ವಿಶೇಷ ವರದಿ : ಪುತ್ತರಿರ ಕರುಣ್ ಕಾಳಯ್ಯ

ಚೆಟ್ಟಳ್ಳಿ, ಏ. ೧೪: ಉತ್ತಮ ಗುಣಮಟ್ಟದ ಚಿಪ್ಪಿ ಸುಣ್ಣ ಸುಡುವ ಕಾಯಕದ ಬದುಕೇ ಅವನತಿಯತ್ತ ಸಾಗಿರುವ ಈ ಕಾಲಘಟ್ಟದಲ್ಲಿ ಚೆಟ್ಟಳ್ಳಿಯಲ್ಲಿ ತಂಗವೇಲು ಹಾಗೂ ವಸಂತ ದಂಪತಿಗಳು ಕಳೆದ ೩೫ ವರ್ಷಗಳಿಂದ ಚಿಪ್ಪಿ ಸುಣ್ಣ ಸುಡುವ ಸುಣ್ಣ ಗೂಡು ತಯಾರಿಕಾ ಘಟಕದ ಮೂಲಕ ಸುಣ್ಣಗಾರಿಕಾ ಕಾಯಕ ನಡೆಸುತ್ತಿದ್ದಾರೆ.

ಹಿಂದೆಲ್ಲ ಹೆಚ್ಚಿನ ಕ್ಯಾಲ್ಸಿಯಂ ಗುಣ ಹೊಂದಿರುವ ಸುಣ್ಣವನ್ನು ಪಕ್ಕದ ಸುಣ್ಣಗೂಡಿನಿಂದÀಲೇ ತಂದು ಬಳಸುತ್ತಿದ್ದ ಕಾಲದಲ್ಲಿ ಕೊಡಗಿನ ಮಾದಾಪುರ, ಸುಂಠಿಕೊಪ್ಪ ಚೆಟ್ಟಳ್ಳಿ ಸೇರಿದಂತೆ ಸುಮಾರು ೧೦ ಕಡೆಗಳಲ್ಲಿ ಚಿಪ್ಪು ಸುಣ್ಣ ತಯಾರಿಕಾ ಘಟಕಗಳು ಸುಮಾರು ೧೫ ವರ್ಷಗಳ ಹಿಂದೆ ನಡೆಯುತ್ತಿದ್ದವು. ಕಾಲ ಕ್ರಮೇಣ ಮಾರುಕಟ್ಟೆಯಲ್ಲಿ ಕೃತಕ ಸುಣ್ಣಗಳು ಬರತೊಡಗಿದರೆ ಚಿಪ್ಪುಸುಣ್ಣಗಳು, ಇದ್ದಿಲುಗಳು ದೊರಕದಿರುವುದು, ಕಾರ್ಮಿಕರ ಕೊರತೆಯಿಂದ ಸುಣ್ಣ ತಯಾರಿಕಾ ಘಟಕಗಳು ಕಾಲಕ್ರಮೇಣ ಮುಚ್ಚಿಹೋದವು. ಸುಣ್ಣಗಳ ಬಳಕೆಯ ಬದಲಿಗೆ ಆಧುನಿಕ ರಾಸಾಯನಿಕ ಮಿಶ್ರಣದ ಹೊಳಪಿನ ಬಣ್ಣಗಳು ಮಾರುಕಟ್ಟೆಗೆ ಬಂದಿರುವುದು. ಈ ಎಲ್ಲಾ ಸವಾಲು ಹಾಗೂ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗದ ಕಾರಣ ಸುಣ್ಣಗಾರಿಕಾ ವೃತ್ತಿ ಅವನತಿಯತ್ತ ಸಾಗಲು ಕಾರಣವಾಯಿತು.

ಕರ್ನಾಟಕದಲ್ಲಿ ಬಳಕೆಯ ಸುಣ್ಣದ ತಯಾರಿಕೆಯನ್ನು ಸುಣ್ಣಕಲ್ಲಿನಿಂದ ಹಾಗು ಸಮುದ್ರದ ಕಪ್ಪೆಚಿಪ್ಪಿನಿಂದ ತಯಾರು ಮಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಸಮುದ್ರದ ಚಿಪ್ಪಿಸುಣ್ಣವನ್ನು ಕೊಡಗಿಗೆ ತರಿಸಿಕೊಳ್ಳುವ ಮೂಲಕ ಸುಣ್ಣಗೂಡುಗಳಲ್ಲಿ ಹದವಾಗಿ ಬೇಯಿಸಿ ಸಿದ್ದವಾದ ಸುಣ್ಣವನ್ನು ತಯಾರಿಸಲಾಗುತ್ತದೆ.

