ಕಣಿವೆ, ಏ. ೨೨: ಇವರು ಪೀಠೋಪಕರಣಗಳ ಮಳಿಗೆಯ ಮಾಲೀಕರು. ಹೆಸರು ಪರಮೇಶ್. ಕುಶಾಲನಗರ ಪಟ್ಟಣದಲ್ಲಿ ಯಾವ ರಸ್ತೆಗಳಲ್ಲೂ ಇಲ್ಲದಂತಹ ಹೊಂಗೆಯ ಗಿಡಗಳನ್ನು ತಮ್ಮ ಮಳಿಗೆಯ ಸುತ್ತಮುತ್ತ ನೆಟ್ಟು ನೀರು ಹಾಕಿ ಮರಗಳಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದರೆ ಕುಶಾಲನಗರದ ಕಲಾ ಭವನದ ರಸ್ತೆಯಲ್ಲಿ ಉದ್ದಕ್ಕೂ ಹೊಂಗೆಯ ಗಿಡಗಳನ್ನು ನೆಟ್ಟ ಪರಮೇಶ್ ಸ್ವತಃ ಇವರೇ ನೀರು ಹಾಕಿ ಬೆಳೆಸಿದ್ದರು. ಆ ಗಿಡಗಳು ಈಗ ಮರಗಳಾಗಿ ಹೊರಹೊಮ್ಮುವ ಮೂಲಕ ಇಡೀ ಸುತ್ತಲ ಪರಿಸರವನ್ನು ತಂಪು ತಂಪಾಗಿಸಿವೆ.
ಇದೀಗ ಕಾಡುತ್ತಿರುವ ಬಿರು ಬಿಸಿಲ ಬೇಗೆಯಿಂದ ತಮ್ಮ ವಾಹನಗಳನ್ನು ರಕ್ಷಿಸಿಕೊಳ್ಳಲು ಸುತ್ತಲಿನ ಬಹಳಷ್ಟು ಮಂದಿ ಇಲ್ಲಿನ ಮರಗಳ ನೆರಳಿನಲ್ಲಿ ಬಂದು ತಮ್ಮ ವಾಹನಗಳನ್ನು ನಿಲ್ಲಿಸುವ ಮೂಲಕ ಅವರೂ ಕೂಡ ಬಿಸಿಲ ಬೇಗೆಯಿಂದ ಒಂದಷ್ಟು ನಿಟ್ಟುಸಿರು ಬಿಡುತ್ತಿದ್ದಾರೆ.
ಈ ಪರಮೇಶ್ ಅವರ ಮಾದರಿಯಲ್ಲಿ ಊರಿನ ಇನ್ನಷ್ಟು ವರ್ತಕರು, ಅಂಗಡಿ ಮುಂಗಟ್ಟುಗಳ ಮಾಲೀಕರು ಹಾಗೂ ಪರಿಸರ ಹೋರಾಟಗಾರರು ಇಂತಹ ಜೀವ ವೈವಿಧ್ಯ ಗಿಡಗಳನ್ನು ನೆಟ್ಟು ಬೆಳೆಸುವತ್ತ ಮುಂದಾಗುವ ಮೂಲಕ ಹಚ್ಚ ಹಸಿರಿನ ಪರಿಸರವನ್ನು ನಿರ್ಮಿಸಲು ಪ್ರಾಮಾಣಿಕ ಯತ್ನದ ಅನಿವಾರ್ಯವಿದೆ. ಮನೆಗೊಂದು ಸಸಿ ನೆಡುವ ಮೂಲಕ ಊರನ್ನು ಸುಂದರವಾದ ಹಸಿರು ನಗರವಾಗಿ ಸಬೇಕಿದೆ. ವರದಿ: ಕೆ.ಎಸ್. ಮೂರ್ತಿ