*ಗೋಣಿಕೊಪ್ಪ, ಏ. ೨೩: ವಿಶು ಆಚರಣೆ ಸಮಾನತೆಯ ಸಂಕೇತವಾಗಿದೆ ಎಂದು ಕೊಡಗು ಹಿಂದೂ ಮಲಯಾಳಿ ಸಮಾಜದ ಉಪಾಧ್ಯಕ್ಷ ಎಂ.ಎಸ್. ಸುಬ್ರಮಣಿ ಹೇಳಿದರು.

ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ‘ನಮ್ಮ ದೇಶ ನಮ್ಮ ಸಂಸ್ಕೃತಿ’ ಕಾರ್ಯಕ್ರಮದಡಿ ಮೈಸೂರಮ್ಮ ನಗರದ ಕೆ.ಎನ್. ಅಶೋಕ್ ನಿವಾಸದಲ್ಲಿ ಆಯೋಜಿಸಿದ್ದ ವಿಶು ಹಬ್ಬ ಆಚರಣೆಯಲ್ಲಿ ಹಬ್ಬದ ಬಗ್ಗೆ ಮಾಹಿತಿ ಹಂಚಿಕೊAಡರು. ವಿಶು ಎಂಬುವುದು ಸಂಸ್ಕೃತದಲ್ಲಿ ಸಮಾನತೆ ಅರ್ಥ ಹೊಂದಿದೆ. ಸೂರ್ಯ ಭಗವಾನ್ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಪಡೆಯುವ ಕಾಲವಾಗಿದೆ ಎಂದು ತಿಳಿಸಿದ ಅವರು ಹಬ್ಬದ ಆಚರಣೆ ಮಹತ್ವ ತಿಳಿಸಿದರು.

ಹಿರಿಯರಾದ ಕೆ.ಎನ್. ಅಶೋಕ್ ಮಾತನಾಡಿ, ವಿಶು ಹಬ್ಬ ಕುಟುಂಬದಲ್ಲಿ ಸಂಭ್ರಮಕ್ಕೆ ಕಾರಣವಾಗಲಿದೆ. ಹಿರಿಯರು ರೂಪಿಸಿದ ಆಚರಣೆಯನ್ನು ನಾವು ಮುಂದಿನ ಪೀಳಿಗೆಗೆ ಆಚರಣೆ ಮೂಲಕ ಮಾರ್ಗದರ್ಶನ ನೀಡುತ್ತಿದ್ದೇವೆ. ಹೊಸ ವರ್ಷವಾಗಿ ಚೈತನ್ಯದಿಂದ ಪಾಲ್ಗೊಳ್ಳುತ್ತೇವೆ. ಹಿರಿಯರಿಗೆ ಗೌರವ ಕೊಡುವುದು ಹಬ್ಬದ ವಿಶೇಷತೆಯಲ್ಲೊಂದು ಎಂದರು.

ಮಲಯಾಳಿ ಸಮುದಾಯದ ಬೇಬಿ, ಕೆ.ಎ. ಅಭಿಲಾಷ್, ಶಿಲ್ಪ, ವಿಹಾನ್, ನಿಖಿಲ್, ನಿತಿಶ್, ರತಿ ಪುರುಷೋತ್ತಮ್, ಕಾರ್ತಿಕ್ ಆಚರಣೆಯಲ್ಲಿ ಪಾಲ್ಗೊಂಡರು. ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಸಂಚಾಲಕ ವಿ.ವಿ. ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ನಿರ್ದೇಶಕ ದರ್ಶನ್ ದೇವಯ್ಯ, ಸಿಂಗಿ ಸತೀಶ್ ಇದ್ದರು.