ಪೊನ್ನಂಪೇಟೆ, ಏ. ೧೯: ಬಾಹ್ಯಾಕಾಶದಲ್ಲಿ ಭಾರತದ ಇಸ್ರೋ ಮಾಡಿರುವ ಸಾಧನೆಯನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಇಸ್ರೋನಿಂದ ‘ಸ್ಪೇಸ್ ಆನ್ ವ್ಹೀಲ್ಸ್’ ಏರ್ಪಡಿಸಲಾಯಿತು. ಇಸ್ರೋದ ಹಿರಿಯ ವಿಜ್ಞಾನಿ ಎಸ್. ಎಲ್. ಶ್ರೀನಿವಾಸ ಉದ್ಘಾಟಿಸಿ ಮಾತನಾಡಿ, ಬಾಹ್ಯಾಕಾಶದಲ್ಲಿನ ವಿದ್ಯಾಮಾನಗಳು ಮನುಷ್ಯನ ಕುತೂಹಲವನ್ನು ಕೆರಳಿಸುವುದು ಸಹಜ. ಎಲ್ಲರ ಮನದಲ್ಲಿಯೂ ಸೂರ್ಯ, ಚಂದ್ರ, ನಕ್ಷತ್ರ, ಬಾಹ್ಯಾಕಾಶದ ಸಂರಚನೆಯ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಇದ್ದೇ ಇರುತ್ತದೆ.
ನಮ್ಮ ಭಾರತ ದೇಶದ ಸಂಶೋಧನಾ ಕೇಂದ್ರವಾದ ಇಸ್ರೋ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬಾಹ್ಯಾಕಾಶದ ಬಗೆಗೆ ಜ್ಞಾನದ ಸುಧೆಯನ್ನು ಧಾರೆಯೆರೆಯಲು ಕಾರ್ಯ ಪ್ರವೃತ್ತವಾಗಿದೆ. ಇಸ್ರೋ ಸಂಶೋಧನಾ ಕ್ಷೇತ್ರದಲ್ಲಿ ಇದುವರೆಗೆ ನಡೆದ ಅಭೂತಪೂರ್ವ ಸಾಧನೆಯ ಸಮಗ್ರ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ಅನಾವರಣಗೊಳಿಸಲಾಗುತ್ತಿದೆ. ಬಾಹ್ಯಾಕಾಶದ ಸಂಶೋಧನೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಯೋಗ ತಳಹದಿಯಾಗಿದೆ. ವಿದ್ಯಾರ್ಥಿಗಳ ಜ್ಞಾನದ ಅರಿವನ್ನು ವೃದ್ಧಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಇಸ್ರೋದಲ್ಲಿ ಇರುವಂತಹ ಅವಕಾಶಗಳು ಹಾಗೂ ಇಸ್ರೋದ ಸಾಧನೆಗಳ ಕುರಿತು ವಿವರಿಸಿದರು. ಇಂತಹ ಕಾರ್ಯಕ್ರಮಗಳನ್ನು ನಡೆಸಲು ಇಸ್ರೋ ಮುಂದಿನ ದಿನಗಳಲ್ಲಿ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳುವುದಾಗಿ ತಿಳಿಸಿದರು.
ಕೊಡವ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಲಾಭವನ್ನು ಪಡೆದುಕೊಂಡು ವೈಜ್ಞಾನಿಕ ಮನೋಭಾವಗಳನ್ನು ಬೆಳೆಸಿಕೊಳ್ಳಬೇಕು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ದೇಶ ಸಾಧಿಸಿದ ಸಾಧನೆಗಳನ್ನು ಗ್ರಾಮೀಣ ಭಾಗಕ್ಕೂ ತಲುಪಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ದೇಶ ಸಾಧಿಸಿದ ಸಾಧನೆಗಳನ್ನು ಗ್ರಾಮೀಣ ಭಾಗಕ್ಕೂ ತಲುಪಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು. ಸುಮಾರು ೧೭ ಸ್ಟಾö್ಯಂಡಿಗಳು, ಬಾಹ್ಯಾಕಾಶ ನೌಕೆ ಮತ್ತು ಇಸ್ರೋದ ಬೆಳವಣಿಗೆ ಮತ್ತು ಸಾಧನೆಗಳನ್ನು ಬಿಂಬಿಸುವ ರಾಕೆಟ್ ಮಾದರಿಗಳು ಮತ್ತು ಭಾರತದಲ್ಲಿ ಬಾಹ್ಯಾಕಾಶ ಕಾರ್ಯಕ್ರಮದ ೭೫ ಸಾಧನೆಗಳನ್ನು ಎತ್ತಿ ತೋರಿಸುವ ಪ್ರಸ್ತುತಿಯೊಂದಿಗೆ ‘ಸ್ಪೇಸ್ ಆನ್ ವೀಲ್ಸ್’ನ ಪ್ರದರ್ಶನವನ್ನು ಒಳಗೊಂಡಿತ್ತು. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ದಾರ್ಶನಿಕರನ್ನು ನೆನಪಿಸಿಕೊಳ್ಳುವ ಸಂಕ್ಷಿಪ್ತ ವೀಡಿಯೋವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಬಾಹ್ಯಾಕಾಶ ನೌಕೆ ಮತ್ತು ರಾಕೆಟ್ ಮಾದರಿಗಳು ಮತ್ತು ಸ್ಟಾö್ಯಂಡಿಗಳ ಬಗ್ಗೆ ಸಂದರ್ಶಕರಿಗೆ ವಿವರಿಸಲಾಯಿತು.
ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದಲ್ಲಿ ಕೊಡಗಿನ ವಿವಿಧ ಭಾಗಗಳಿಂದ ೧೫೦೦ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಉಪಗ್ರಹಗಳು ಮತ್ತು ಉಡಾವಣಾ ವಾಹನಗಳ ತತ್ವ ಮತ್ತು ಕಾರ್ಯನಿರ್ವಹಣೆ, ಉಪಗ್ರಹಗಳ ಸಾಕ್ಷಾತ್ಕಾರದಲ್ಲಿನ ಸವಾಲುಗಳು ಮತ್ತು ಸಮಾಜಕ್ಕೆ ಅವುಗಳ ಅನ್ವಯಗಳು ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳು ಕುತೂಹಲದಿಂದ ತಿಳಿದುಕೊಂಡರು. ಸ್ಪೇಸ್ ಆನ್ ವ್ಹೀಲ್ಸ್ ಎಕ್ಸಿಬಿಷನ್ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಯಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಕೊಡವ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ, ಉಪ ಕಾರ್ಯದರ್ಶಿ ರಾಜಾ ನಂಜಪ್ಪ, ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಎಂ. ಬಸವರಾಜು, ಕೂರ್ಗ್ ಇನ್ಸಿ÷್ಟ್ಟಟ್ಯೂಟ್ ಆಫ್ ಪಿ.ಯು. ಕಾಲೇಜು ಪ್ರಾಂಶುಪಾಲೆ ಡಾ. ರೋಹಿಣಿ, ಕಾರ್ಯಕ್ರಮ ಸಂಯೋಜಕ ಡಾ.ರಾಮಕೃಷ್ಣ ಇನ್ನಿತರರು ಇದ್ದರು.
-ಚನ್ನನಾಯಕ