ಮಡಿಕೇರಿ, ಏ. ೧೮: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್‌ನ ಕೊಡಗು ಜಿಲ್ಲಾ ಶಾಖೆಯ ಸದಸ್ಯರು ತಮ್ಮ ತಮ್ಮ ಚಿಕಿತ್ಸಾಲಯಗಳಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನೀಮಾ ದಿನಾಚರಣೆಯನ್ನು ಆಚರಿಸಿದರು.

ಭಾರತೀಯ ವೈದ್ಯ ಪದ್ಧತಿಗಳ ಚಿಕಿತ್ಸಕರ ರಾಷ್ಟçವ್ಯಾಪಿ ಸಂಘಟನೆ ಯಾದ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್‌ನ ಸ್ಥಾಪನಾ ದಿನವನ್ನು ಮಡಿಕೇರಿ, ನಾಪೋಕ್ಲು, ಕಲ್ಲುಗುಂಡಿ, ನೆಲ್ಲಿಹುದಿಕೇರಿ, ಸಿದ್ದಾಪುರ, ಮಾದಾಪುರ, ೭ನೇಹೊಸಕೋಟೆ, ಸೋಮವಾರಪೇಟೆ, ಬೆಕ್ಕೆಸೊಡ್ಲೂರು, ಕುಶಾಲನಗರ, ಸುಂಟಿಕೊಪ್ಪ ಮೊದಲಾದ ಪಟ್ಟಣಗಳಲ್ಲಿ ಉಚಿತ ಚಿಕಿತ್ಸಾ ಶಿಬಿರಗಳು, ಔಷಧೀಯ ಸಸ್ಯಗಳ ವಿತರಣೆ, ಆರೋಗ್ಯ ಮಾಹಿತಿ ಮೊದಲಾದ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಮಧುಮೇಹ, ಬೊಜ್ಜು, ರಕ್ತದೊತ್ತಡ ಮೊದಲಾದ ಕಾಯಿಲೆಗಳ ನಿಯಂತ್ರಣಕ್ಕೆ ಅಗತ್ಯವಾದ ಯೋಗಾಸನಗಳನ್ನು ಪರಿಚಯಿಸಲಾಯಿತು.