ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ
ಕನಕಪುರ, ಏ. ೨೦: ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರದಿಂದ ಅವರ ಸಹೋದರ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದರು. ಡಿ.ಕೆ.ಶಿ. ನಾಮಪತ್ರ ತಿರಸ್ಕೃತಗೊಳ್ಳುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಕನಕಪುರದಿಂದ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇದು ಅಚ್ಚರಿಗೆ ಕಾರಣವಾಗಿದೆ. ಡಿ.ಕೆ. ಶಿವಕುಮಾರ್ ಮೇಲಿರುವ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಸಿಬಿಐಗೆ ಡಿಕೆಶಿ ಸಮರ್ಪಕ ದಾಖಲೆ ನೀಡಿಲ್ಲ ಹಾಗೂ ತಪ್ಪು ದಾಖಲೆ ನೀಡಿದ್ದಾರೆ ಎಂದು ಸಿಬಿಐ ಕೋರ್ಟ್ಗೆ ತಿಳಿಸಿತ್ತು. ವಿಚಾರಣೆ ನಡೆಸಿ ಕೋರ್ಟ್ ತನಿಖೆಗೆ ಸೂಚಿಸಿದ ಹಿನ್ನೆಲೆ ನಾಮಪತ್ರ ತಿರಸ್ಕೃತಗೊಳ್ಳುವ ಭೀತಿಯಲ್ಲಿ ಕಾಂಗ್ರೆಸ್ ಕೊನೆಘಳಿಗೆಯಲ್ಲಿ ಡಿ.ಕೆ. ಸುರೇಶ್ ಅವರಿಂದ ನಾಮಪತ್ರ ಸಲ್ಲಿಸಿದ್ದಾರೆ.
ಪ್ರೀತಂ ಗೌಡ ಪತ್ನಿ ಉಮೇದುವಾರಿಕೆ
ಹಾಸನ, ಏ. ೨೦: ಹಾಸನದ ರಾಜಕಾರಣದಲ್ಲಿ ಮತ್ತೆ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಹಾಸನ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರೀತಂ ಗೌಡ ಅವರ ಪತ್ನಿ ಕಾವ್ಯಾ ಅವರು ನಾಮಪತ್ರ ಸಲ್ಲಿಸಿದ್ದಾರೆ. ಪ್ರೀತಂ ಗೌಡರ ಪತ್ನಿ ಕಾವ್ಯಾ ಅವರು ಇಂದು ಬೆಳಿಗ್ಗೆ ಹಾಸನದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪತಿ ಈಗಾಗಲೇ ಅಭ್ಯರ್ಥಿಯಾಗಿರುವಾಗ ಕ್ಷೇತ್ರದಲ್ಲಿ ಏಕೆ ನಾಮಪತ್ರ ಸಲ್ಲಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಬಿಜೆಪಿಯ ಮೂಲಗಳ ಪ್ರಕಾರ, ಪರಿಶೀಲನೆಯ ಸಮಯದಲ್ಲಿ ಪ್ರೀತಂ ಅವರ ನಾಮಪತ್ರ ತಿರಸ್ಕೃತಗೊಂಡರೆ, ಮುಂಜಾಗ್ರತಾ ಕ್ರಮವಾಗಿ ಕಾವ್ಯಾ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹತ್ಯಾಕಾಂಡ ಪ್ರಕರಣ:೬೭ ಆರೋಪಿಗಳು ಖುಲಾಸೆ
ಅಹಮದಾಬಾದ್, ಏ. ೨೦: ಗುಜರಾತಿನ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕಿ ಮಾಯಾ ಕೊಡ್ನಾನಿ ಮತ್ತು ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿ ಸೇರಿದಂತೆ ಎಲ್ಲಾ ೬೭ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ೨೦೦೨ರಲ್ಲಿ ನಡೆದಿದ್ದ ಕೋಮು ಹಿಂಸಾಚಾರದಲ್ಲಿ ಮುಸ್ಲಿಂ ಸಮುದಾಯದ ೧೧ ಮಂದಿಯನ್ನು ಹತ್ಯೆಗೈಯಲಾಗಿತ್ತು. ಪ್ರಕರಣದಲ್ಲಿ ಒಟ್ಟು ೮೬ ಆರೋಪಿಗಳಿದ್ದು, ಅವರಲ್ಲಿ ೧೮ ಮಂದಿ ಮಧ್ಯಂತರದಲ್ಲಿ ಸಾವನ್ನಪ್ಪಿದ್ದಾರೆ. ಆರೋಪಿಗಳು ಐಪಿಸಿ ಸೆಕ್ಷನ್ ೩೦೨ (ಕೊಲೆ), ೩೦೭ (ಕೊಲೆಗೆ ಯತ್ನ), ೧೪೩ (ಕಾನೂನುಬಾಹಿರ ಸಭೆ), ೧೪೭ (ಗಲಭೆ), ೧೪೮ (ಮಾರಕ ಆಯುಧಗಳಿಂದ ಶಸ್ತçಸಜ್ಜಿತವಾದ ಗಲಭೆ), ೧೨೦ (ಬಿ) (ಕ್ರಿಮಿನಲ್ ಪಿತೂರಿ) ೧೫೦ (ಕೋಮು ಹಿಂಸಾಚಾರಕ್ಕೆ ಪ್ರಚೋದನೆ) ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದರು. ಎಸ್‌ಐಟಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಸ್.ಕೆ. ಬಾಕ್ಸಿ ನ್ಯಾಯಾಲಯ ಗುರುವಾರ ೬೮ ಆರೋಪಿಗಳ ವಿರುದ್ಧ ತೀರ್ಪು ಪ್ರಕಟಿಸಿದೆ. ಫೆಬ್ರವರಿ ೨೭, ೨೦೦೨ ರಂದು ಗೋಧ್ರಾದಲ್ಲಿ ಸಾಬರಮತಿ ಎಕ್ಸ್ಪ್ರೆಸ್‌ನ ಎಸ್ -೬ ಕೋಚ್‌ಗೆ ಬೆಂಕಿ ಹಚ್ಚಿದ್ದರಿಂದ ೫೮ ಜನರು, ಬಹುತೇಕವಾಗಿ ಅಯೋಧ್ಯೆ ಯಿಂದ ಮರಳುತ್ತಿದ್ದ ಕರಸೇವಕರು ಸಾವನ್ನಪ್ಪಿದ್ದರು. ಮಾರನೇ ದಿನ ಅಹಮದಾಬಾದ್ ನಗರದ ನರೋಡಾ ಗಾಮ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ೧೧ ಮಂದಿಯನ್ನು ಕೊಂದು ಹಾಕಲಾಗಿತ್ತು.
ಹೊತ್ತಿ ಹುರಿದ ಭಾರತೀಯ ಸೇನಾ ವಾಹನ
ಜಮ್ಮು, ಏ. ೨೦: ಜಮ್ಮು ಕಾಶ್ಮೀರದ ಪೂಂಜ್‌ನಲ್ಲಿ ಬೆಂಕಿ ತಗುಲಿ ಭಾರತೀಯ ಸೇನಾ ವಾಹನ ಹೊತ್ತಿ ಹುರಿದಿದ್ದು ಇಬ್ಬರು ಸೇನಾ ಯೋಧರು ಹುತಾತ್ಮರಾಗಿದ್ದಾರೆ. ವರದಿಗಳ ಪ್ರಕಾರ, ಪೂಂಚ್-ಜಮ್ಮು ಹೆದ್ದಾರಿಯಲ್ಲಿ ಸೇನಾ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಟ್ರಕ್‌ನಲ್ಲಿದ್ದ ಇಬ್ಬರು ಯೋಧರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹುತಾತ್ಮರಾಗಿದ್ದಾರೆ. ಇದರೊಂದಿಗೆ ಯೋಧರ ವಾಹನಕ್ಕೆ ಬೆಂಕಿ ತಗುಲಿದ ಹಿಂದೆ ಭಯೋತ್ಪಾದಕರ ಸಂಚು ಇದೆಯೋ ಅಥವಾ ಅಪಘಾತವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿಕ್ಕಿರುವ ಮಾಹಿತಿಯ ಪ್ರಕಾರ, ಪೂಂಚ್-ಜಮ್ಮು ರಾಷ್ಟಿçÃಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಸೇನಾ ವಾಹನದಲ್ಲಿ ಭಾರಿ ಬೆಂಕಿ ಕಾಣಿಸಿ ಕೊಂಡಿದೆ. ಇಲ್ಲಿಯವರೆಗೆ ಈ ಅಪಘಾತದಲ್ಲಿ ಇಬ್ಬರು ಸೇನಾ ಯೋಧರು ಹುತಾತ್ಮರಾದ ಸುದ್ದಿ ಮುನ್ನೆಲೆಗೆ ಬಂದಿದೆ. ಆದರೆ, ಹುತಾತ್ಮ ಯೋಧರ ಗುರುತು ಇನ್ನೂ ಪತ್ತೆಯಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಪೂಂಚ್-ಜಮ್ಮು ರಾಷ್ಟಿçÃಯ ಹೆದ್ದಾರಿಯ ಭಟದುಡಿಯನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ವಿಮಾನ ನಿಲ್ದಾಣದಲ್ಲಿ ಅಮೃತ್‌ಪಾಲ್ ಸಿಂಗ್ ಪತ್ನಿ ಬಂಧನ
