ಕುಶಾಲನಗರ, ಏ. ೨೧: ಕುಶಾಲನಗರ ಟೈಕೂನ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ೧೫ ದಿನಗಳ ಕಾಲ ನಡೆದ ಹಾಕಿ ಮತ್ತು ಅಥ್ಲೆಟಿಕ್ ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಾತನಾಡಿದ ಕ್ಲಬ್ ಕಾರ್ಯದರ್ಶಿ ಬಿ.ಟಿ. ಪೂರ್ಣೇಶ್, ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಹಾಕಿ ಮತ್ತು ಅಥ್ಲೆಟಿಕ್ಸ್ ತರಬೇತಿಯಲ್ಲಿ ೫೦ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತ ನಾಡಿದ ದೈಹಿಕ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಪ್ರಭಾಕರ್, ಶಾಲಾ ರಜಾ ದಿನಗಳ ಅವಧಿಯನ್ನು ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಶಿಬಿರಾರ್ಥಿಗಳು ಸದುಪಯೋಗಪಡಿಸಿ ಕೊಂಡಿರುವುದು ಶ್ಲಾಘನೀಯ ಅಂಶವಾಗಿದೆ. ಇತ್ತೀಚಿನ ದಿನಗಳಲ್ಲಿ ಅನವಶ್ಯಕ ಮೊಬೈಲ್ ಬಳಸುವ ಮೂಲಕ ಸಮಯದ ದುರ್ಬಳಕೆ ಆಗುತ್ತಿದೆ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತನೆ ಹರಿಸಬೇಕಾಗಿದೆ ಎಂದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಕ್ಲಬ್ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಜಗದೀಶ್, ಸ್ಥಳೀಯ ಉದ್ಯಮಿ ಎಸ್.ಕೆ. ಸತೀಶ್, ಪ್ರವೀಣ್, ಮುತ್ತಣ್ಣ ಶಿಕ್ಷಕರಾದ ಬೊಮ್ಮಯ್ಯ, ರೋಟರಿ ಅಧ್ಯಕ್ಷ ಉಲ್ಲಾಸ್, ಕ್ಲಬ್ ಸಹ ಕಾರ್ಯದರ್ಶಿ ಜಿ.ಎಸ್. ಚಂದ್ರಶೇಖರ್, ಖಜಾಂಚಿ ನಂದ, ನಿರ್ದೇಶಕರು ಇದ್ದರು.