ಮಡಿಕೇರಿ , ಏ. ೨೦ : ಮುಂಬರುವ ವಿಧಾನಸಭಾ ಚುನಾವಣೆ ಎದುರಿಸಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿರುವದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಡಾ. ಬಿ.ಸಿ. ಸತೀಶ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಆವರು; ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ೨೨ ಅಭ್ಯರ್ಥಿಗಳು ಒಟ್ಟು ೩೧ ನಾಮಪತ್ರ ಸಲ್ಲಿಸಿದ್ದಾರೆ. ವೀರಾಜಪೇಟೆ ಕ್ಷೇತ್ರದಲ್ಲಿ ೧೦ ಮಂದಿ ಒಟ್ಟು ೧೨ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ತಾ. ೨೧ ರಂದು (ಇಂದು) ನಾಮಪತ್ರಗಳ ಪರಿಶೀಲನೆ ನಡೆಯಲಿದೆ ಎಂದು ತಿಳಿಸಿದರು.

ಭದ್ರತಾ ಕೊಠಡಿಯಲ್ಲಿ ಯಂತ್ರ

ಮತದಾನ ಪ್ರಕ್ರಿಯೆ ಇವಿಎಂ ಯಂತ್ರಗಳ ಮೂಲಕ ನಡೆಯಲಿದ್ದು, ಈಗಾಗಲೇ ಯಂತ್ರಗಳು ಬಂದಿದ್ದು ಅವುಗಳ ಪರಿಶೀಲನಾ ಕಾರ್ಯ ಪೂರ್ಣಗೊಳಿಸಿ ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದೆ. ವೀರಾಜಪೇಟೆ ಕ್ಷೇತ್ರಕ್ಕೆ ಸಂಬAಧಿಸಿದAತೆ ಅಲ್ಲಿನ ಸರಕಾರಿ ಪದವಿ ಪೂರ್ವಕಾಲೇಜಿನಲ್ಲಿ ಭದ್ರತಾ ಕೊಠಡಿ ತೆರೆಯಲಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಸಂತ ಜೋಸೇಫರ ಶಾಲೆಯಲ್ಲಿ ಕೊಠಡಿ ತೆರೆಯಲಾಗಿದ್ದು, ಪೊಲೀಸ್ ಭದ್ರತೆಯೊಂದಿಗೆ ಮತಯಂತ್ರಗಳನ್ನು ಇರಿಸಲಾಗಿದೆ ಎಂದು ತಿಳಿಸಿದರು.

ಅಧಿಕಾರಿಗಳಿಗೆ ತರಬೇತಿ

ಜಿಲ್ಲೆಯಲ್ಲಿ ಒಟ್ಟು ೫೪೨ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಮತಗಟ್ಟೆ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಈಗಾಗಲೇ ಎರಡು ಹಂತದ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೂರನೇ ಹಂತದ ತರಬೇತಿ ನೀಡಲಾಗುವದು. ನಂತರ ಮತಯಂತ್ರಗಳ ಸಹಿತ ಮತಗಟ್ಟೆಗಳಿಗೆ ಕಳುಹಿಸಿಕೊಡಲಾಗುವದು ಎಂದು ಹೇಳಿದರು.

ವೀಕ್ಷಕರ ಆಗಮನ

ಚುನಾವಣೆ ಪ್ರಕ್ರಿಯೆ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಈಗಾಗಲೇ ಮೂವರು ವೀಕ್ಷಕರುಗಳನ್ನು ನೇಮಕ ಮಾಡಿದ್ದು, ಅವರುಗಳು ಜಿಲ್ಲೆಗೆ ಆಗಮಿಸಿದ್ದಾರೆ. ಲೆಕ್ಕಪರಿಶೋಧನೆ, ಸಾಮಾನ್ಯ ಹಾಗೂ ಪೊಲೀಸ್ ವೀಕ್ಷಕರುಗಳು ಆಗಮಿಸಿದ್ದು, ಜಿಲ್ಲಾ ಕೇಂದ್ರದಲ್ಲಿ ಕಚೇರಿ ತೆರೆದಿದ್ದಾರೆ. ಏನಾದರೂ ದೂರು, ಸಮಸ್ಯೆಗಳಿದ್ದಲ್ಲಿ ಅವರುಗಳನ್ನು ಸಂಪರ್ಕಿಸಬಹುದಾಗಿ ತಿಳಿಸಿದರು.

ಸಿಸಿ ಕ್ಯಾಮರಾ ನಿಗಾ

ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಬೇಕಾಗಿದೆ. ಸಿಸಿ ಕ್ಯಾಮರಾ ಅಥವಾ ಲ್ಯಾಪ್‌ಟಾಪ್‌ಗಳ ಮೂಲಕ ನಿಗಾ ವಹಿಸಬೇಕಾಗಿದೆ. ಮತದಾನ ಕೇಂದ್ರದಲ್ಲಿನ ಆಗು ಹೋಗುಗಳ ಬಗ್ಗೆ ಗಮನವಿರಿಸಲಾಗುವದು. ಇದನ್ನು ಲಿಂಕ್ ಬಳಸಿ ಯಾರೂ ಬೇಕಾದರೂ ವೀಕ್ಷಿಸಬಹುದಾಗಿದೆ. ಮತದಾನ ಮಾಡುವ ಪ್ರಕ್ರಿಯೆಯನ್ನು ಕಾಣಿಸದಂತೆ ಮರೆಮಾಚಿ ಇನ್ನುಳಿದ ಪ್ರಕ್ರಿಯೆಗಳನ್ನು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

(ಮೊದಲ ಪುಟದಿಂದ)

ಅಕ್ರಮ ಹಣ-ಗಾಂಜಾ ವಶ

ಚುನಾವಣಾ ಅಕ್ರಮ ತಡೆಗಟ್ಟುವ ಸಂಬAಧ ತಪಾಸಣಾ ಕೇಂದ್ರದಲ್ಲಿ ಪೊಲೀಸರು, ಅಬಕಾರಿ ಇಲಾಖೆ ಹಾಗೂ ಚುನಾವಣಾ ಅಧಿಕಾರಿಗಳು ಒಟ್ಟು ರೂ. ೨೫,೫೨,೩೫೨ ಹಣ ವಶಪಡಿಸಿಕೊಂಡಿದ್ದು, ಸರಿಯಾದ ದಾಖಲೆ ಹಾಜರುಪಡಿಸಿದ ರೂ.೧೭೨೦೧೮೨ ರಷ್ಟನ್ನು ಹಿಂತಿರುಗಿಸಲಾಗಿದೆ. ರೂ.೮೩೨೩೫೦ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಇದರೊಂದಿಗೆ ರೂ.೪೪೨೦೫೯೮ ಮೊತ್ತದ ಅಕ್ರಮ ಮದ್ಯ ಹಾಗೂ ರೂ.೨೧೨೦೦೦ಮೊತ್ತದ ಗಾಂಜಾ ಹಾಗೂ ಮಾದಕ ವಸ್ತುಗಳು, ರೂ.೧೫೦೦೦೦ ಮೊತ್ತದ ಸೀರೆಗಳನ್ನು ವಶಪಡಿಸಿಕೊಂಡಿರುವದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಂಜುAಡೇಗೌಡ ಇದ್ದರು.