ಸೋಮವಾರಪೇಟೆ, ಏ. ೧೭: ಇಲ್ಲಿನ ಬೆಟ್ಟದಳ್ಳಿ ಯಶೋದೆ ರಂಗ ಟ್ರಸ್ಟ್ ಹಾಗೂ ಸಾಂದೀಪನಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಸಾಂದೀಪನಿ ಶಾಲೆಯ ಆವರಣ ದಲ್ಲಿ ಆಯೋಜನೆಗೊಂಡಿರುವ ಮಕ್ಕಳ ಕಲಾ ಕಲಿಕೆ ಬೇಸಿಗೆ ಶಿಬಿರಕ್ಕೆ ಡ್ರಾಮಾ ಜ್ಯೂನಿಯರ್ಸ್ನ ಮೆಂಟರ್ ಯೋಗೇಶ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಬೇಸಿಗೆ ಶಿಬಿರಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಇಂತಹ ಶಿಬಿರಗಳು ವೇದಿಕೆಯಾಗಿವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಚೌಡ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಮಾತನಾಡಿ, ವರ್ಷವಿಡೀ ಪಾಠ ಪ್ರವಚನಗಳಲ್ಲೇ ತೊಡಗಿರುವ ಮಕ್ಕಳು, ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕವಾಗಿ ಉಲ್ಲಸಿತ ಗೊಳ್ಳುತ್ತಾರೆ. ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಇಂತಹ ತರಬೇತಿ ಕೊಡಿಸಿದರೆ ಮುಂದೆ ಸಾಧನೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್. ಮಹೇಶ್, ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ್, ಶಿಕ್ಷಕಿ ವಸಂತಿ, ಶಿಬಿರದ ಸಂಚಾಲಕ ನಿಶಾಂತ್ ಮುತ್ತಣ್ಣ, ನಿರ್ದೇಶಕ ಗಣೇಶ್ ಎಂ., ಭೀಮನಕೊಣೆ ಉಪಸ್ಥಿತರಿದ್ದರು.