ವಿಶೇಷ ವರದಿ:

ಪುತ್ತರಿರ ಕರುಣ್ ಕಾಳಯ್ಯ

ಚೆಟ್ಟಳ್ಳಿ, ಏ. ೨೦: ಅಬ್ಬಬ್ಬಾ.. ಅದೊಂದು ದಿನದ ಸಂಭ್ರಮವೇ ಬೇರೆ. ಹುಲಿವೇಷ... ಪಿಲ್ಲ್ ಭೂತಾ.. ಬಂಡ್‌ಕಳಿ.., ಜೋಯಿಚೂಳೆ... ನರಿಮಂಗಲ.. ಕೋಡಂಗಿ.. ತಾಲಿಪಾಟ್, ಪುರುಷರು ಮಹಿಳೆಯರ ವೇಷ.. ವಿವಿಧ ವೇಷಭೂಷಣದೊಂದಿಗೆ ಕೊಡಗಿನ ಬೋಡ್ ನಮ್ಮೆಯ ಸಾಂಪ್ರದಾಯಿಕ ವೈಭವವೇ ಬೇರೆ..

ಕೊಡಗಿನ ಮಣ್ಣಿನಲ್ಲಿ ಇದೀಗ ಎಲ್ಲೆಡೆ ದೇವರ ಉತ್ಸವದ ಆಚರಣೆ ಸಡಗರ. ತಮ್ಮ ಕೆಲಸ ಕಾರ್ಯವನ್ನೆಲ್ಲ ಬದಿಗಿಟ್ಟು ಊರಿನ ದೇವಾಲಯದ ಕಟ್ಟು ಪಾಡಿನಂತೆ ನಡೆಯುತ್ತಾ ಉತ್ಸವದಲ್ಲಿ ತೊಡಗಿಸಿಕೊಳ್ಳುವ ಸಮಯ. ಈ ಉತ್ಸವದೊಂದಿಗೆ ಸಾಂಪ್ರದಾಯಿಕ ಬೋಡ್ ನಮ್ಮೆಯು ಒಂದಾಗಿದೆ. ಉತ್ತರ ಕೊಡಗಿನಲ್ಲಿ ಜಿಂಕೆ ಕೊಂಬಿನ ಕೊಂಬಾಟ್, ಪೀಲಿಯಾಟ್, ಚೌರಿಯಾಟ್ ಉತ್ಸವದಲ್ಲಿ ಮರೆಗು ನೀಡಿದರೆ. ದಕ್ಷಿಣ ಕೊಡಗಿನಲ್ಲಿ ಬೋಡ್ ನಮ್ಮೆಯದ್ದೇ ಮತ್ತೊಂದು ವಿಶೇಷ. ಬಗೆಬಗೆಯ ವೇಷಧಾರಿಗಳು ಹಾಡು, ನೃತ್ಯ, ದುಡಿಕೊಟ್ಟ್, ದೋಳ್, ತಾಲಿಪಾಟ್ ವಾಲಗ.. ಇತ್ಯಾದಿ ಸಂಭ್ರಮೋಲ್ಲಾಸದೊAದಿಗೆ ಜರುಗಲಿದೆ. ಆಯಾಯ ಊರಿನ ಭದ್ರಕಾಳಿ ದೇವಾಲಯದ ಪುರಾತನ ಧಾರ್ಮಿಕ ಕಟ್ಟುಪಾಡಿಗೆ ಒಳಪಟ್ಟಂತೆ ಸಂಪ್ರದಾಯ ಆಚರಣೆಗಳು ವಿಭಿನ್ನವಾಗಿ ಕಂಡುಬರುತ್ತಿದೆ.

