ಸೋಮವಾರಪೇಟೆ, ಏ. ೧೮: ಹಿರಿಕರ ಗ್ರಾಮದ ಶ್ರೀ ಮಲ್ಲೇಶ್ವರ ದೇವಾಲಯದ ವಾರ್ಷಿಕ ವಿಶೇಷ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಗ್ಗಿನ ಜಾವ ಕೊಲ್ಲಿಗದ್ದೆಯ ಕೆರೆಯಲ್ಲಿ ಗಂಗಾ ಪೂಜೆ ಸಲ್ಲಿಸಿದ ಗ್ರಾಮಸ್ಥರು ಸಕಾಲದಲ್ಲಿ ಮಳೆ ಹಾಗೂ ಗ್ರಾಮದ ಸುಭೀಕ್ಷೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಸವಣ್ಣ ದೇವರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರತಿ ಕುಟುಂಬದವರು ಅವರ ಮನೆಗಳ ಮುಂದೆ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು.

ದೇವಾಲಯದಲ್ಲಿ ಕಳಸ ಹಿಡಿದ ಮಹಿಳೆಯರು ದೇವಾಲಯದ ಮೂರು ಸುತ್ತು ಮೆರವಣಿಗೆ ನಡೆಸಿದರು. ನಂತರ ಕೆಂಡ ಹಾಯಲಾಯಿತು.

ಕ್ರೀಡಾಕೂಟ: ಪೂಜೆಯ ಅಂಗವಾಗಿ ಗ್ರಾಮಸ್ಥರಿಗೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆದವು. ಮಹಿಳೆಯರ ಹಗ್ಗಾಜಗ್ಗಾಟದಲ್ಲಿ ಚರಿತ್ರಾ ತ್ರಿಲೋಕ್ ತಂಡ ಪ್ರಥಮ, ಅಶಿಕಾ ವಿಜಯಕುಮಾರ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ವಿಭಾಗದಲ್ಲಿ ಅಭಿಮನ್ಯು ತಂಡ ಪ್ರಥಮ, ದ್ರೋಣ ತಂಡ ದ್ವಿತೀಯ ಸ್ಥಾನ ಗಳಿಸಿತು.

ಬಸ್ಸು ಹುಡುಕಾಟ ಸ್ಪರ್ಧೆಯಲ್ಲಿ ಅಕ್ಷಿತಾ ದೇವರಾಜು ಪ್ರಥಮ, ಎಚ್.ಎಲ್. ಪ್ರಿಯಾ ದ್ವಿತೀಯ ಸ್ಥಾನ ಪಡೆದರು. ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಜ್ಯೋತಿ ಪ್ರಥಮ, ಪುರುಷರ ವಿಭಾಗದಲ್ಲಿ ಎಚ್.ಪಿ .ಸಮಿತ್ ಪ್ರಥಮ ಸ್ಥಾನ ಪಡೆದರು.

ಕಾಳುಹೆಕ್ಕುವ ಸ್ಪರ್ಧೆಯಲ್ಲಿ ಕಶ್ವಿ ಪ್ರಥಮ, ಜನ್ಮಿತಾ ದ್ವಿತೀಯ ಸ್ಥಾನ ಪಡೆದರು. ಹಿರಿಕರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎನ್. ಚಂದ್ರಶೇಖರ್, ಕಾರ್ಯದರ್ಶಿ ಕೀರ್ತಿ ಮುತ್ತಣ್ಣ, ಖಜಾಂಚಿ ಜಿ.ಕೆ.ವಿಜಯ್, ಪದಾಧಿಕಾರಿಗಳು ಹಾಗು ಗ್ರಾಮಸ್ಥರು ಇದ್ದರು.