಧೇಶ್ವರರು ಈ ಮಠದ ಸ್ಥಾಪಕರು. ನಂತರದ ದಿನಗಳಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಇಲ್ಲಿಗೆ ಬಂದು ಆಲದ ಮರದ ಕೆಳಗೆ ಇದ್ದ ಕಟ್ಟೆಯೊಂದರಲ್ಲಿ ಕುಳಿತು ಭಕ್ತರಿಗೆ ಆಶೀರ್ವಾದ, ಮಾರ್ಗದರ್ಶನ ಮಾಡುತ್ತಿದ್ದರು.

೧೬೦೯ರಲ್ಲಿ ಕೊಡಗಿನ ರಾಜರಾಗಿದ್ದ ಮುದ್ದುವೀರರಾಜೇಂದ್ರ ಅವರು ಇಲ್ಲಿಗೆ ಭೇಟಿ ನೀಡಿ ಸ್ವಾಮೀಜಿಯವರಲ್ಲಿ ತಮ್ಮ ಸಮಸ್ಯೆಯೊಂದನ್ನು ಹೇಳಿಕೊಂಡಿದ್ದರು. ಸ್ವಾಮೀಜಿಗಳಿಂದ ಸಮಸ್ಯೆಗೆ ಪರಿಹಾರವೂ ದೊರೆಯಿತು. ಇದರಿಂದ ಸಂತೋಷಗೊAಡ ರಾಜರು, ಏನಾದರೂ ಸಹಾಯ ಮಾಡುವ ಬಗ್ಗೆ ತಿಳಿಸಿದರು.

ಈ ಸಂದರ್ಭ ಮಠದ ಅಭಿವೃದ್ಧಿಯ ಬಗ್ಗೆ ಸ್ವಾಮೀಜಿ ಹೇಳಿದ್ದರಿಂದ ಸುಮಾರು ೯೪ ಎಕರೆ ಜಾಗವನ್ನು ಮಠಕ್ಕೆ ನೀಡಲಾಯಿತು. ಇದರೊಂದಿಗೆ ಮಠವನ್ನೂ ನಿರ್ಮಿಸಿಕೊಡಲಾಯಿತು. ಈ ಹಿಂದೆ ಕಟ್ಟೆಯಲ್ಲಿದ್ದ ಮಠವು ಮುದ್ದುವೀರ ರಾಜೇಂದ್ರ ಅವರಿಂದ ಕಾಯಕಲ್ಪಗೊಂಡ ಹಿನ್ನೆಲೆ ನಂತರ ಮುದ್ದಿನಕಟ್ಟೆ ಮಠವೆಂದು ನಾಮಾಂಕಿತಗೊAಡಿತು.

ಅAದು ರಾಜರು ನೀಡಿದ್ದ ೯೪ ಎಕರೆ ಜಾಗದ ಪೈಕಿ ಭಾರೀ ಪ್ರಮಾಣದ ಒತ್ತುವರಿಯಾಗಿದ್ದು, ಇದೀಗ ಕೇವಲ ೨೦ ಎಕರೆ ಜಾಗ ಮಾತ್ರ ಉಳಿದು ಕೊಂಡಿದೆ. ಪ್ರಸ್ತುತ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಕಳೆದ ೧೦ ವರ್ಷದಿಂದ ಶ್ರೀಮಠದ ಉಸ್ತುವಾರಿ ವಹಿಸಿಕೊಂಡಿದ್ದು, ಮಠವು ಹಂತಹAತವಾಗಿ ಅಭಿವೃದ್ಧಿ ಕಾಣುತ್ತಿದೆ.

ಮೂಲತಃ ಉತ್ತರ ಕರ್ನಾಟಕ ಬಿಜಾಪುರ ಜಿಲ್ಲೆಯವರಾದ ಶ್ರೀಗಳು, ಬಾಗಲಕೋಟೆಯ ಶಿವಯೋಗಿ ಮಂದಿರ, ಮೈಸೂರಿನ ಸುತ್ತೂರು ಮಠ, ಬೆಂಗಳೂರಿನ ಮಹಾಂತ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಹಿಂದಿ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಶಿವಾಚಾರ್ಯರು, ೨೦೧೩ರಲ್ಲಿ ನೊಣವಿನಕೆರೆ ಮಠಾಧೀಶರಿಂದ ಪಟ್ಟಾಧಿಕಾರ ಪಡೆದಿದ್ದಾರೆ.

ಮೈಸೂರಿನಲ್ಲಿರುವ ಶ್ರೀಸಿದ್ಧವೀರ ಶಿವಾಚಾರ್ಯರು ಶ್ರೀಮಠದ ಮೇಲುಸ್ತುವಾರಿಯಾಗಿದ್ದು, ಆಗಾಗ್ಗೆ ಮಠಕ್ಕೆ ಭೇಟಿ ನೀಡುತ್ತಿರುತ್ತಾರೆ. ಶ್ರೀಮಠದ ೯ನೇ ಸ್ವಾಮೀಜಿಗಳಾಗಿ ಕಳೆದ ೧೦ ವರ್ಷಗಳಿಂದ ಮಠವನ್ನು ಶಿವಾಚಾರ್ಯ ಸ್ವಾಮೀಜಿಗಳು ಮುನ್ನಡೆಸುತ್ತಿದ್ದು, ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ.

ಪ್ರಸ್ತುತ ಮಠಕ್ಕೆ ಸಂಬAಧಿಸಿ ದಂತೆ ೨೦ ಎಕರೆ ಆಸ್ತಿಯಿದ್ದು, ಇದರಲ್ಲಿ ತೋಟ, ಗದ್ದೆಯಿವೆ. ಉಳಿದ ಜಾಗದಲ್ಲಿ ಗೋಪಾಲನೆ ನಡೆಯುತ್ತಿದೆ. ಬಡ ವಿದ್ಯಾರ್ಥಿ ಗಳಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಶ್ರೀಮಠವು ಕಲ್ಪಿಸುತ್ತಿದೆ. ಭಕ್ತಾದಿಗಳಿಗೆ ನಿತ್ಯ ದಾಸೋಹವೂ ಇದೆ.

ಪ್ರತಿ ವರ್ಷ ಶ್ರೀಮಠದಲ್ಲಿ ಹಿರಿಯ ಗುರುಗಳ ಆರಾಧನಾ ಮಹೋತ್ಸವ, ವಾರ್ಷಿಕ ಕಾರ್ಯಕ್ರಮಗಳು, ಧನುರ್ ಮಾಸದ ವಿಶೇಷ ಪೂಜೆಗಳು, ಧಾರ್ಮಿಕ ಕಾರ್ಯಕ್ರಮಗಳು ಮಠದಿಂದ ನಡೆಯುತ್ತಿವೆ. ಜಿಲ್ಲೆಯ ಮಟ್ಟಿಗೆ ಪ್ರಥಮ ಎಂಬAತೆ ಶ್ರೀಮಠದಿಂದ ಸಂಸ್ಕೃತ, ವೇದ, ಜ್ಯೋತಿಷ್ಯ ಶಾಸ್ತçದ ಬಗ್ಗೆ ಅಧ್ಯಯನ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮಠದ ಜಾಗದಲ್ಲಿ ಸುಮಾರು ೫೦ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಬೃಹತ್ ವಿದ್ಯಾರ್ಥಿ ನಿಲಯ ನಿರ್ಮಾಣಗೊಳ್ಳುತ್ತಿದೆ. ಮುಂದಿನ ಒಂದು ವರ್ಷದೊಳಗೆ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡು ವಿದ್ಯಾರ್ಥಿಗಳ ಬಳಕೆಗೆ ಅವಕಾಶ ಕಲ್ಪಿಸಲು ಪ್ರಯತ್ನ ಸಾಗಿದೆ ಎಂದು ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದ್ದಾರೆ. ಮಠದ ಅಭಿವೃದ್ಧಿಗೆ ಶ್ರಮಿಸಿದ ದೊಡ್ಡ ಗುರು ಸಿದ್ಧಲಿಂಗ ಶಿವಾಚಾರ್ಯರ ಆರಾಧನೆ ನಡೆಯುತ್ತಿದೆ. ಮಠದ ಸ್ಥಾಪಕರಾದ ಮರುಳಸಿದ್ದ ಶಿವಾಚಾರ್ಯರ ಗದ್ದುಗೆಗೆ ನಿತ್ಯಪೂಜೆ, ಮಹಾಮಂಗಳಾರತಿ ನೇರವೇರುತ್ತಿದೆ.

