ಕಣಿವೆ, ಏ. ೧೬: ಕಣಿವೆಯಿಂದ ಸೋಮವಾರಪೇಟೆಗೆ ತೆರಳುವ ಮಾರ್ಗದ ಹೊಸಳ್ಳಿ ಗ್ರಾಮದ ರಾಯ್ ಡೇವಿಡ್ ಎಂಬವರಿಗೆ ಸೇರಿದ ಜಾಗದಲ್ಲಿ ಇರುವ ನಾಗಲಿಂಗ ಪುಷ್ಪದ ಮರ ಹಾಗೂ ಅದರಲ್ಲಿನ ಹೂವು ಮತ್ತು ಗೋಳಾಕಾರದ ಕಾಯಿಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಮರದ ಖಾಂಡದಲ್ಲಿ ಬುಡದಿಂದಲೂ ಎತ್ತರಕ್ಕೆ ಒಂದೇ ಸಮನೆ ಗೊಂಚಲು ಗೊಂಚಲಾಗಿ ಬಿಟ್ಟಿರುವ ನಾಗಲಿಂಗ ಪುಷ್ಪದ ಕಾಯಿಗಳು ಹೂಗಳೊಂದಿಗೆ ಕಾಣುವ ಚಿತ್ರಣ ನಿಜಕ್ಕೂ ಆಕರ್ಷಕ ಹಾಗೂ ಮನ ಮೋಹಕ. ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿರುವ ಈ ವೃಕ್ಷ ತನ್ನಲ್ಲಿನ ಸುಂದರವಾದ ಹಾಗೂ ಸುಗಂಧಭರಿತವಾದ ಹೂಗಳ ಮೂಲಕ ಎಂಥವ ರನ್ನು ಮಂತ್ರ ಮುಗ್ಧಗೊಳಿಸು ತ್ತದೆ.

ದಕ್ಷಿಣ ಅಮೇರಿಕದ ಉಷ್ಣವಲಯ ಮೂಲದ್ದು ಎನ್ನಲಾದ ಈ ಮರ ೧೨೦ ಅಡಿಗಳಷ್ಟು ಎತ್ತರ ಹಾಗೂ ೧೫ ರಿಂದ ೨೦ ಅಡಿ ಸುತ್ತಳತೆಯಲ್ಲಿ ಬೆಳೆಯುತ್ತದೆ. ನಿತ್ಯಹರಿದ್ವರ್ಣವಾದ ಈ ಮರದ ವಿಶೇಷತೆಯೇ ಇದರಲ್ಲಿ ಬಿಡುವ ಹೂಗಳು ಹಾಗೂ ಕಾಯಿಗಳು. ಸಾಮಾನ್ಯವಾಗಿ ಬಹುತೇಕ ಸಸ್ಯ, ಗಿಡ ಮರಗಳಲ್ಲಿ ರೆಂಬೆಗಳಲ್ಲಿ ಅಥವಾ ಅದರ ತುದಿಯಲ್ಲಿ ಹೂ ಬಿಟ್ಟರೆ ಈ ನಾಗಲಿಂಗ ಪುಷ್ಪದ ಮರದಲ್ಲಿ ಇದರ ಖಾಂಡದಲ್ಲಿಯೇ ಹೂ ಬಿಡುವುದು ಇದರ ವಿಶೇಷತೆ.

ಗೋಧಿ ಬಣ್ಣದಂತಹ ನೀಳವಾದ ತೊಟ್ಟುಗಳಲ್ಲಿ ಹಸಿರು ಬಣ್ಣದ ಗೋಲಿ ಗಳಂತಹ ಮೊಗ್ಗುಗಳಾಗಿ ನಂತರ ಮಾಸಲು ಹಳದಿ ಬಣ್ಣಕ್ಕೆ ತಿರುಗಿ ಅರಳಿದ ಬಳಿಕ ಕೆಂಪು ಬಣ್ಣದ ಆರು ದಳಗಳಾಗಿ ಅದರೊಳಗೆ ಶಿವಲಿಂಗದ ರೂಪಿನ ಮೇಲೆ ನಾಗರಹಾವಿನ ಹೆಡೆ ಎತ್ತಿ ಬಾಗಿದ ರೀತಿ ನಮಿಸಿದಂತೆ ಕಾಣುವ ಸುವಾಸನೆ ಭರಿತ ಈ ಹೂವು ನಾಗಲಿಂಗ ಪುಷ್ಪವಾಗಿ ಮಾರ್ಪಟ್ಟಿರು ವುದು ಪ್ರಕೃತಿಯ ವಿಸ್ಮಯವೇ ಸರಿ. ಪ್ರತಿ ದಿನ ಮುಂಜಾನೆ ಅರಳಿ ಮುಸ್ಸಂಜೆಯಲ್ಲಿ ಮುದುಡುವ ಈ ಹೂವು ಹಿಂದೂ ಧಾರ್ಮಿಕ ಪದ್ಧತಿ ಯಲ್ಲಿ ಶಿವನ ಪೂಜೆಗೆ ಶ್ರೇಷ್ಠವಾದ ಸ್ಥಾನವನ್ನು ಹೊಂದಿದೆ.

