ಮಡಿಕೇರಿ, ಏ. ೨೦: ಉತ್ತಮ ಕಾರ್ಯನಿರ್ವಹಣೆಗೆ ಮಡಿಕೇರಿ ಆಕಾಶವಾಣಿ ಇಬ್ಬರು ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಂತ್ರಿಕ ವಿಭಾಗದ ಆನಂದನ್ ಹಾಗೂ ಸುದ್ದಿ ಪ್ರಸಾರ ವಿಭಾಗದ ವಿದ್ಯಾ ಅವರುಗಳನ್ನು ಗೌರವಿಸಲಾಯಿತು.
ಹಾಸನಕ್ಕೆ ವರ್ಗಾವಣೆಗೊಂಡ ಆಕಾಶವಾಣಿ ಮಡಿಕೇರಿ ವಿಭಾಗದ ನಿರ್ದೇಶಕ ವಿಜಯ್ ಅಂಗಡಿ ಮಾತನಾಡಿ, ನಾಲ್ಕುವರೆ ವರ್ಷಗಳ ಕಾಲ ಮಡಿಕೇರಿ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ ಸಂದರ್ಭ ಜಿಲ್ಲೆಯಲ್ಲಿ ತನಗೆ ಉತ್ತಮ ಸಹಕಾರ ಲಭಿಸಿದೆ. ಆಕಾಶವಾಣಿಯಲ್ಲಿ ಕೃಷಿ ವಿಭಾಗದಲ್ಲಿ ಹಲವಷ್ಟು ಕಾರ್ಯಕ್ರಮಗಳನ್ನು ನೀಡಿದ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
ಸಹನಾ ಕಾಂತಬೈಲು ಅವರು ಕೃಷಿ ಕುರಿತು ಪುಸ್ತಕ ಬರೆಯಲು ಪ್ರೇರೇಪಿಸಿ ೫ ಸಾವಿರ ರೂಪಾಯಿ ದೇಣಿಗೆಯನ್ನು ಈ ಸಂದರ್ಭದಲ್ಲಿ ನೀಡಿದರು. ಗೌರವ ಸ್ವೀಕರಿಸಿ ಮಾತನಾಡಿದ ತಾಂತ್ರಿಕ ಅಧಿಕಾರಿ ಆನಂದನ್ ಅವರು, ಆಕಾಶವಾಣಿ ಕಚೇರಿಯಲ್ಲಿ ಲಭ್ಯವಿದ್ದ ಎಲ್ಲಾ ಅಗತ್ಯ ಉಪಕರಣಗಳನ್ನು ಬಳಸಿ ತಾಂತ್ರಿಕ ವಿಭಾಗವನ್ನು ಮೇಲ್ದರ್ಜೆಗೆ ತರಲಾಗಿದೆ. ಈ ವಿಭಾಗದ ಗುಣಮಟ್ಟ ಇದೀಗ ಉತ್ತಮವಾಗಿದೆ ಎಂದರು. ವಿದ್ಯಾ ಮಾತನಾಡಿ, ತನ್ನ ಕರ್ತವ್ಯವನ್ನು ಗುರುತಿಸಿ ಗೌರವಿಸಿರುವುದು ಎಲ್ಲರ ಸಹಕಾರದ ಫಲ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಮಾತನಾಡಿ, ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಪದ ಜೋಡಿಸಿ ಕೇಳುಗರಿಗೆ ಪ್ರಸ್ತುತಪಡಿಸುವುದು ಉತ್ತಮವಾಗಿದೆ. ಇದು ಭಾಷಾ ಅಭಿವೃದ್ಧಿಗೆ ಪೂರಕ ಎಂದ ಅವರು ಸರಳ ಹಾಗೂ ಸಜ್ಜನಿಕೆಯ ಮೂಲಕ ವಿಜಯ್ ಅಂಗಡಿ ಅವರು ಕೊಡಗಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.
ವಿಜಯ್ ಅಂಗಡಿ ಅವರ ಸ್ಥಾನಕ್ಕೆ ವರ್ಗಾವಣೆಗೊಂಡು ಬಂದಿರುವ ಜಗದೀಶ್ ಪಿಎಂ ಅವರು ಮಾತನಾಡಿ, ತಾನು ಈ ಹಿಂದೆ ಕೂಡ ಮಡಿಕೇರಿ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದು ಮುಂದೆಯೂ ಎಲ್ಲರ ಸಹಕಾರದಿಂದ ವಿವಿಧ ಕಾರ್ಯಕ್ರಮಗಳನ್ನು ನೀಡುವ ಹಂಬಲ ವ್ಯಕ್ತಪಡಿಸಿದರು.