ಅಮೃತಸರ, ಏ. ೨೦: ತೀವ್ರಗಾಮಿ ಬೋಧಕ ಅಮೃತಪಾಲ್ ಸಿಂಗ್ ಅವರ ಪತ್ನಿ ಕಿರಣ್‌ದೀಪ್ ಕೌರ್ ಅವರು ಲಂಡನ್‌ಗೆ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ವಲಸೆ ಅಧಿಕಾರಿಗಳು ಇಲ್ಲಿನ ಶ್ರೀ ಗುರು ರಾಮ್ ದಾಸ್ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಆಕೆಯನ್ನು ವಲಸೆ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಸಿಂಗ್ ಈ ವರ್ಷದ ಫೆಬ್ರವರಿಯಲ್ಲಿ ಯುಕೆ ಮೂಲದ ಎನ್‌ಆರ್‌ಐ ಕೌರ್ ಅವರನ್ನು ವಿವಾಹವಾಗಿದ್ದರು. ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಪಂಜಾಬ್ ಪೊಲೀಸ್ ಅಧಿಕಾರಿಗಳು ನಿರಾಕರಿಸಿದರು. ವರ್ಗಗಳ ನಡುವೆ ವೈಮನಸ್ಸು ಹರಡುವುದು, ಕೊಲೆ ಯತ್ನ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಸೇವಕರ ಕಾನೂನುಬದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವಿಕೆಗೆ ಸಂಬAಧಿಸಿದ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಅಮೃತಪಾಲ್ ಮತ್ತು ಆತನ ಸಹಚರರ ವಿರುದ್ಧ ದಾಖಲಿಸಲಾಗಿದೆ.
ವಿದ್ಯುತ್ ಸ್ಪರ್ಶಿಸಿ ಇಬ್ಬರ ಬಾಲಕರ ಸಾವು
ತುಮಕೂರು, ಏ. ೨೦: ನಗರದ ಹೊರ ವಲಯದ ಬೆಳಗುಂಬದ ಸಿದ್ದರಾಮೇಶ್ವರ ಬಡಾವಣೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಇಬ್ಬರು ಮಕ್ಕಳು ಗುರುವಾರ ಮೃತಪಟ್ಟಿದ್ದಾರೆ. ವೀರಭದ್ರಯ್ಯ ಎಂಬುವರ ಪುತ್ರ ಯತೀಶ್ (೧೪), ಸಿದ್ದಲಿಂಗಯ್ಯ ಎಂಬುವರ ಮಗ ಪ್ರಜ್ವಲ್ (೧೪) ಮೃತರು. ಇಬ್ಬರು ಅಕ್ಕಪಕ್ಕದ ಮನೆ ನಿವಾಸಿಗಳು. ಮನೆಯ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
ಪಾಕ್ ವಿದೇಶಾಂಗ ಸಚಿವ ಭಾರತ ಭೇಟಿ
ಇಸ್ಲಾಮಾಬಾದ್, ಏ. ೨೦: ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಶೃಂಗಸಭೆಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ-ಜರ್ದಾರಿಯ ಮೇನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಪ್ರಕಾರ, ಮೇ ೪-೫ ರಂದು ಗೋವಾದಲ್ಲಿ ನಡೆಯಲಿರುವ ಎಸ್‌ಸಿಒ ವಿದೇಶಾಂಗ ಸಚಿವರ ಸಭೆಯಲ್ಲಿ ಬಿಲಾವಲ್ ಭುಟ್ಟೋ-ಜರ್ದಾರಿ ಪಾಕಿಸ್ತಾನಿ ನಿಯೋಗವನ್ನು ಮುನ್ನಡೆಸಲಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಆಹ್ವಾನದ ಮೇರೆಗೆ ಬಿಲಾವಲ್ ಭುಟ್ಟೋ-ಜರ್ದಾರಿ ಎಸ್‌ಸಿಒ-ಸಿಎಫ್‌ಎಂ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ತಿಳಿಸಿದ್ದಾರೆ. ಈ ವರ್ಷದ ಎಸ್‌ಸಿಒ ವಿದೇಶಾಂಗ ಸಚಿವರ ಸಭೆಯು ರಷ್ಯಾ-ಉಕ್ರೇನ್ ಯುದ್ಧ ಮತ್ತು ಭಾರತದ ಜಿ-೨೦ ಅಧ್ಯಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿದೆ.