ಸೋಮವಾರಪೇಟೆ, ಏ. ೧೬: ಎಸ್.ಎಸ್. ಎಲ್.ಸಿ. ವಾರ್ಷಿಕ ಪರೀಕ್ಷೆ ಮುಗಿದ ನಂತರ ಕುಟುಂಬ ಸದಸ್ಯ ರೊಂದಿಗೆ ಖುಷಿ ಖುಷಿಯಾಗಿ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಿಗೆ ತೆರಳಿದ್ದ ಬಾಲಕನೋರ್ವ ಸಮುದ್ರ ಕಿನಾರೆಯಲ್ಲಿ ನಾಪತ್ತೆಯಾಗಿರುವ ಘಟನೆ ಇಂದು ಮಧ್ಯಾಹ್ನ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಸೋಮವಾರಪೇಟೆ ಪಟ್ಟಣ ಸಮೀಪದ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದ ನಿವಾಸಿ, ಟಿಂಬರ್ ಕೆಲಸ ಮಾಡಿಕೊಂಡಿರುವ ಶಶಿಕುಮಾರ್ (ಸಚಿನ್) ಹಾಗೂ ನೇರುಗಳಲೆ ಗ್ರಾಮ ಪಂಚಾಯಿತಿ ಸದಸ್ಯೆ ಕವಿತ ದಂಪತಿ ಪುತ್ರ ಸೃಜನ್ (೧೫) ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಪಟ್ಟಣದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ಯಾಗಿರುವ ಸೃಜನ್, ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆ ಬರೆದು ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿದ ಸಂದರ್ಭ ದುರ್ಘಟನೆ ಸಂಭವಿಸಿದೆ.
ನಿನ್ನೆ ದಿನ ಮನೆಯಲ್ಲಿ ವಿಷು ಹಬ್ಬವನ್ನು ಮುಗಿಸಿ, ಇಂದು ವಾರಾಂತ್ಯದ ದಿನವಾದ್ದರಿಂದ ಪ್ರವಾಸಕ್ಕೆ ತೆರಳಲಾಗಿತ್ತು. ಶಶಿಕುಮಾರ್ ಸೇರಿದಂತೆ ಅವರ ಕುಟುಂಬದ ೧೩ ಮಂದಿ ಸದಸ್ಯರು ಓಮಿನಿ ವ್ಯಾನ್ ಹಾಗೂ ಈಕೋ ಕಾರಿನಲ್ಲಿ ಕೇರಳಕ್ಕೆ ಪ್ರವಾಸ ಕೈಗೊಂಡಿದ್ದರು. ಇಂದು ಬೆಳಿಗ್ಗೆ ಪರಶಿನಕಡವು ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯಕ್ಕೆ ತೆರಳಿ ಅಲ್ಲಿಂದ ಪಯ್ಯಾಂಬಲ ಬೀಚ್ ಗೆ ಹೋಗಿದ್ದರು. ಮಧ್ಯಾಹ್ನ ೨.೩೦ರ ಸುಮಾರಿಗೆ ಕುಟುಂಬ ಸದಸ್ಯರೆಲ್ಲರೂ ಬೀಚ್‌ನಲ್ಲಿದ್ದ ಸಂದರ್ಭ ಸೃಜನ್ ಹಾಗೂ ಮಾವ ವಿನೋದ್ ಸ್ವಲ್ಪ ಮುಂದಕ್ಕೆ ತೆರಳಿದ್ದ ಸಂದರ್ಭ ಜೋರಾಗಿ ಅಲೆ ಅಪ್ಪಳಿಸಿದೆ. ಪರಿಣಾಮ ವಿನೋದ್ ಹಾಗೂ ಬಾಲಕ ಸೃಜನ್ ಸಮುದ್ರದಲ್ಲಿ ಮುಳುಗಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಕೋಸ್ಟಲ್ ಗಾರ್ಡ್ಗಳು ಕಾರ್ಯಾಚರಣೆಗೆ ಧುಮುಕಿ ವಿನೋದ್‌ನನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಅಷ್ಟರಲ್ಲಿ ಬಾಲಕ ಸೃಜನ್ ಕಣ್ಮರೆಯಾಗಿದ್ದಾನೆ.
ನಂತರ ಕೋಸ್ಟಲ್ ಪೊಲೀಸ್, ಸ್ಥಳೀಯ ಮೀನುಗಾರರು, ಹೆಚ್ಚುವರಿ ಕೋಸ್ಟಲ್ ಗಾರ್ಡ್ಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ವಿಷಯ ತಿಳಿಸಲಾಗಿದ್ದು, ಎಲ್ಲರೂ ಕಾರ್ಯಾಚರಣೆಗೆ ಧುಮುಕಿದರೂ ಬಾಲಕ ಪತ್ತೆಯಾಗಿಲ್ಲ.
ಕೇರಳದ ಹೊಸ ವರ್ಷ ವಿಷು ಹಾಗೂ ವಾರಾಂತ್ಯವೂ ಇದ್ದುದರಿಂದ ಪಯ್ಯಾಂಬಲ ಬೀಚ್‌ನಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಇದ್ದರು. ಈ ಮಧ್ಯೆ ಬೆರಳೆಣಿಕೆಯಷ್ಟು ಇರುವ ಕೋಸ್ಟಲ್ ಗಾರ್ಡ್ಗಳು ಎಲ್ಲರ ಮೇಲೂ ನಿಗಾ ವಹಿಸಲು ಸಾಧ್ಯವಾಗಿಲ್ಲ. ಸುಮಾರು ೧ ಕಿ.ಮೀ. ಉದ್ದದವರೆಗೆ ಕಡಲ ಕಿನಾರೆಯಿದ್ದು, ಎಲ್ಲರ ಮೇಲೂ ಕಣ್ಗಾವಲು ಇರಿಸಲು ಅಸಾಧ್ಯವಾಗಿತ್ತು ಎನ್ನಲಾಗಿದೆ.
ಘಟನಾ ಸ್ಥಳದಲ್ಲಿ ಸ್ಥಳೀಯ ಪೊಲೀಸ್, ಕೋಸ್ಟಲ್ ಗಾರ್ಡ್, ಅಗ್ನಿ ಶಾಮಕ ಸಿಬ್ಬಂದಿಗಳು ಸೇರಿದಂತೆ ಇತರ ರಕ್ಷಣಾ ಪಡೆಗಳ ಸಿಬ್ಬಂದಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಕಡಲಿನಲ್ಲಿ ಕಣ್ಮರೆಯಾಗಿರುವ ಪುತ್ರನನ್ನು ಕಾಣಲು ಪೋಷಕರು ಹಂಬಲಿಸುತ್ತಿದ್ದು, ಅವರ ರೋಧನ ಮುಗಿಲು ಮುಟ್ಟಿದೆ. ಸಂತೋಷದ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಪ್ರವಾಸ ಅತೀವ ದುಃಖಕ್ಕೆ ಕಾರಣವಾಗಿದೆ ಎಂದು ಕುಟುಂಬದ ಸದಸ್ಯರೋರ್ವರು ತಿಳಿಸಿದ್ದಾರೆ.
ಶಶಿಕುಮಾರ್ ಹಾಗೂ ಕವಿತ ದಂಪತಿಗೆ ಓರ್ವ ಪುತ್ರಿ ಹಾಗೂ ಓರ್ವ ಪುತ್ರನಿದ್ದು, ಕಿರಿಯವನಾದ ಪುತ್ರ ಸೃಜನ್ ಇದೀಗ ಕಡಲಿನಲ್ಲಿ ನಾಪತ್ತೆಯಾಗಿದ್ದಾನೆ.