ಮಡಿಕೇರಿ, ಏ. ೧೯ : ನಗರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಬೋಧಕ ಕಾಲೇಜಿಗೆ ಬಸ್ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕಿಲೋಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲಿ ತೆರಳಿ ಹೈರಾಣಾಗಿದ್ದಾರೆ.
ನಗರದ ಹೊರವಲಯದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ. ಬಿ.ಎಸ್. ಹಾಗೂ ಪ್ಯಾರಮೆಡಿಕಲ್ ಕೋರ್ಸ್ಗಳಿವೆ. ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸರಕಾರಿ ಬಸ್‌ನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಪ್ಯಾರಮೆಡಿಕಲ್ ವಿದ್ಯಾರ್ಥಿಗಳು ಬಿಸಿಲು-ಮಳೆಯ ನಡುವೆ ನಡೆದು ಕೊಂಡೇ ಕಾಲೇಜು ಸೇರಬೇಕಾಗಿದೆ.
ಆಡಳಿತ ಮಂಡಳಿ ೫೦ಕ್ಕೂ ಹೆಚ್ಚು ಬಾರಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನ ದೊರೆತಿಲ್ಲ. ಹಲವು ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರೂ ಸಮಸ್ಯೆ ಅಂತ್ಯ ಕಂಡಿಲ್ಲ. ಈ ಬಗ್ಗೆ ಸೂಕ್ತ ಕ್ರಮಕ್ಕೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಮಳೆಗಾಲ ಹಾಗೂ ಬೇಸಿಗೆಯಲ್ಲಿ ನಡೆದುಕೊಂಡು ಹೋಗುವುದು ತ್ರಾಸದಾಯಕವಾಗಿದೆ. ವಿವಿಧ ವಸತಿ ನಿಲಯಗಳು,
(ಮೊದಲ ಪುಟದಿಂದ) ಬೇರೆ ಊರುಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಾರೆ. ಕೆಲವು ಕಡೆ ಪಾಯಿಂಟ್‌ಗಳನ್ನು ಮಾಡಿ ಬಸ್ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇದೇ ಮಾರ್ಗವಾಗಿ ಅಬ್ಬಿಫಾಲ್ಸ್, ಮಾಂದಲಪಟ್ಟಿ, ಆರ್.ಟಿ.ಓ. ಕಚೇರಿ ಇರುವುದರಿಂದ ಬಸ್‌ನ ಅಗತ್ಯತೆ ಇದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ನೀರಿಗೆ ಹಾಹಾಕಾರ: ಸಮರ್ಪಕ ಜಲಮೂಲವಿಲ್ಲದೆ ಬಿರುಬಿಸಿಲ ಬೇಗೆಗೆ ಜಲಕ್ಷಾಮ ಇಲ್ಲಿಯೂ ಎದುರಾಗಿದೆ. ವಸತಿ ನಿಲಯಗಳಿಗೆ, ಕಾಲೇಜಿಗೆ, ಪ್ರಯೋಗಾಲಯಗಳಿಗೆ ನೀರಿನ ಕೊರತೆ ಉಂಟಾಗಿದೆ.
೨ ಕೆರೆ ಬತ್ತಿರುವ ಹಾಗೂ ಕೂಟುಹೊಳೆ, ಕುಂಡಾಮೇಸ್ತಿçಯಲ್ಲಿ ನೀರು ಕ್ಷೀಣಿಸಿದ ಕಾರಣ ಅಭಾವ ತಲೆದೋರಿದೆ. ಇದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಮೈದಾನವಿಲ್ಲ: ಆಟದ ಮೈದಾನ ಹಾಗೂ ಇತರ ಉದ್ದೇಶಕ್ಕೆ ೧೦ ಎಕರೆ ಜಾಗ ಗುರುತಿಸಿ ಕಡತವನ್ನು ಜಿಲ್ಲಾಡಳಿತಕ್ಕೆ ರವಾನಿಸಲಾಗಿದೆ. ಆದರೆ ಯಾವುದೇ ರೀತಿಯಲ್ಲಿ ಪ್ರತಿಸ್ಪಂದನ ದೊರೆತಿಲ್ಲ. ಮೈದಾನವಿಲ್ಲದೆ ವಿದ್ಯಾರ್ಥಿಗಳು ಕ್ರೀಡಾಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕ್ರಮಕ್ಕೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.