ಸಾಮಾನ್ಯವಾಗಿ ವಿಶೇಷತೆಗಳ ಈ ಮರ ದೇವಾಲಯ, ಮಠ ಹಾಗೂ ಮಂದಿರಗಳಲ್ಲಿ ಕಾಣಬಹು ದಾಗಿದೆ. ತೊರೆನೂರು ವಿರಕ್ತ ಮಠ ಹಾಗೂ ಹಾರಂಗಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲೂ ಈ ಮರವನ್ನು ಕಾಣಬಹು ದಾಗಿದೆ. ಧಾರ್ಮಿಕತೆಯಲ್ಲಿ ಶ್ರೇಷ್ಠತೆಯನ್ನು ಹೊಂದಿರುವ ಈ ಮರವನ್ನು ಜನವಸತಿಗಳಲ್ಲಿ ಮನೆಯಾವರಣಗಳಲ್ಲಿ ಬೆಳೆಸಬಾರದು ಎಂಬ ಮೂರ್ಖತೆಯ ಪರಿಕಲ್ಪನೆಯಿಂದಾಗಿ ಈ ಮರ ಇಂದು ಅವನತಿಯ ಅಂಚಿನಲ್ಲಿದೆ.

ಗೋಳಾಕಾರದ ಕಾಯಿಗಳು

ಈ ಮರದ ಪರಿಮಳ ಭರಿತ ಹೂಗಳೊಂದಿಗೆ ಜೊಂಪೆಗಳಾಗಿ ತೂಗಾಡುವ ಗೋಳಾಕೃತಿಯ ಇದರ ಕಾಯಿಗಳು ತಿನ್ನಲು ಯೋಗ್ಯವಲ್ಲ ಎನ್ನಲಾಗುತ್ತಿದೆ. ಅಂದರೆ ವಾಸನೆ ಭರಿತವಾದ ಈ ಕಾಯಿಗಳನ್ನು ಆಯುರ್ವೇದ ಪದ್ಧತಿಯಲ್ಲಿ ಹಲವು ರೋಗಗಳಿಗೆ ರಾಮ ಬಾಣವಾಗಿ ಬಳಕೆಯಾಗುತ್ತಿದೆ. ಇದರ ಹೂವನ್ನು ಸುಗಂಧ ದ್ರವ್ಯಗಳ ತಯಾರಿಕೆಗೆ ಬಳಸುತ್ತಾರೆ. ಇದರ ಎಲೆ, ಖಾಂಡ ಹಾಗೂ ಕಾಯಿಗಳನ್ನು ಅಧಿಕ ರಕ್ತದೊತ್ತಡ, ಟ್ಯೂಮರ್‌ಗಳು, ಹೊಟ್ಟೆನೋವು, ಚರ್ಮರೋಗ, ಹಲ್ಲುನೋವು ಸೇರಿದಂತೆ ವಿವಿಧ ರೋಗಗಳ ನಿವಾರಣೆಯ ಔಷಧಿಗೆ ಬಳಕೆ ಮಾಡಲಾಗುತ್ತದೆ.

ಅಲ್ಲದೇ ಇದರ ಹೂವಿನಿಂದ ಕಷಾಯ ಹಾಗೂ ಎಲೆಗಳಿಂದ ಚಹಾ ಮಾಡಲು ಬಳಸಲಾಗುತ್ತದೆ ಎಂದು ವಿಜ್ಞಾನ ಹೇಳುತ್ತದೆ.

ಈ ಮರದ ಖಾಂಡವನ್ನು ಕ್ರಿಕೆಟ್ ಆಟಿಕೆಗಳು, ಕೇರಂ ಬೋರ್ಡ್ ಹಾಗೂ ವಿವಿಧ ಆಟಿಕೆಗಳ ತಯಾರಿಕೆಗೆ ಬಳಸಲಾಗುತ್ತದೆ.

ಒಟ್ಟಾರೆ ಈ ಮರದ ಸಸ್ಯಗಳನ್ನು ಅರಣ್ಯ ಇಲಾಖೆ ನರ್ಸರಿಗಳಲ್ಲಿ ನೆಟ್ಟು ಬೆಳೆಸಿ ಕೃಷಿಕರಿಗೆ ವಿತರಿಸುವ ಮೂಲಕ ಇದರ ಸಂತತಿಯನ್ನು ಉಳಿಸುವ ಕೆಲಸವಾಗಬೇಕಿದೆ. ಈ ಮರದ ಹೂಗಳ ಆಕರ್ಷಣೆ ಯಿಂದಾಗಿ ಧಾರ್ಮಿಕ ನಂಬಿಕೆ ಹಾಗೂ ಪೂಜಾ ವಿಧಾನ ಗಳಿಗೆ ಅನುವಾಗ ಲಿದೆ.