ಸಿದ್ದಾಪುರ, ಏ ೨೨: ಸ್ನೇಹಿತನ ತಾಯಿಯ ಅಂತ್ಯ ಸಂಸ್ಕಾರಕ್ಕೆ ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗುಹ್ಯ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಗುಹ್ಯ ಗ್ರಾಮದ ಪಳ್ಳಕೆರೆಯ ನಿವಾಸಿ ರಾಜೇಂದ್ರ (೩೨) ಎಂಬ ಯುವಕನೇ ಮೃತ ದುರ್ದೈವಿ.
ಗುಹ್ಯ ಗ್ರಾಮದ ಖಾಸಗಿ ತೋಟವೊಂದರಲ್ಲಿ ವಾಸವಾಗಿದ್ದ ಮಂಜುನಾಥ್ ಎಂಬವರ ತಾಯಿ ಶುಕ್ರವಾರದಂದು ಮೃತಪಟ್ಟಿದ್ದರು. ಅವರ ಅಂತ್ಯಸAಸ್ಕಾರ ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿನಲ್ಲಿ ನೆರವೇರಿತು. ಅಂತ್ಯಸAಸ್ಕಾರಕ್ಕೆ ಬಂದಿದ್ದ ಸ್ನೇಹಿತರ ಪೈಕಿ ನಾಲ್ವರು ಸಮೀಪದ ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ್ದಾರೆ. ಈ ಸಂದರ್ಭ ಮುಳುಗಿದ ರಾಜೇಂದ್ರ ನೀರು ಪಾಲಾಗಿದ್ದಾರೆ. ಈತನನ್ನು ರಕ್ಷಿಸಲು ಮುಂದಾದರೂ ಈತ ಕೈಗೆ ಸಿಗಲಿಲ್ಲ. ಸಾಕಷ್ಟು ಪ್ರಯತ್ನಪಟ್ಟರೂ ಈತನನ್ನು ರಕ್ಷಿಸಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳೀಯರ ಸಹಕಾರದಿಂದ ಶುಕ್ರವಾರ ರಾತ್ರಿ ಹಾಗೂ ಶನಿವಾರದಂದು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ದುಬಾರೆಯ ರ್ಯಾಫ್ಟಿಂಗ್ ದೋಣಿಗಳ ಮುಖಾಂತರ ಕಾರ್ಯಾಚರಣೆ ನಡೆಸಿ ರಾತ್ರಿಯ ತನಕ ನದಿಯಲ್ಲಿ ಹುಡುಕಾಡಿದರೂ ರಾಜೇಂದ್ರನ ಸುಳಿವು ದೊರೆತಿಲ್ಲ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ರಾಜೇಂದ್ರನು ಪತ್ನಿ ಹಾಗೂ ಈರ್ವರು ಮಕ್ಕಳನ್ನು ಅಗಲಿದ್ದಾರೆ.