ಸೋಮವಾರಪೇಟೆ, ಏ. ೧೭: ನಿನ್ನೆ ದಿನ ಕೇರಳದ ಕಣ್ಣೂರಿನಲ್ಲಿರುವ ಪಯ್ಯಾಂಬಲ ಕಡಲ ತೀರದಲ್ಲಿ ಕಣ್ಮರೆಯಾದ ತಣ್ಣೀರುಹಳ್ಳ ಗ್ರಾಮದ ಸೃಜನ್‌ನ ಮೃತದೇಹ ಪತ್ತೆಯಾಗಿದೆ.
ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಮುಗಿದ ಹಿನ್ನೆಲೆ ಕುಟುಂಬದ ಸದಸ್ಯರೊಂದಿಗೆ ನಿನ್ನೆ ದಿನ ಕೇರಳದ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಿಗೆ ತೆರಳಿದ್ದ ಸೃಜನ್ (೧೫) ಮಧ್ಯಾಹ್ನ ೨.೩೦ರ ಸುಮಾರಿಗೆ ಪಯ್ಯಾಂಬಲ ಕಡಲ ಕಿನಾರೆಯಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ನಾಪತ್ತೆ ಯಾಗಿದ್ದ.
ಕಡಲ ನೀರಿನಲ್ಲಿ ಕಣ್ಮರೆಯಾದ ಸೃಜನ್ ಗಾಗಿ ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು, ನುರಿತ ಈಜುಗಾರರು ಕಾರ್ಯಾಚರಣೆ ಕೈಗೊಂಡಿದ್ದರು. ತಣ್ಣೀರುಹಳ್ಳ ಗ್ರಾಮದ ನಿವಾಸಿ ಶಶಿಕುಮಾರ್ (ಸಚಿನ್) ಹಾಗೂ ನೇರುಗಳಲೆ ಗ್ರಾ.ಪಂ. ಸದಸ್ಯೆ ಕವಿತ ದಂಪತಿ ಪುತ್ರ ಸೃಜನ್‌ಗಾಗಿ ಬೆಳಗ್ಗಿನಿಂದಲೇ ಶೋಧ ಕಾರ್ಯ ಮುಂದುವರೆಸಲಾಗಿತ್ತು. ರಾತ್ರಿ ೮.೩೦ರ ಸುಮಾರಿಗೆ ಸೃಜನ್ ಮೃತದೇಹ ಪತ್ತೆಯಾಗಿದೆ.
ಪಟ್ಟಣದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದ ಸೃಜನ್, ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆ ಬರೆದು ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿದ ಸಂದರ್ಭ ಈ ದುರ್ಘಟನೆ ಸಂಭವಿಸಿತ್ತು.
ಶಶಿಕುಮಾರ್ ಸೇರಿದಂತೆ ಅವರ ಕುಟುಂಬದ ೧೬ ಮಂದಿ ಸದಸ್ಯರು ಓಮಿನಿ ವ್ಯಾನ್ ಹಾಗೂ ಈಕೋ ಕಾರಿನಲ್ಲಿ ಕೇರಳಕ್ಕೆ ಪ್ರವಾಸ ಕೈಗೊಂಡಿ ದ್ದರು. ನಿನ್ನೆ ಬೆಳಿಗ್ಗೆ ಪರಶಿನಕಡವು ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯಕ್ಕೆ ತೆರಳಿ ಅಲ್ಲಿಂದ ಪಯ್ಯಾಂಬಲ ಬೀಚ್‌ಗೆ ಹೋಗಿದ್ದರು. ಮಧ್ಯಾಹ್ನ ೨.೩೦ರ ಸುಮಾರಿಗೆ ಕುಟುಂಬ ಸದಸ್ಯರೆಲ್ಲರೂ ಬೀಚ್‌ನಲ್ಲಿದ್ದ ಸಂದರ್ಭ ಅಪ್ಪಳಿಸಿದ ಅಲೆಗೆ ಬಾಲಕ ಸೃಜನ್ ಸಿಲುಕಿ ನಾಪತ್ತೆಯಾಗಿದ್ದ. ತಾ. ೧೮ ರಂದು (ಇಂದು) ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.