ಬಹುತೇಕ ಈ ದಶಕಾಂತ್ಯದಲ್ಲಿ ಮಂಗಳ ಗ್ರಹದಲ್ಲಿ ನೆಲೆ ನಿಲ್ಲಲು, ಅಲ್ಲೆ ವಾಸ ಮಾಡಲು ಕಾಲೋನಿಗಳನ್ನು ಸ್ಥಾಪಿಸಿ ಅಂತರಗ್ರಹ ಜೀವಿ ಎಂಬ ಹೆಗ್ಗಳಿಕೆಯನ್ನು ಪಡೆಯುವ ಸಾಹಸಕ್ಕೆ ಮಾನವನು ಮುಂದಾಗಿದ್ದು, ಪ್ರಸ್ತುತ ವರ್ಷದಿಂದಲೇ ೪ ಮಂದಿ ಅನ್ಯ ಗ್ರಹದ ವಾತಾವರಣದಲ್ಲಿ ಜೀವಿಸಲು ಸಿದ್ಧಗೊಳ್ಳುತ್ತಿದ್ದಾರೆ.
ಸೌರ ಮಂಡಲದಲ್ಲಿನ ೯ ಗ್ರಹಗಳಲ್ಲಿ ಭೂಮಿಗೆ ಅತ್ಯಂತ ಸಮೀಪವಿರುವುದು ಶುಕ್ರ ಗ್ರಹವಾಗಿದ್ದರೂ, ಅಲ್ಲಿನ ವ್ಯತಿರಿಕ್ತ ವಾತಾವರಣ, ಹವಾಮಾನವು ಕೆಲವೇ ಸೆಕೆಂಡುಗಳಲ್ಲಿ ಜೀವರಾಶಿಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಉಳಿದಂತೆ ಭೂಮಿಗೆ ಹತ್ತಿರವಿರುವುದು ಮಂಗಳ ಗ್ರಹ(ಸರಾಸರಿ ದೂರ - ೨೩.೬೫ ಕೋಟಿ ಕಿ.ಮೀ). ಕಬ್ಬಿಣಾಂಶದಿAದ ಕೆಂಪನೆ ಹೊಳೆಯುವ ಮಂಗಳವು ಗಾತ್ರದಲ್ಲಿ ಭೂಮಿಗಿಂತ ಅಲ್ಪಮಟ್ಟದಲ್ಲಿ ಮಾತ್ರ ಚಿಕ್ಕದಾಗಿದ್ದು, ಇತರೆ ಗ್ರಹಗಳಿಗೆ ಹೋಲಿಸಿದರೆ ಮಾನವ ಜೀವವೃದ್ಧಿಗೆ ಸೂಕ್ತವಾಗಿರುವ ಗ್ರಹ.
ಮತ್ತೊಂದು ವಿಶೇಷವೇನೆಂದರೆ ಅನ್ಯಗ್ರಹಗಳ ಪೈಕಿ ಇದೊಂದೆ ಗ್ರಹದಲ್ಲಿ ಕೆಲ ಬಾಹ್ಯಾಕಾಶ ಸಂಸ್ಥೆಗಳು ತಮ್ಮ ಪರಿಕರಗಳನ್ನು ನೆಲ ಮುಟ್ಟಿಸಿರುವುದು. ಇತರ ಗ್ರಹಗಳ ಕಕ್ಷೆಗಳ ಸುತ್ತ ಬಾಹ್ಯಾಕಾಶ ನೌಕೆಗಳು ಚಲಿಸಿವೆ ಹೊರತು ನೆಲೆಮುಟ್ಟುವ ನೈಪುಣ್ಯತೆ ಹೊಂದಿಲ್ಲ. ಇವೆಲ್ಲದರ ನಡುವೆ ಇದೀಗ ಮಾನವನನ್ನೇ ಅನ್ಯ ಗ್ರಹಕ್ಕೆ ಕಳುಹಿಸುವ ಹಾಗೂ ಅವರುಗಳು ಅಲ್ಲೆ ಶಾಶ್ವತವಾಗಿ ನೆಲೆ ಕಾಣುವ , ಆ ಮೂಲಕ ಅಂತರಗ್ರಹ ಜೀವಿ ಎಂದೆನಿಸಿಕೊಳ್ಳುವ ಸಾಹಸಕ್ಕೆ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ (ಓಂSA) ಮುಂದಾಗಿದೆ. ಹಲವು ವರ್ಷಗಳಿಂದ ಈ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ರಾಕೆಟ್, ಬಾಹ್ಯಾಕಾಶ ನೌಕೆ ಇತ್ಯಾದಿ ತಾಂತ್ರಿಕ ಪರಿಕರಗಳ ಸಿದ್ಧತೆ, ಪರೀಕ್ಷೆಗಳನ್ನು ಸಂಸ್ಥೆ ಮಾಡುತ್ತಿದೆ. ಆದರೆ, ಇವೆಲ್ಲದಕ್ಕಿಂತಲೂ ಪ್ರಮುಖವಾಗಿರುವ ಕಾರ್ಯ - ಒಮ್ಮೆ ಮಾನವನು ಮಂಗಳ ತಲುಪಿದ ಬಳಿಕ, ಅಲ್ಲಿನ ಪ್ರತಿಕೂಲ ಗಾಳಿ ರಹಿತ ವಾತಾವರಣದಲ್ಲಿ ವಾಸ ಮಾಡುವುದಾಗಿದೆ.
