ಎಮ್ಮೆಮಾಡು ಇದು ಜಿಲ್ಲೆಯ ಮತ ಮೈತ್ರಿಯ ಆಧ್ಯಾತ್ಮಿಕ ಕೇಂದ್ರ. ಮಡಿಕೇರಿಯಿಂದ ೩೦. ಕಿ. ಮೀ. ಅಂತರ ದಲ್ಲಿರುವ ಎಮ್ಮೆಮಾಡಿನಲ್ಲಿ ಶತಮಾನಗಳ ಹಿಂದೆ ಬಂದು ನೆಲೆಸಿರುವ ಸೂಫಿ ಸಂತರ ಪುಣ್ಯಸನ್ನಿಧಿ ಇದ್ದು, ಸೂಫಿಶಹೀದ್ ಹಾಗೂ ಸೆಯ್ಯದ್ ಹಸನ್ ಸಖಾಫ್ ಎಂಬ ಹೆಸರಿನಿಂದ ಕರೆಯಲ್ಪಡುವ ಉಭಯ ಸಂತರ ಈ ತಾಣ ಜಾತಿಮತ ಭೇದವಿಲ್ಲದೆ ಇಲ್ಲಿಗೆ ಆಗಮಿಸುತ್ತಿರುವ ಭಕ್ತರ ಪಾಲಿನ ಅಭಯ ಕೇಂದ್ರವೆನಿಸಿದೆ.
ಇಲ್ಲಿನ ದರ್ಗಾಶರೀಫ್ನಲ್ಲಿ ಅಂತ್ಯವಿಶ್ರಾAತಿ ಪಡೆಯುತ್ತಿರುವ ಸೂಫಿ ಶಹೀದ್ ಅವರು, ಪವಾಡ ಪುರುಷರಾಗಿದ್ದು, ಸುಮಾರು ಮೂರು ಶತಮಾನಗಳ ಹಿಂದೆ ಬಂದು ನೆಲೆನಿಂತವರು. ಇವರು ಎಮ್ಮೆಮಾಡು ಗ್ರಾಮದ ಪ್ರಶಾಂತ ಪರಿಸರದ ಬರಾಕೊಲ್ಲಿ ಎಂಬಲ್ಲಿ ಬಂಡೆಕಲ್ಲೊAದರಲ್ಲಿ ಮೇಲೆ ಮರಣಶಯ್ಯೆಯಲ್ಲಿದ್ದಾಗ ಹಸುವೊಂದು ಕೊಟ್ಟಿಗೆಯಿಂದ ಹಗ್ಗ ತುಂಡರಿಸಿ ಓಡಿಬಂದು ಸಮೀಪದ ಕಾಲುವೆಯೊಂದರಲ್ಲಿ ತನ್ನ ಕೆಚ್ಚಲು ಮುಳುಗಿಸಿ ಈ ಪುಣ್ಯಪುರುಷರಿಗೆ ಮಂಡಿಯೂರಿ ಹಾಲುಣಿಸಿದ ಪವಾಡ ನಡೆದಿದ್ದು, ಈ ಕಾರಣದಿಂದಾಗಿ ದನಕರುಗಳ ರೋಗ ರುಜಿನಗಳಿಗೆ ಈ ಪುಣ್ಯಸ್ಥಳಕ್ಕೆ ಹರಕೆ ಹೊತ್ತಲ್ಲಿ ಆಶ್ಚರ್ಯಕರ ರೀತಿಯಲ್ಲಿ ಶಮನ ದೊರಕುತ್ತಿದೆ ಎನ್ನಲಾಗಿದೆ. ಇದು ಇಂದಿಗೂ ಮುಂದುವರಿದು ಕೊಂಡು ಬಂದಿದ್ದು, ಇಲ್ಲಿನ ವಾರ್ಷಿಕ ಉರೂಸ್ನಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ ಭಕ್ತರು ಜಾತಿಮತವಿಲ್ಲದೆ ಬಂದು ಸೇರುತ್ತಾರೆ. ಹೀಗಾಗಿ ಇದು, ಸರ್ವಜನಾಂಗ ಬಾಂಧವರ ಭಾವೈಕ್ಯತಾ ಕೇಂದ್ರವೆನಿಸಿದೆ. ಉರೂಸ್ನ ಸಂದರ್ಭದಲ್ಲಿ ಆಡು, ಕೋಳಿ, ಅಕ್ಕಿ, ತುಪ್ಪ, ಜೇನು ಮುಂತಾದವು ಹರಕೆ ರೂಪದಲ್ಲಿ ಬರುತ್ತಿದ್ದು, ಈ ವಸ್ತುಗಳನ್ನು ಸೂಫಿ ಸಂತರ ಹೆಸರಿನಲ್ಲಿ ಹರಾಜಿನ ಮೂಲಕ ಆಸಕ್ತರಿಗೆ ನೀಡಲಾಗುತ್ತಿದೆ. ವರ್ಷ ಕಳೆದಂತೆ ಎಮ್ಮೆಮಾಡು ದರ್ಗಾ ಶರೀಫ್ಗೆ ಬರುವ ಭಕ್ತಾದಿಗಳ ಸಂಖ್ಯೆ ಅಧಿಕಗೊಳ್ಳುತ್ತಲೇ ಇದೆ. ಈ ಅಧ್ಯಾತ್ಮಿಕ ಕೇಂದ್ರದಲ್ಲಿ ಇಲ್ಲಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಕಮಿಟಿಯು ಕೆಲವು ನಾಗರಿಕ ಸೌಲಭ್ಯಗಳನ್ನೂ ಕಲ್ಪಿಸಿ ಕೊಟ್ಟಿದೆ. ಸಾವಿರಾರು ಭಕ್ತರು ಏಕಕಾಲದಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಲು ಅನುಕೂಲವಾಗುವಂತೆ ಇಲ್ಲಿ ಜಿಲ್ಲೆಯಲ್ಲೆ ಅತ್ಯಂತ ವಿಶಾಲವಾದ ಭವ್ಯ ಮಸೀದಿಯನ್ನು ನಿರ್ಮಿಸ ಲಾಗಿದೆ. ಇಲ್ಲಿನ ಜಮಾಅತ್ನ ಅಧೀನದಲ್ಲಿ ಭಕ್ತರ ಅನುಕೂಲಕ್ಕೆ ಐದು ಶಾಖಾಮಸೀದಿಗಳನ್ನೂ ನಿರ್ಮಿಸಿಕೊಡಲಾಗಿದೆ.
ಈ ಪುಣ್ಯಸ್ಥಳದಲ್ಲಿ ಭಕ್ತರಿಂದ ಸಂಗ್ರಹವಾಗುವ ಕಾಣಿಕೆ ಹಣಬಳಿಸಿ ಬಡ ಮತ್ತು ಅನಾಥ ಬಾಲಕರಿಗೆ ಆಶ್ರಯ ಕಲ್ಪಿಸುವ ಅನಾಥಾಲಯವೊಂದನ್ನು ಸೂಫಿ ಶಹೀದ್ ಅವರ ಹೆಸರಿನಲ್ಲೇ ನಿರ್ಮಿಸಿ ಕಳೆದ ೨೬ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ಪ್ರಸ್ತುತ ೬೦ ವಿದ್ಯಾರ್ಥಿಗಳು ಸೌಲಭ್ಯ ಪಡೆಯುತ್ತಿದ್ದು, ಇದುವರೆಗೆ ಸಾವಿರಾರು ಬಾಲಕರು ಶಿಕ್ಷಣ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಇಲ್ಲಿ ಉಚಿತ ಊಟ, ಉಡುಪು ವಸತಿ, ಶಿಕ್ಷಣ ಒದಗಿಸಲಾಗುತ್ತಿದೆ. ಶಾಲಾ ಶಿಕ್ಷಣದೊಂದಿಗೆ ಮದರಸ ಶಿಕ್ಷಣವನ್ನು ಕೂಡ ಇಲ್ಲಿ ಒದಗಿಸಲಾಗುತ್ತಿದೆ. ಅನಾಥಾಲಯದಲ್ಲಿ ಶಿಕ್ಷಣಕ್ಕೆ ಒತ್ತು ಕೊಡುವ ಸಲುವಾಗಿ ‘ಸ್ಮಾರ್ಟ್ ಕ್ಲಾಸ್’ ಹಾಗೂ ಗ್ರಂಥಾಲಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇಲ್ಲಿ ಬಡ ಅನಾಥಮಕ್ಕಳಿಗೆ ಎಸ್.ಎಸ್.ಎಲ್.ಸಿ. ವರೆಗಿನ ಶಿಕ್ಷಣಕೊಡಿಸಿ ಆ ಬಳಿಕ ವಿದ್ಯಾರ್ಥಿಗಳ ಇಚ್ಛೆಗನುಗುಣವಾಗಿ ಉನ್ನತ ಶಿಕ್ಷಣ ಪಡೆಯಲು ಸಹಕಾರ ನೀಡಲಾಗುತ್ತಿದೆ. ಬಾಲಕ-ಬಾಲಕಿಯರೂ ಸೇರಿದಂತೆ ಸುಮಾರು ೮೦೦ ವಿದ್ಯಾರ್ಥಿಗಳನ್ನೊಳಗೊಂಡ ಅರಬಿ ಮದ್ರಸವನ್ನು ಜಮಾಅತ್ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ಬಡಮಕ್ಕಳಿಗೆ ಉಚಿತ ಪುಸ್ತಕಗಳನ್ನು ಒದಗಿಸಲಾಗುತ್ತಿದೆ.