ಧಾರ್ಮಿಕ ಬುಡಕಟ್ಟು ಸಂಪ್ರದಾಯದ ಬೋಡ್ ನಮ್ಮೆಯಲ್ಲಿ ಮೈಯೆಲ್ಲ ಬಣ್ಣ ಬಳಿದುಕೊಂಡಿರುವ ಹುಲಿವೇಷಧಾರಿಗಳು, ಕೆಸರನೆಲ್ಲ್ಲ ಮೈಗೆ ಹಚ್ಚಿಕೊಂಡಿರುವ ಬಂಡ್‌ಕಳಿ, ಭತ್ತದ ಹುಲ್ಲನ್ನು ಮೈಗೆ ಸುತ್ತಿಕೊಂಡಿರುವ ಪಿಲ್ಲ್ಭೂತ, ಜೋಯಿಚೂಳೆ ಗಮನ ಸೆಳೆಯುತ್ತವೆ. ಸಾಂಪ್ರದಾಯಿಕ ದೋಳಿನ ಹಾಡಿನೊಂದಿಗೆ ಚಿಕ್ಕವ್ವ ಜೋಗಿ ಊರಿನ ಮನೆಮನೆಗಳಿಗೆ ತೆರಳಿದ ನಂತರ ವಿವಿಧ ವೇಷಧಾರಿ ಗಳು ಧನ ಧಾನ್ಯಗಳನ್ನು ಬೇಡಿ ಪಡೆಯುತಾ ದೇವನೆಲೆಯಲ್ಲಿ ಅರ್ಪಿಸಿ ಹರಕೆಯನ್ನು ತೀರಿಸುವುದು ಈ ಬೋಡ್‌ನಮ್ಮೆ ಎನಿಸಿಕೊಂಡಿದೆ. ಕೆಲವೆಡೆ ಬೋಡ್ ಹಬ್ಬದಂದೇ ಶೃಂಗರಿಸಿದ ಬಿದಿರಿನ ಕುದುರೆ ಯೊಂದಿಗಿನ ವಿಶೇಷ ಆಚರಣೆ ನಡೆದರೆ ಮತ್ತೆ ಕೆಲವೆಡೆ ಒಂದು ದಿನದ ಮುಂಚಿತವಾಗಿ ಬಿದಿರ ಕುದುರೆಯ ಆಚರಣೆ ನಡೆಯಲಿದೆ.

ಈಗಾಗಲೇ ಕುತ್ತ್ನಾಡ್, ಕುಟ್ಟಂದಿ, ಬಿ. ಶೆಟ್ಟಿಗೇರಿ, ಚೀಣಿವಾಡ ದಲ್ಲಿ ಬೋಡ್‌ನಮ್ಮೆ ಮುಕ್ತಾಯ ಗೊಂಡಿದೆ. ಮುಂದಿನ ತಿಂಗಳಲ್ಲಿ ಬರುವ ಬೋಂದತ್‌ಬೋಡ್, ನಾಂಗಾಲಬೋಡ್, ಹಳ್ಳಿಗಟ್ಟ್ ಬೋಡ್ ಇನ್ನು ಹಲವೆಡೆ ಬೋಡ್ ನಮ್ಮೆಯ ಧಾರ್ಮಿಕ ಆಚರಣೆಗೆ ತಯಾರಿ ನಡೆಯುತ್ತಿದೆ. ಕೆಲವೆಡೆ ಎರಡು ವರ್ಷಕೊಮ್ಮೆ ನಡೆದರೆ ಮತ್ತೆ ಕೆ¯ವೆಡೆ ಮೂರು ವರ್ಷಕೊಮ್ಮೆ ಬೋಡ್‌ನಮ್ಮೆ ನಡೆಯಲಿದೆ.

