ಗೋಣಿಕೊಪ್ಪಲು, ಏ.೧೬: ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಖಾಸಗಿ ಸಭೆ-ಸಮಾರಂಭಗಳಲ್ಲಿ ಮದ್ಯ ಬಳಕೆ ನಿರ್ಬಂಧಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೆ ಮರುಪರಿಶೀಲಿಸಿ ಅಬಕಾರಿ ಇಲಾಖೆ ಮದ್ಯ ಬಳಕೆಗೆ ಷರತ್ತುಬದ್ಧ ವಿನಾಯಿತಿ ನೀಡಿದೆ.
ಈ ಕುರಿತು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದು, ರಾಜಕೀಯ ಉದ್ದೇಶಕ್ಕೆ ಖಾಸಗಿ ಸಭೆ ಸಮಾರಂಭಗಳನ್ನು ಬಳಸಿಕೊಳ್ಳಬಾರದು. ಇದನ್ನು ಪ್ರಮಾಣಿಕರಿಸುವ ಉದ್ದೇಶದಿಂದ ಮದ್ಯ ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುವವರು ನೋಟರೀಕೃತ ಮುಚ್ಚಳಿಕೆಯನ್ನು ಜಿಲ್ಲಾ ಚುನಾವಣಾಧಿಕಾರಿಯ ಗಮನಕ್ಕೆ ತಂದು ಅವರ ಅನುಮತಿ ದೊರೆತ ಬಳಿಕ ಅಬಕಾರಿ ಇಲಾಖೆಯಿಂದ ಸಾಂದರ್ಭಿಕ ಸನ್ನದು (ಸಿಎಲ್-೫) ಪಡೆದುಕೊಳ್ಳಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಫೆಡರೇಶನ್ ಆಫ್ ಕೊಡವ ಸಮಾಜ, ಫೆಡರೇಶನ್ ಆಫ್ ಗೌಡ ಸಮಾಜ ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಕೆ.ಟಿ. ಪೆಮ್ಮಯ್ಯ ಮತ್ತು ಗೋಣಿಕೊಪ್ಪಲುವಿನ ಹಿರಿಯ ವರ್ತಕರಾದ ಗುಮ್ಮಟೀರ ಕಿಲನ್ ಗಣಪತಿ ಮುಂದಾಳತ್ವದಲ್ಲಿ ರಾಜ್ಯ ಚುನಾವಣಾ ಅಧಿಕಾರಿಗಳಾದ ಮನೋಜ್ ಕುಮಾರ್ ಮೀನಾ ಅವರನ್ನು ಖುದ್ದು ಭೇಟಿ ಮಾಡಿ ಕೊಡವರ ಮದುವೆ ಇನ್ನಿತರ ಸಮಾರಂಭಗಳಿಗೆ ಮದ್ಯ ಬಳಕೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದುದನ್ನು ಸ್ಮರಿಸಬಹುದಾಗಿದೆ.
- ಜಗದೀಶ್