ಗೋಣಿಕೊಪ್ಪಲು, ಏ. ೧೫: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಚುನಾವಣಾ ಆಯೋಗ ಕೊಡಗಿನ ವಿವಾಹ ಕಾರ್ಯಕ್ರಮದಲ್ಲಿ ಮದ್ಯ ಬಳಸಲು ಅನುಮತಿ ನಿರಾಕರಿಸಿದೆ.

ಈ ಹಿನ್ನೆಲೆಯಲ್ಲಿ ಫೆಡರೇಶನ್ ಆಫ್ ಕೊಡವ ಸಮಾಜ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಕೆ.ಟಿ.ಪೆಮ್ಮಯ್ಯ ಹಾಗೂ ಗೋಣಿಕೊಪ್ಪಲುವಿನ ಹಿರಿಯ ವರ್ತಕರಾದ ಗುಮ್ಮಟೀರ ಕಿಲನ್ ಗಣಪತಿ ಮುಂದಾಳತ್ವದ ನಿಯೋಗ ರಾಜ್ಯ ಚುನಾವಣಾ ಅಧಿಕಾರಿಗಳಾದ ಮನೋಜ್ ಕುಮಾರ್ ಮೀನಾ ಅವರನ್ನು ಖುದ್ದು ಭೇಟಿ ಮಾಡಿ ಕೊಡಗಿನ ವಿವಾಹ ಪದ್ಧತಿ ಪರಂಪರೆ ಬಗ್ಗೆ ಸಮಗ್ರವಾಗಿ ವಿವರಿಸಿತು.

ಕೊಡವರ ಮದುವೆ ಮತ್ತು ಇನ್ನಿತರ ಸಮಾರಂಭಗಳಲ್ಲಿ ಮಾಂಸಹಾರ ಮತ್ತು ಮದ್ಯ ಸೇವನೆ ಹಿಂದಿನಿAದಲೂ ರೂಢಿಯಲ್ಲಿದೆ. ಅಂತಹ ಸಮಾರಂಭಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ವಿವಾಹ ಸಮಾರಂಭಗಳಲ್ಲಿ ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ಹಾಗೂ ಇತರ ಪ್ರಚಾರ ಕಾರ್ಯಗಳೂ ನಡೆಯುವುದಿಲ್ಲ.

ಚುನಾವಣೆ ಸಂದರ್ಭದಲ್ಲಿ ಕೊಡಗು ಜಿಲ್ಲೆ, ಬೆಂಗಳೂರು ಮತ್ತು ಮೈಸೂರು ಇನ್ನಿತರ ಜಿಲ್ಲೆಗಳಲ್ಲಿ ಕೊಡವರ ಮದುವೆ ಮತ್ತು ಇನ್ನಿತರ ಸಮಾರಂಭಗಳು ನಿಗದಿಯಾಗಿದ್ದು, ಈ ನಡುವೆ ಏ. ೧೨ ರಂದು ಕೊಡಗಿನ ಅಬಕಾರಿ ಇಲಾಖೆಯು ಮದುವೆ ಸಮಾರಂಭಗಳಲ್ಲಿ ಮದÀ್ಯ ಬಳಕೆಗೆ ನಿರ್ಬಂಧ ಹಾಕಿದ್ದು, ಕೊಡವರ ಮದುವೆ ಮತ್ತು ಇನ್ನಿತರ ಸಮಾರಂಭಗಳಲ್ಲಿ ಮದ್ಯ ಬಳಕೆಗೆ ಅನುಮತಿ ಮತ್ತು ಅವಕಾಶ ನೀಡುವಂತೆ ನಿಯೋಗ ಮನವಿ ಮಾಡಿತು.

ಈ ವೇಳೆ ಚುನಾವಣಾ ಅಧಿಕಾರಿಗಳು ನಿಯೋಗದವರಿಂದ ಸಂಪೂರ್ಣ ಮಾಹಿತಿ ಪಡೆದು ಎರಡು ದಿನಗಳಲ್ಲಿ ಈ ಬಗ್ಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಕಿಲನ್ ಗಣಪತಿ ಮಾಹಿತಿ ಒದಗಿಸಿದ್ದಾರೆ.

ಇದೇ ವಿಚಾರವಾಗಿ ಫೆಡರೇಷನ್ ಆಫ್ ಗೌಡ ಸಮಾಜ ರಾಜ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ವಿವಾಹ ಸಮಾರಂಭದಲ್ಲಿ ಮದ್ಯ ಬಳಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದೆ.