ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡಲು ಮನವಿ
ನವದೆಹಲಿ, ಏ. ೧೯: ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡಿ, ಭಿನ್ನಲಿಂಗಿಯರAತೆ ಗೌರವಯುತ ಜೀವನ ನಡೆಸುವುದಕ್ಕೆ ಅವರಿಗೆ ಸಹಾಯ ಮಾಡಿ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ತನ್ನ ಸಂಪೂರ್ಣ ಅಧಿಕಾರವನ್ನು ಬಳಸಿಕೊಂಡು ಎಲ್‌ಜಿಬಿಟಿ ಕ್ಲ್ಯುಐಎ ವ್ಯಕ್ತಿಗಳಿಗೆ ಗೌರವಯುತ ಜೀವನ ನಡೆಸುವುದಕ್ಕೆ ಅವಕಾಶ ನೀಡಬೇಕೆಂದು ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡಲು ಮನವಿ ಮಾಡಿರುವ ಅರ್ಜಿದಾರರು ಕೇಳಿದ್ದಾರೆ. ಸರ್ಕಾರ ಮುಂದೆ ಬಂದು ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡಬೇಕೆಂದು ಅರ್ಜಿದಾರರ ಪೈಕಿ ಒಬ್ಬರ ಪರವಾಗಿ ಹಾಜರಾಗಿದ್ದ ಹಿರಿಯ ಅಡ್ವೊಕೇಟ್ ಮುಕುಲ್ ರೋಹಟ್ಗಿ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿದ್ದ ಪಂಚ ಸದಸ್ಯ ಪೀಠಕ್ಕೆ ಹೇಳಿದ್ದಾರೆ. ಈ ವಾದದ ವೇಳೆ ವಿಧವೆಯ ಮರು-ವಿವಾಹದ ಕಾನೂನನ್ನು ಉಲ್ಲೇಖಿಸಿದ ಮುಕುಲ್ ರೋಹಟ್ಗಿ, ಆ ಕಾನೂನನ್ನು ಸಮಾಜವು ಅಂದು ಒಪ್ಪಿಕೊಂಡಿತು ಮತ್ತು "ಕಾನೂನು ನಿಷ್ಠೆಯಿಂದ ವರ್ತಿಸಿತು" ಆ ನಂತರ ಸಮಾಜ ಅದನ್ನು ಸ್ವೀಕರಿಸಿ, ಅನುಸರಿಸಿತು ಎಂದು ಹೇಳಿದರು. ಇಲ್ಲಿ ಕೋರ್ಟ್ ಸಹ ಸಮಾಜವನ್ನು ಸಲಿಂಗಿಗಳ ವಿವಾಹವನ್ನು ಒಪ್ಪಿಕೊಳ್ಳುವುದಕ್ಕೆ ಮುಂದಡಿ ಇಡುವಂತೆ ಮಾಡಬೇಕು. ಇದಕ್ಕೆ ಕೋರ್ಟ್ಗೆ ಆರ್ಟಿಕಲ್ ೧೪೨ ರ ಅಡಿಯಲ್ಲಿ (ಸಂಪೂರ್ಣ ನ್ಯಾಯವನ್ನು ಮಾಡಲು ಅಗತ್ಯವಾದ ಯಾವುದೇ ಆದೇಶವನ್ನು ರವಾನಿಸಲು ಸುಪ್ರೀಂ ಕೋರ್ಟ್ಗೆ ಸಂಪೂರ್ಣ ಅಧಿಕಾರವನ್ನು ಒದಗಿಸುವ ಸಂವಿಧಾನದ ಅಂಶ) ಅವಕಾಶವಿದ್ದು, ಸಾರ್ವಜನಿಕರಿಂದಲೂ ಬೆಂಬಲ ವ್ಯಕ್ತವಾಗುತ್ತದೆ. ನಾವು ನಮ್ಮ ಹಕ್ಕನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ನ್ಯಾಯಾಲಯದ ಪ್ರತಿಷ್ಠೆ ಮತ್ತು ನೈತಿಕ ಅಧಿಕಾರವನ್ನು ಅವಲಂಬಿಸಿದ್ದೇವೆ ಎಂದು ರೋಹಟ್ಗಿ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್, ಎಸ್.ಆರ್. ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್. ನರಸಿಂಹ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.
ಏಷ್ಯಾದಲ್ಲಿ ಹೆಚ್ಚಿದ ತಾಪಮಾನ, ಭಾರತದಲ್ಲೂ ಬಿಸಿ ಗಾಳಿಯ ಎಚ್ಚರಿಕೆ
ನವದೆಹಲಿ, ಏ. ೧೯: ಭಾರತದಿಂದ ದಕ್ಷಿಣ ಚೀನಾ, ಥೈಲ್ಯಾಂಡ್‌ವರೆಗೆ, ಈ ವರ್ಷ ಏಷ್ಯಾದ ಹಲವು ದೇಶಗಳಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ಆಕ್ಸಿಯೋಸ್ ವರದಿ ಮಾಡಿದೆ. ಭಾರತದ ಪ್ರಯಾಗರಾಜ್ ನಲ್ಲಿ ತಾಪಮಾನ ೪೪.೬ ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಬಾಂಗ್ಲಾದೇಶದಲ್ಲಿ ೪೦ ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಶಾಖದ ತೀವ್ರತೆ ಇನ್ನೂ ಕೆಟ್ಟದಾಗಿರುತ್ತದೆ" ಎಂದು ಹವಾಮಾನಶಾಸ್ತçಜ್ಞ ಮತ್ತು ಹವಾಮಾನ ಇತಿಹಾಸಕಾರ ಮ್ಯಾಕ್ಸಿಮಿಲಿಯಾನೊ ಹೆರೆರಾ ಅವರು ಎಚ್ಚರಿಸಿದ್ದಾರೆ. ಈ ಅಸಾಧಾರಣ ತಾಪಮಾನವನ್ನು "ಏಷ್ಯನ್ ಇತಿಹಾಸದಲ್ಲಿ ಕೆಟ್ಟ ಏಪ್ರಿಲ್ ಹೀಟ್ ವೇವ್" ಎಂದು ಮ್ಯಾಕ್ಸಿಮಿಲಿಯಾನೋ ಹೆರೆರಾ ಅವರು ಹೇಳಿರವುದಾಗಿ ಗಾರ್ಡಿಯನ್ ವರದಿ ಮಾಡಿದೆ. ಉತ್ತರ ಮತ್ತು ಪೂರ್ವ ಭಾರತದ ಆರು ನಗರಗಳಲ್ಲಿ ೪೪ ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದ್ದರೆ, ರಾಷ್ಟç ರಾಜಧಾನಿ ದೆಹಲಿಯಲ್ಲಿ ೪೦ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಟ ಶುಕ್ರವಾರದವರೆಗೆ ಈ ಬಿಸಿಗಾಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ದಿ ಗಾರ್ಡಿಯನ್ ವರದಿ ತಿಳಿಸಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ
ಬೆಂಗಳೂರು, ಏ. ೧೯: ಮೇ ೧೦ ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಪ್ರತಿಪಕ್ಷ ಕಾಂಗ್ರೆಸ್ ಬುಧವಾರ ತನ್ನ ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬದಲಿಗೆ ಎ.ಸಿ. ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲಾಗಿದೆ. ಎಐಸಿಸಿ ಇಂದು ಮೂವರು ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಪ್ರಕಟಿಸಿದ್ದು, ಪುಲಿಕೇಶಿ ನಗರದಿಂದ ಎ.ಸಿ. ಶ್ರೀನಿವಾಸ್, ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದಿಂದ ಡಿಕೆ ಮೋಹನ್ ಬಾಬು ಹಾಗೂ ಮುಳಬಾಗಿಲು ಕ್ಷೇತ್ರದಿಂದ ಡಾ. ಬಿ.ಸಿ. ಮುದ್ದು ಗಂಗಾಧರ ಅವರನ್ನು ಕಣಕ್ಕಿಳಿಸಿದೆ. ಒಟ್ಟು ೨೨೪ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಈಗಾಗಲೇ ೨೧೯ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು ೫ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಾಕಿ ಉಳಿಸಿಕೊಂಡಿದೆ. ಸಿ.ವಿ. ರಾಮನ್‌ನಗರ, ಹಾಸನ ಜಿಲ್ಲೆ ಅರಕಲಗೂಡು, ರಾಯಚೂರು ನಗರ ಕ್ಷೇತ್ರ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರ, ಮಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯನ್ನು ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ ೨೦ ಕೊನೆಯ ದಿನವಾಗಿದೆ. ಏಪ್ರಿಲ್ ೨೪ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿ ಘೋಷಣೆ
ತುಮಕೂರು, ಏ. ೧೯: ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿಗಳ ಘೋಷಣೆಯಾಗಿದೆ. ಮನೋಜ್ ಕುಮಾರ್ ಎಂಬುವವರು ಉತ್ತರಾಧಿಕಾರಿಗಳಾಗಿ ನಿಯುಕ್ತಿಗೊಂಡಿದ್ದಾರೆ. ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಷಡಕ್ಷರಯ್ಯ, ವಿರೂಪಾಕ್ಷಮ್ಮ ಅವರ ಪುತ್ರರಾಗಿರುವ ಮನೋಜ್ ಕುಮಾರ್ ಬಿಎಸ್ಸಿ, ಬಿ.ಎಡ್, ಎಂಎಸ್ ಸಿ, ಎಂಎ ವಿದ್ವತ್ ಪದವಿ ಪಡೆದಿದ್ದು, ಸಿದ್ಧಗಂಗಾ ಪಾಲಿಟೆಕ್ನಿಕ್ ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ವೇಳೆ, ಕಂಚುಗಲ್ ಬಂಡೇಮಠ ಹಾಗೂ ಬಸವಕಲ್ಯಾಣ ಮಠಗಳಿಗೂ ಉತ್ತರಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಕಂಚುಗಲ್ ಬಂಡೇಮಠಕ್ಕೆ ಹರ್ಷ ಕೆ.ಎಂ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದರೆ, ಬಸವಕಲ್ಯಾಣ ಮಠಕ್ಕೆ ಗೌರೀಶ್ ಕುಮಾರ್ ಅವರನ್ನು ಉತ್ತರಾಧಿಕಾರಿಗಳನ್ನಾಗಿ ಘೋಷಣೆ ಮಾಡಲಾಗಿದೆ.