ವೀರಾಜಪೇಟೆ, ಏ. ೧೬: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ವ್ಯಕ್ತಿಯೋರ್ವನ ಮೇಲೆ ಗುಂಡಿನ ಧಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ವೀರಾಜಪೇಟೆ ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ತೋಮರ ಗ್ರಾಮದಲ್ಲಿ ನಡೆದಿದೆ.
ತೋಮರ ಗ್ರಾಮದ ನಿವಾಸಿ ಬೈಮನ ನಾಣಯ್ಯ ಅವರ ಪುತ್ರ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಈಗಲ್ ಸ್ವಿಚ್ಚ್ಸ್ ಗರ‍್ಸ್ ಕಂಪೆನಿಯ ಮಾಲೀಕನಾಗಿರುವ ಬೈಮನ ಮಧು ಆಲಿಯಾಸ್ ಗುರುಪ್ರಸಾದ್ (೪೪) ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ವ್ಯಕ್ತಿ.
ಘಟನೆ ವಿವರ: ಮೃತರಾದ ಮಧು ತಾ. ೧೪ ರಂದು ಬೆಂಗಳೂರಿನಿAದ ತೋಮರ ಗ್ರಾಮಕ್ಕೆ ಬಂದಿದ್ದರು. ಅಂದು ಮನೆಯಲ್ಲಿ ಉಳಿದು ತಾ. ೧೫ ರಂದು ತನ್ನ ತಾಯಿ ಶಾಂತಿ ಅವರೊಂದಿಗೆ ಸಂಜೆ ವೇಳೆಗೆ ಚಿನ್ನ ಖರೀದಿಸಲೆಂದು ಗೋಣಿಕೊಪ್ಪಲುವಿಗೆ ತೆರಳಿ ಚಿನ್ನ ಖರೀದಿಸಿ ಮನೆಗೆ ಹಿಂತಿರುಗಿದ್ದಾರೆ. ಬಳಿಕ ಮಧು ಪಡಿಚಿಕಾಡ್ ಕಾಲೋನಿಯಲ್ಲಿರುವ ಸ್ನೇಹಿತ ಸತೀಶ್ ಅವರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ತಮ್ಮ ಕಾರು ಮಾರುತಿ ಸ್ವಿಫ್ಟ್ ಕಾರಿನಲ್ಲಿ (ಕೆ.ಎ. ೧೨ ಜೆಡ್ - ೨೦೭೪) ಪಡಿಚಿಕಾಡ್ ಕಾಲೋನಿಗೆ ತೆರಳಿದ್ದಾರೆ.
ಪಡಿಚಿಕಾಡ್ ಕಾಲೋನಿ ನಿವಾಸಿ ಮನು ಅವರ ಮನೆಯಲ್ಲಿ ವಿಶು ಹಬ್ಬದ ಪ್ರಯುಕ್ತ ರಾತ್ರಿ ೯ ರ ಸಮಯದಲ್ಲಿ ಉಪಹಾರ ಏರ್ಪಡಿಸಲಾಗಿತ್ತು. ಸ್ನೇಹಿತರಾದ ಸುನಿ, ಸತೀಶ್ ಮತ್ತು ಮನು ಎಂಬವರುಗಳೊAದಿಗೆ ಉಪಹಾರ ಸೇವಿಸಿದ ಮಧು ಅವರು ರಾತ್ರಿ ಸುಮಾರು ೧೨ ಗಂಟೆ ವೇಳೆ ಮನೆಗೆ ತೆರಳುವುದಾಗಿ ಸ್ನೇಹಿತರಿಗೆ ತಿಳಿಸಿ ಕಾರಿನತ್ತ ತೆರಳುತ್ತಿದ್ದ ಸಂದರ್ಭ ಹಂತಕರ ಗುಂಡೇಟಿಗೆ ಬಲಿಯಾಗಿದ್ದಾರೆ.
ಸ್ನೇಹಿತರಾದ ಸತೀಶ್ ಮತ್ತು ಇತರರು ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದಾಗ ಗುಂಡು ಮೃತ ಮಧು ಅವರ ಕುತ್ತಿಗೆ ಭಾಗವನ್ನು ಸೀಳಿಕೊಂಡು ದಾಟಿರು ವುದು ಗೋಚರಿಸಿದೆ. ನಂತರ ಸತೀಶ್ ಅವರು ಮಧು ಅವರ ತಂದೆ ನಾಣಯ್ಯ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ನಾಣಯ್ಯ ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನಾ ಸ್ಥಳದ ಕಾಲೋನಿಯ ವ್ಯಕ್ತಿಯೋರ್ವರು ವೀರಾಜಪೇಟೆ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮೋಹನ್‌ಕುಮಾರ್, ವೃತ್ತ ನಿರೀಕ್ಷಕರಾದ ಶಿವರುದ್ರ ಮತ್ತು ಸಿಬ್ಬಂದಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆ ಸಂಬAಧ ಮೃತರ ತಂದೆ ನಾಣಯ್ಯ ಅವರು ದೂರು ನೀಡಿದ್ದು, ಕೆಲದಿನಗಳ ಹಿಂದೆ ಮಧು ಮತ್ತು ಕೆಲವರ ನಡುವೆ ಬೀದಿದೀಪ ಆರಿಸಿ ನಂದಿ ಮರದ ತುಂಡುಗಳನ್ನು ಅಕ್ರಮ ವಾಗಿ ಕಡಿದು ಸಾಗಾಟ ಮಾಡುತ್ತಿರುವ ವಿಚಾರದಲ್ಲಿ ಕಲಹ ನಡೆದಿತ್ತು. ಈ ವೇಳೆ ಗುಂಡು ಹೊಡೆದು ಹತ್ಯೆ ಮಾಡುವುದಾಗಿ ಮಧುಗೆ ಬೆದರಿಕೆ ಹಾಕಲಾಗಿತ್ತು. ಆ ರೀತಿ ಬೆದರಿಕೆ ಹಾಕಿದ ವ್ಯಕ್ತಿಗಳೇ ಈ ಹತ್ಯೆ ಮಾಡಿ ದ್ದಾರೆ ಎಂದು ಕೆಲವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಇಂದು ಎಸ್‌ಪಿ ಕೆ. ರಾಮರಾಜನ್ ಭೇಟಿ ನೀಡಿದ್ದರು.
ಕೊಲೆಗೆ ಕಾರಣ ಪತ್ತೆಹಚ್ಚಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಕೊಲೆ ಆರೋಪಿಗಳ ಪತ್ತೆಗೆ ತನಿಖಾ ತಂಡವನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.
- ಕಿಶೋರ್ ಕುಮಾರ್ ಶೆಟ್ಟಿ, ಈಶಾನ್ವಿ