ದೊಡ್ಡದಾಡ ಊರಿನ ವ್ಯಾಪ್ತಿ ಹೊಂದಿರುವ ಹೆಚ್ಚಿನ ಜನಾಕ ರ್ಷಣೆಯ ಚೆಂಬೆಬೆಳ್ಳೂರು ಬೋಡ್ ನಮ್ಮೆ ಆಚರಣೆಯೇ ಮತ್ತೊಂದು ವಿಶೇಷ. ಊರಿನವರು ಮೊದಲು ಊರಿನ ಅಂಬಲದಲ್ಲಿ ಸೇರಿ ಚೀರುಳ್ಳಿ ಅಂಬಲಕ್ಕೆ ಬಂದು ತೆರೆಕಟ್ಟಿ ದೇವರ ಮೊಗದೊಂದಿಗೆ ದೇವರ ನೆಲೆಗೆ ತರುವ ಮೂಲಕ ಹಬ್ಬದ ಆಚರಣೆ ಪ್ರಾರಂಭವಾಗುವುದು. ತಾ. ೧೪ ರಂದು ಹಬ್ಬಕಟ್ಟು ಹಾಕಲಾಯಿತು. ತಾ. ೨೧ ರಂದು ಪಟ್ಟಣಿ, ತಾ. ೨೨ ರಂದು ಕುದುರೆ, ತಾ. ೨೩ರ ಭಾನುವಾರ ಬೋಡ್ ನಮ್ಮೆ, ತಾ. ೨೪ಕ್ಕೆ ಚೂಳೆನಮ್ಮೆ ನಡೆಯಲಿದೆ. ಊರಿನವರಲ್ಲದೆ ಸಾವಿರಾರು ಭಕ್ತರು ಬೋಡ್‌ನಮ್ಮೆಗೆ ಪ್ರತೀ ವರ್ಷ ಸಾಕ್ಷಿಯಾಗುವರು.

ಕುಂದತ್ ಬೊಟ್ಟ್ಲ್ ನೇಂದಕುದ್‌ರೆ ಪಾರಣಮಾನಿಲ್ ಅಳ್‌ಂಜ ಕುದ್‌ರೆ ಎಂಬ ಪುರಾತನ ನಾಲ್ನುಡಿಯಂತೆ ಕುಂದಬೆಟ್ಟದಲ್ಲಿ ಸಂಕ್ರಮಣದ ಮರುದಿನ ಮೊದಲ ಬೋಡ್ ನಮ್ಮೆ ನಡೆದರೆ ಪಾರಾಣಬೋಡ್ ನಮ್ಮೆಯಲ್ಲಿ ಹಸಿಬಿದಿರಿನಿಂದ ತಯಾರಿಸಿದ ಕೃತಕ ಕುದುರೆ ಹಾಗೂ ಆನೆಯನ್ನು ಸಂಹಾರ ಮಾಡಲಾಗುವುದು. ಪ್ರತೀ ವರ್ಷದಂತೆ ಇದೇ ಮೇ ತಿಂಗಳ ಕೊನೆಯಲ್ಲಿ ಹಾಗೂ ಜೂನ್ ತಿಂಗಳ ಮೊದಲ ದಿನವೇ ಹಲವು ಉತ್ಸವದ ಆಚರಣೆಯೊಂದಿಗೆ ಬೋಡ್‌ನಮ್ಮೆ ನಡೆದು ಕೊಡಗಿನ ಕೊನೆಯ ಬೋಡ್ ನಮ್ಮೆಯಾಗಲಿದೆ.

ಪೊದಕೇರಿ, ಕಂಡAಗಾಲ, ರುದ್ರಗುಪ್ಪೆ ಹಾಗೂ ಪೆಗ್ಗರಿಮಾಡು ಸೇರುವ ಪುರಾಣ ಪ್ರಸಿದ್ಧ ಬೇರಳಿ ನಾಡ್ ಪಾರಾಣಬೋಡ್ ವಿಶೇಷ ವಾಗಿದೆ. ವಿಶೇಷ ವೇಷ ದಾರಿಗಳ ಕೆಸರೆರೆಚಾಟ, ಆಕರ್ಷಣೀಯ ಕೃತಕ ಕುದುರೆ ಹಾಗೂ ಆನೆಯ ಆಕೃತಿಯೊಂದಿಗೆ ಪಾರಣ ಮಾನಿ ಯಲ್ಲಿ ಹೆಜ್ಜೆಹಾಕಿ ಕುಣಿಯವುದನ್ನು ನೋಡುವದೇ ಒಂದು ವಿಶೇಷತೆ.