ಕೂಡಿಗೆ, ಏ. ೧೬: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿ ಈಗಾಗಲೇ ಸುಂದರವಾದ ಬೃಂದಾವನ ಉದ್ಯಾನವನ ನಿರ್ಮಾಣಗೊಂಡಿದೆ. ಇದರ ಜೊತೆಯಲ್ಲಿ ಆಧುನಿಕ ತಂತ್ರಜ್ಞಾನದ ಸಂಗೀತ ಕಾರಂಜಿಯ ವ್ಯವಸ್ಥೆ ಇದ್ದು, ಇದರ ವೀಕ್ಷಣೆಗೆ ಜಿಲ್ಲೆಯ ಪ್ರವಾಸಿಗರು ಸೇರಿದಂತೆ ರಾಜ್ಯದ ಅನೇಕ ಪ್ರವಾಸಿಗರು ಬರುತ್ತಿರುತ್ತಾರೆ. ಇದರ ಜೊತೆಯಲ್ಲಿ ಅಣೆಕಟ್ಟೆಯ ಮುಂಭಾಗದಲ್ಲಿ ಅಣೆಕಟ್ಟೆಯಿಂದ ನೀರು ಹರಿಯುವ ದೃಶ್ಯವನ್ನು ಹತ್ತಿರದಿಂದ ಪ್ರವಾಸಿಗರು ವೀಕ್ಷಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತೂಗುಸೇತುವೆಯನ್ನು ನಿರ್ಮಾಣ ಮಾಡಬೇಕೆಂದು ಹಾರಂಗಿಗೆ ಆಗಮಿಸುವ ಪ್ರವಾಸಿಗರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕುಶಾಲನಗರ ತಾಲೂಕಿನ ಕಾವೇರಿ ನಿರ್ಸಗಧಾಮ, ದುಬಾರೆ ಸಾಕಾನೆ ಶಿಬಿರ, ಸಮೀಪದ ಟಿಬೆಟ್ ಕೇಂದ್ರ, ಹಾರಂಗಿಯ ಸಾಕಾನೆ ಶಿಬಿರ ಸೇರಿದಂತೆ ವೀಕ್ಷಣೆ ಮಾಡುವ ಸ್ಥಳಗಳು ಹೆಚ್ಚು ಇರುವುದರಿಂದ ಹಾರಂಗಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ತೂಗುಸೇತುವೆ ನಿರ್ಮಾಣ ಮಾಡುವಂತೆ ಈ ವ್ಯಾಪ್ತಿಯ ಸಾರ್ವಜನಿಕರು, ಪ್ರವಾಸಿಗರ ಒತ್ತಾಯವಾಗಿದೆ. -ಕೆ.ಕೆ.ಎನ್. ಶೆಟ್ಟಿ