ಕುಶಾಲನಗರ, ಏ. ೧೭: ಬೇಸಿಗೆಯ ದಗೆ ನಡುವೆ ಕುಶಾಲನಗರ ಸುತ್ತಮುತ್ತಲಿನ ಮೀಸಲು ಅರಣ್ಯಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ನೀಗಿಸಲು ನಿರ್ಮಾಣ ಗೊಂಡಿರುವ ಕೆರೆಗಳಲ್ಲಿ ಅಗತ್ಯ ನೀರಿನ ಸಂಗ್ರಹ ಕಾಣಬಹುದು.
ಕುಶಾಲನಗರ ಮಡಿಕೇರಿ ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿರುವ ಅತ್ತೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಆರು ಕೆರೆಗಳು, ಆನೆಕಾಡು ಮೀಸಲು ಅರಣ್ಯಗಳಲ್ಲಿ ನಾಲ್ಕು ಕೆರೆಗಳನ್ನು ನಿರ್ಮಿಸಲಾಗಿದ್ದು ಈ ಕೆರೆಗಳಲ್ಲಿ ಪ್ರಸಕ್ತ ನೀರು ತುಂಬಿ ಹರಿಯುತ್ತಿರುವ ದೃಶ್ಯ ಗೋಚರಿಸಿದೆ.
ಕಾಡಾನೆಗಳು, ಕರಡಿ ಚಿರತೆ ಜಿಂಕೆಗಳು ಈ ಕೆರೆಗಳಿಗೆ ನಿತ್ಯ ಬೆಳಗಿನ ಜಾವ ಹಾಗೂ ಸಂಜೆ ವೇಳೆಗೆ ಬಂದು ನೀರಿನ ದಾಹ ನೀಗಿಸಿಕೊಳ್ಳುತ್ತಿರುವ ದೃಶ್ಯ ಅಲ್ಲಲ್ಲಿ ಕಂಡು ಬರುತ್ತಿವೆ. ಅತ್ತೂರು ಮತ್ತು ಆನೆಕಾಡು ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ಅಂದಾಜು ೩೦ ರಿಂದ ೪೦ ಕಾಡಾನೆಗಳು ನೆಲೆ ಕಂಡಿರುವುದಾಗಿ ಅರಣ್ಯ ಅಧಿಕಾರಿಗಳು ಶಕ್ತಿಗೆ ಮಾಹಿತಿ ನೀಡಿದ್ದಾರೆ. ನೀರಿನ ವ್ಯವಸ್ಥೆ ಇರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುವ ಪ್ರಕರಣಗಳು ಕಡಿಮೆಯಾಗಿದೆ ಎನ್ನುತ್ತಾರೆ ಈ ಭಾಗದ ಉಪವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜಾ.
ಅತ್ತೂರು ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವನ್ಯಪ್ರಾಣಿಗಳು ನೆಲೆ ಕಂಡಿದ್ದು ಇವುಗಳು ತಮ್ಮ ದಾಹ ನೀಗಿಸುವುದಕ್ಕಾಗಿ ಈ ಕೆರೆಗಳನ್ನು ಅವಲಂಬಿಸಿವೆ ಎನ್ನುತ್ತಾರೆ ಅರಣ್ಯ ಇಲಾಖೆಯ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಅವರು. ಆದರೂ ನೀರಿನ ಗುಣಮಟ್ಟ ಕ್ಷೀಣ ಗೊಂಡಿರುವ ಕಾರಣ ಕೆಲವು ಕಾಡಾನೆಗಳು ಮಾತ್ರ ಸಿಹಿ ನೀರಿಗಾಗಿ ನಾಡಿಗೆ ಲಗ್ಗೆ ಇಡುತ್ತವೆ ಎಂದು ಅವರು ತಿಳಿಸಿದ್ದಾರೆ. ಕೆರೆಗಳಲ್ಲಿ ಪಾಚಿ ಕಟ್ಟಿದ ನೀರನ್ನು ಅವುಗಳು ಬಳಸಲು ಹಿಂಜರಿಯುತ್ತಿದ್ದು ನದಿ ನೀರನ್ನು ಅರಸಿಕೊಂಡು ಅಥವಾ ಹಾರಂಗಿ ಜಲಾಶಯದತ್ತ ತೆರಳುತ್ತವೆ ಎಂದು ಅವರು ಹೇಳಿದ್ದಾರೆ.
ಕುಶಾಲನಗರ ವಲಯ ಅರಣ್ಯದ ವ್ಯಾಪ್ತಿಯ ಅತ್ತೂರು ಆನೆಕಾಡು ಮಾಲ್ದಾರೆ ಮೀಸಲು ಅರಣ್ಯಗಳನ್ನು ಒಳಗೊಂಡAತೆ ಕಾಡಿನಲ್ಲಿ ಹಲವು ಕೆರೆಗಳನ್ನು ನಿರ್ಮಿಸಲಾಗಿದೆ ಅವುಗಳಲ್ಲಿ ನೀರು ತುಂಬುವAತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕುಶಾಲನಗರ ಅರಣ್ಯ ವಲಯ ಅಧಿಕಾರಿ ಶಿವರಾಂ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
-ಚಂದ್ರಮೋಹನ್