ದಫ್ಕಲೆಗೆ ಪ್ರೋತ್ಸಾಹ
ಎಮ್ಮೆಮಾಡಿನಲ್ಲಿ ಇಸ್ಲಾಮಿಕ್ ಜಾನಪದ ಕಲೆಯಾದ ‘‘ದಫ್’’ ಪ್ರದರ್ಶನವನ್ನು ಆಸಕ್ತರಿಗೆ ಕಲಿಸಲಾಗುತ್ತಿದೆ. ದಫ್ಕಲೆಯ ಪ್ರದರ್ಶನ ಕೂಡ ಇಲ್ಲಿನ ವಾರ್ಷಿಕ ಉರೂಸ್ ಸಂದರ್ಭದಲ್ಲಿ ಸಾರ್ವಜನಿಕರ ಗಮನ ಸೆಳೆಯುತ್ತದೆ. ವಾರ್ಷಿಕ ಉರೂಸ್ ಸಂದರ್ಭ ಪಾಲ್ಗೊಳ್ಳುವ ಅಪಾರ ಸಂಖ್ಯೆಯ ಸಾರ್ವಜನಿಕರಿಗೆ ದರ್ಗಾಶರೀಫ್ಗೆ ಅನತಿ ದೂರದಲ್ಲಿರುವ ಕಾವೇರಿ ನದಿ ತೀರದಲ್ಲಿ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅದರ ಪಾಲು ಮನೆ ಮಂದಿಗೂ ದೊರಕಲಿ ಎಂಬ ಉದ್ದೇಶದಿಂದ ಅನ್ನವನ್ನು ಪೊಟ್ಟಣದಲ್ಲಿ ಕೊಡಲಾಗುತ್ತದೆ.
ಹೆಣ್ಣು ಮಕ್ಕಳ ವಿವಾಹಕ್ಕೆ ಪ್ರೋತ್ಸಾಹ
ಜಮಾಅತ್ ವ್ಯಾಪ್ತಿಯ ಬಡ ಹೆಣ್ಣು ಮಕ್ಕಳ ವಿವಾಹವನ್ನು ಜಮಾಅತ್ನ ಖರ್ಚಿನಲ್ಲಿ ನಡೆಸಿಕೊಡಲಾಗುತ್ತಿದ್ದು, ವಿವಾಹಾರ್ಥ ಆರ್ಥಿಕ ನೆರವು ಕೋರಿದವರಿಗೂ ಜಮಾಅತ್ ನಿರ್ಧರಿಸುವ ಮೊತ್ತವನ್ನು ನೀಡಲಾಗುತ್ತಿದೆ.
ಆಧ್ಯಾತ್ಮಿಕ ಸ್ವಲಾತ್
ಪ್ರತಿ ಗುರುವಾರ ಸಂಜೆ ಮುಹಮ್ಮದ್ ಪೈಗಂಬರರ ಗುಣಗಾನದ ‘‘ಸ್ವಲಾತ್’’ ಕಾರ್ಯಕ್ರಮ ನಡೆಯುತ್ತಿದ್ದು, ಇದರಲ್ಲಿ ಗಣನೀಯ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಅಬೂಬಕರ್ ಸಖಾಫಿ ಅಧ್ಯಕ್ಷರಾಗಿರುವ ಜಮಾಅತ್ ಸಮಿತಿಯ ಉಪಾಧ್ಯಕ್ಷ ರಾಗಿ ಬಿ. ಯು. ಅಶ್ರಫ್, ಕಾರ್ಯದರ್ಶಿಯಾಗಿ ಹಾರಿಸ್ ಕಾರ್ಯ ನಿರ್ವಹಿಸುತ್ತಿದ್ದಾರೆ.
-ನೌಫಲ್ ಎಂ. ಬಿ., ಕಡಂಗ.