ಈ ನಿಟ್ಟಿನಲ್ಲಿ ಪ್ರಸ್ತುತ ವರ್ಷದ ಜೂನ್‌ನಲ್ಲಿ ಮಂಗಳ ಗ್ರಹ ಹೋಲಿತ ವಾತಾವರಣದಲ್ಲಿ ಗಗನಸಖಿಯರಲ್ಲದ ಸಾಮಾನ್ಯ ೪ ಮಂದಿ ತಮ್ಮ ದೈನಂದಿನ ಜೀವನ ಕಳೆಯಲಿದ್ದಾರೆ. ಈ ವಾತಾವರಣದಲ್ಲಿ ಮಂಗಳ ಗ್ರಹದಲ್ಲಿ ಸಂಭವಿಸಬಹುದಾದ ಅನಾಹುತ, ವ್ಯತಿರಿಕ್ತ ಹವಾಮಾನಗಳನ್ನೂ ಒಟ್ಟು ೪ ಮಂದಿ ಒಂದು ವರ್ಷ ಕಾಲ ಮಂಗಳ ಗ್ರಹದ ವಾತಾವರಣವುಳ್ಳ ‘೩ಡಿ ಪ್ರಿಂಟೆಡ್’ ಆವಾಸಸ್ಥಾನದೊಳಗೆ ಇರಲಿದ್ದಾರೆ. ಈ ಆವಾಸಸ್ಥಾನವು ಮಂಗಳ ಗ್ರಹವನ್ನೇ ಹೋಲುವಂತಹ ಮಣ್ಣು. ಅಲ್ಲಿರುವ ರೀತಿಯೇ ತಾಪಮಾನ ಇತ್ಯಾದಿ ಅಂಶಗಳನ್ನು ಹೊಂದಿರಲಿದ್ದು, ಮಂಗಳ ಗ್ರಹದಲ್ಲಿಯೇ ಇರುವ ಅನುಭವ ನೀಡಲಿದೆ.
೪ ಮಂದಿಗೆ ತಂಗಲು ಸ್ಥಳ, ಅಡುಗೆಮನೆ, ಔಷಧಿಕೋಣೆ, ಮನರಂಜನಾ ಚಟುವಟಿಕೆಗಳ ಕೇಂದ್ರ , ಆರೋಗ್ಯ ವೃದ್ಧಿ ಕೇಂದ್ರ ಹಾಗೂ ಬೆಳೆ ಬೆಳೆಯಲೂ ಸ್ಥಳಾವಕಾಶ ಇರಲಿದೆ. ೧ ವರ್ಷ ಕಾಲ ಇಲ್ಲೆ ಇದ್ದು ಹಲವಾರು ವೈಜ್ಞಾನಿಕ ಸಂಶೋಧನೆಗಳನ್ನು, ರೊಬಾಟಿಕ್ ಆಪರೇಷನ್ಸ್, ಸುತ್ತಮುತ್ತಲಿನ ಜಾಗದ ನಿರ್ವಹಣೆ, ವೈಯಕ್ತಿಕ ಆರೋಗ್ಯ ಸುಧಾರಣೆ, ವ್ಯಾಯಾಮ ಸೇರಿದಂತೆ ಬಹುಮುಖ್ಯವಾಗಿರುವ ಅಂಶವಾದ ಆಹಾರಕ್ಕಾಗಿ ಬೆಳೆ ಬೆಳೆಯುವ ಕಾರ್ಯದಲ್ಲೂ ಪರಿಣಿತರಾಗಲಿದ್ದಾರೆ.
ಇವುಗಳೊಂದಿಗೆ ೪ ಮಂದಿಯ ತಂಡಕ್ಕೆ ನಿಜವಾಗಿಯೂ ತಾವು ಮಂಗಳದಲ್ಲೇ ಇರುವ ಅನುಭವ ನೀಡಲು ಅಗತ್ಯ ವಸ್ತುಗಳು, ಸಂಪನ್ಮೂಲಗಳನ್ನು ಕಡಿತಗೊಳಿಸಲಾಗುವುದು, ಅಗತ್ಯ ತಾಂತ್ರಿತ ಪರಿಕರಗಳನ್ನು ನಿಷ್ಕಿçಯಗೊಳಿಸಿ ತಂಡಕ್ಕೆ ಸವಾಲೊಡ್ಡಲಾಗುವುದು. ಈ ಮೂಲಕ ಭವಿಷ್ಯದಲ್ಲಿ ಮಂಗಳ ಗ್ರಹದಲ್ಲಿ ಇಂತಹ ತುರ್ತು ಪರಿಸ್ಥಿತಿ ಎದುರಾದಲ್ಲಿ ಅದನ್ನು ಎದುರಿಸಲು ತಂಡ ಸಿದ್ಧವಾಗಲಿದೆ. ಜೂನ್ ತಿಂಗಳಿನಿAದ ಈ ಕೃತಕ ಮಂಗಳದಲ್ಲಿ ತಂಡದ ಸದಸ್ಯರು ವಾಸಿಸಲು ಪ್ರಾರಂಭಿಸಲಿದ್ದಾರೆ. (ಪ್ರಜ್ವಲ್ ಜಿ.ಆರ್.)