*ಗೋಣಿಕೊಪ್ಪ, ಏ. ೨೩: ಹಸಿವು ಮುಕ್ತ ಚಿಂತನೆ ರಂಜಾನ್ ಉಪವಾಸ ಆಚರಣೆಯ ಮೂಲ ಉದ್ದೇಶದಲ್ಲಿದೆ ಎಂದು ಗೋಣಿಕೊಪ್ಪ ಹಿದಾಯತ್ ಮಸೀದಿ ಧರ್ಮಗುರು ಮೊಹಮ್ಮದ್ ಸಾಗಿರ್ ಹೇಳಿದರು.

ಶುಕ್ರವಾರ ಕೊಡಗು ಹಿಂದು ಮಲಯಾಳಿ ಸಮಾಜದ ಸಭಾಂಗಣದಲ್ಲಿ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ‘ನಮ್ಮ ದೇಶ ನಮ್ಮ ಸಂಸ್ಕೃತಿ ಕಾರ್ಯಕ್ರಮದಡಿ ಮುಸ್ಲಿಂ ಸಮುದಾಯದ ಪ್ರಮುಖರೊಂದಿಗೆ ಆಯೋಜಿಸಿದ್ದ ರಂಜಾನ್ ಆಚರಣೆ ಕಾರ್ಯಕ್ರಮದಲ್ಲಿ ಆಚರಣೆ ಬಗ್ಗೆ ಮಾಹಿತಿ ನೀಡಿದರು.

ಜಕಾತ್ ತತ್ವದೊಂದಿಗೆ ಉಳ್ಳವರು ಇಲ್ಲದವರಿಗೆ ದಾನ-ಧರ್ಮ ಮಾಡುವ ಉದ್ದೇಶ ಇದೆ. ಇದರಿಂದ ಹಸಿವು ಮುಕ್ತ ಸಮಾಜವನ್ನು ನಿರೀಕ್ಷಿಸುತ್ತೇವೆ. ಪ್ರವಾದಿ ಮೊಹಮ್ಮದ್ ಪೈಗಂಬರ್ ಕೂಡ ಇದನ್ನೇ ಸಮುದಾಯಕ್ಕೆ ಸಾರಿದ್ದಾರೆ. ಪರಸ್ಪರ ವಿಶ್ವಾಸದಿಂದ ಜೀವಿಸಲು ಆಚರಣೆಯಲ್ಲಿ ಪಾಲ್ಗೊಳ್ಳು ತ್ತೇವೆ. ಸಹಾನುಭೂತಿಯೊಂದಿಗೆ ಸಹೋದರತ್ವ ಹೆಚ್ಚಿಸಿಕೊಳ್ಳುವುದು, ಸಮಾನತೆ ಕಾಪಾಡುವ ಸಂದೇಶವನ್ನು ನೀಡುತ್ತಿದ್ದೇವೆ.

ಜಾತಿ, ಧರ್ಮ ಬಿಟ್ಟು ಕಟ್ಟಕಡೆಯ ವ್ಯಕ್ತಿಗೆ ಸಹಾಯ ಮಾಡುವುದರಲ್ಲಿ ನಾವು ದೇವರನ್ನು ಕಾಣುತ್ತೇವೆ. ೩೦ ದಿನ ಉಪವಾಸ ಮಾಡುವುದರಿಂದ ಹಸಿವಿನ ಅರಿವು ಹೆಚ್ಚಾಗುತ್ತದೆ. ಬೇರೆಯವರಿಗೆ ಸಹಾಯ ಮಾಡಬೇಕೆಂಬ ಮನಸ್ಸು ನಮ್ಮಲ್ಲಿ ಮೂಡುವಂತಾಗಿದೆ ಎಂದರು.

ಸಮುದಾಯದ ಹಿರಿಯರಾದ ಟಿ.ಕೆ. ಅಬ್ದುಲ್ ಸಮ್ಮದ್ ಮಾತನಾಡಿ, ಉಪವಾಸದಲ್ಲಿ ದೈವಿಕ ಚಿಂತನೆ ಅಡಗಿದ್ದು, ಸಮಾಜಕ್ಕೆ ಒಳಿತು ಬಯಸುವ ಉದ್ದೇಶದೊಂದಿಗೆ ಒಂದು ವರ್ಷ ಸಂಪಾದಿಸಿರುವ ಹಣದ ಶೇ. ೨.೫ ರಷ್ಟು ಭಾಗವನ್ನು ಹಸಿವು ಮುಕ್ತ ಅಥವಾ ಬಡವರ್ಗಕ್ಕೆ ದಾನವಾಗಿ ನೀಡುವ ಆಚರಣೆ ರಂಜಾನ್ ಹಬ್ಬದ ಭಾಗವಾಗಿದೆ. ಸಾಮಾಜಿಕ ಚಟುವಟಿಕೆಗೂ ವಿನಿಯೋಗಿಸುತ್ತೇವೆ. ಕಾಮ, ಕ್ರೋಧ, ಮದವನ್ನು ತ್ಯಜಿಸಲು ಉಪವಾಸ ಅವಕಾಶ ಮಾಡಿಕೊಟ್ಟಿದೆ ಎಂದರು.

ಸಮುದಾಯದ ಹಿರಿಯರಾದ ಎ.ಪಿ. ತನ್ವೀರ್ ಮಾತನಾಡಿ, ಮನುಷ್ಯತ್ವ ಉಳಿಸಿಕೊಳ್ಳಲು ರಂಜಾನ್ ಹಬ್ಬ ಸಹಕಾರವಾಗುತ್ತಿದೆ ಎಂದರು.

ಹಿರಿಯರಾದ ಎಂ.ಆರ್. ಸಮೀರ್, ಮೊಹಮ್ಮದ್ ಮಾತನಾಡಿ, ಉಪವಾಸ ಆರಂಭಿಸುವ ದಿನ ಚಂದ್ರನನ್ನು ನೋಡುತ್ತೇವೆ. ೩೦ ದಿನಗಳ ಉಪವಾಸ ನಂತರ ಮತ್ತೆ ಚಂದ್ರನನ್ನು ಕಣ್ತುಂಬಿಕೊAಡು ಉಪವಾಸ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದರು.

ಸAಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯಕ್ರಮ ಸಂಚಾಲಕ ಕೆ.ಬಿ. ಜಗದೀಶ್ ಜೋಡುಬೀಟಿ, ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಖಜಾಂಚಿ ವಿ.ವಿ. ಅರುಣ್‌ಕುಮಾರ್, ನಿರ್ದೇಶಕ ಸಿಂಗಿ ಸತೀಶ್, ಸದಸ್ಯರಾದ ಚೆಪ್ಪುಡೀರ ರೋಶನ್, ರೇಖಾ ಗಣೇಶ್ ಇದ್ದರು.