ಶ್ರೀಮಠದಲ್ಲಿ ಗುರು ಮರುಳಸಿದ್ಧೇಶ್ವರರು, ಮಹಾಂತಲಿAಗ ಶಿವಾಚಾರ್ಯರು, ಚೆನ್ನಸಿದ್ಧ ಶಿವಾಚಾರ್ಯರು, ಸಿದ್ಧೇಶ್ವರ ಶಿವಾಚಾರ್ಯರು, ಶಿವಸಿದ್ಧ ಶಿವಾಚಾರ್ಯರು, ಸಿದ್ಧವೀರ ಶಿವಾಚಾರ್ಯರು, ಸಿದ್ಧಲಿಂಗ ಶಿವಾಚಾರ್ಯರು, ಶ್ರೀಗುರು ಸಿದ್ಧವೀರ ಶಿವಾಚಾರ್ಯರು ಸೇವೆ ಸಲ್ಲಿಸಿದ್ದಾರೆ. ಸಿದ್ಧವೀರ ಶಿವಾಚಾರ್ಯರ ಉತ್ತರಾಧಿಕಾರಿಯಾಗಿ ಬಂದಿರುವ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಜ್ಞಾನ, ಚಿಂತನೆ, ಧಾರ್ಮಿಕತೆಯೊಂದಿಗೆ ವೈಜ್ಞಾನಿಕತೆಯನ್ನೂ ಅಳವಡಿಸಿಕೊಂಡಿದ್ದು, ಭಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಶನಿವಾರಸಂತೆ ಪಟ್ಟಣದಿಂದ ಗಡಿಭಾಗವಾಗಿರುವ ಯಸಳೂರಿಗೆ ಸಾಗುವ ಮುಖ್ಯರಸ್ತೆಯಲ್ಲಿ ೩ ಕಿ.ಮೀ. ಕ್ರಮಿಸಿದರೆ ಎಡಭಾಗದಲ್ಲಿ ಮುದ್ದಿನಕಟ್ಟೆ ಮಠವಿದೆ. ಸುಂದರ ಮಲೆನಾಡು ಪ್ರದೇಶದ ಕಾಫಿ ತೋಟದ ನಡುವೆ ನೆಲೆಯಾಗಿರುವ ಶ್ರೀಮಠವು ನಿತ್ಯದಾಸೋಹ ದೊಂದಿಗೆ ಆಶ್ರಯ, ಜ್ಞಾನ ದಾಸೋಹದ ಕೇಂದ್ರವೂ ಆಗಿದೆ. ತಾಲೂಕು ಕೇಂದ್ರ ಸೋಮವಾರಪೇಟೆಯಿಂದ ೨೩ ಕಿ.ಮೀ., ಶನಿವಾರಸಂತೆಯಿAದ ೩, ಕೊಡ್ಲಿಪೇಟೆಯಿಂದ ೧೨ ಕಿ.ಮೀ. ಅಂತರದಲ್ಲಿದೆ. ಶ್ರೀಮಠಕ್ಕೆ ಶನಿವಾರಸಂತೆ ಮಾತ್ರವಲ್ಲದೇ ಯಸಳೂರು, ಕೊಡ್ಲಿಪೇಟೆ, ಮೈಸೂರು, ಮಂಗಳೂರು, ಬೆಂಗಳೂರು, ಹಾಸನ ಸೇರಿದಂತೆ ಹೊರ ರಾಜ್ಯ ದಿಂದಲೂ ಭಕ್ತರು ಆಗಮಿಸುತ್ತಾರೆ.

-ವಿಜಯ್ ಹಾನಗಲ್,

ಸೋಮವಾರಪೇಟೆ.