ಅದೇ ರೀತಿ ೩೫ ವರ್ಷಗಳ ಹಿಂದೆ ಸುಂಟಿಕೊಪ್ಪದಲ್ಲಿ ಪ್ರಾರಂಭಿಸಿದ ಸುಣ್ಣದ ತಯಾರಿಕಾ ಘಟಕದಲ್ಲಿ ೩ ರೂಪಾಯಿ ಕೂಲಿಗೆ ಕೆಲಸ ಮಾಡುತ್ತಿದ್ದ ತನ್ನ ಕುಟುಂಬದೊAದಿಗೆ ತಮಿಳುನಾಡಿನಿಂದ ಆಗಮಿಸಿದ ತಂಗವೇಲು ಹಲವು ವರ್ಷಗಳು ಕಳೆದ ನಂತರ ಚೆಟ್ಟಳ್ಳಿಯಲ್ಲಿ ಹುಲ್ಲಿನ ಮೆದೆಯ ಗುಡಿಸಲು ಕಟ್ಟಿಕೊಂಡು ಅದÀರೊಳಗೆ ಸುಣ್ಣ ಸುಡುವ ತಯಾರಿಕಾ ಘಟಕವನ್ನು ಪ್ರಾರಂಭಿಸಿದರು. ಹಿಂದೆ ೧೦೦ರಿಂದ ೧೫೦ಟನ್ ಸುಣ್ಣ ವ್ಯಾಪಾರವಾಗುತ್ತಿದ್ದದ್ದು ಈಗೆಲ್ಲ ಬೇಡಿಕೆ ಕಡಿಮೆಯಾಗಿದೆ. ಉಡುಪಿಯ ಕುಂದಾ ಪುರದಿಂದ ಚಿಪ್ಪುಸುಣ್ಣವನ್ನು ತರಿಸಿಕೊಂಡು ಘಟಕದಲ್ಲಿ ಹದವಾಗಿ ಬೇಯಿಸಿದ ನಂತರವೇ ಸುಣ್ಣಸಿದ್ದಗೊಳ್ಳುತ್ತದೆ. ಕೊಡಗಿನಲ್ಲಿ ವರ್ಷದ ಕಾಫಿಕೊಯ್ಲಿನ ಸಮಯ ಹಾಗೂ ಹೆಚ್ಚಿಗೆ ಸುರಿಯುವ ಮಳೆಗಾಲದ ಸಮಯದಲ್ಲಿ ಸುಣ್ಣಕ್ಕೆ ಬೇಡಿಕೆ ಕಡಿಮೆ ಇದ್ದು ಉಳಿದ ತಿಂಗಳುಗಳಲ್ಲಿ ನಿಯಮಿತ ಬೇಡಿಕೆ ಇರುತ್ತದೆ.

ಒಂದು ಟನ್ ಚಿಪ್ಪು ಸುಣ್ಣ ತರಿಸÀಲು ಬಾಡಿಗೆ ಇತರೆ ವೆಚ್ಚ ಸೇರಿ ೧ಲಕ್ಷ ಖರ್ಚಾಗಲಿದ್ದು ಚಿಪ್ಪನ್ನು ಹೆಕ್ಕಲು ಕಾರ್ಮಿಕರೇ ಸಿಗುತಿಲ್ಲ. ತಂಗವೇಲು ಹಾಗೂ ವಸಂತ ದಂಪತಿಗಳೇ ಹೆಕ್ಕಿಹೊತ್ತು ತಂದು ಸುಣ್ಣಗೂಡಿಗೆ ಸುರಿದು ಬೇಯಿಸುವ ಮೂಲಕ ಸುಣ್ಣದ ತಯಾರಿಕೆಯನ್ನು ಮಾಡುತ್ತಾ ತಂಗವೇಲು ಕುಟುಂಬದ ಸುಣ್ಣಗಾರಿಕ ವೃತ್ತಿ ನಡೆಯುತ್ತಿದೆ. ಹಲವು ಬಗೆಯ ಕೃತಕ ಸುಣ್ಣಗಳು ಮಾರುಕಟ್ಟೆಯಲ್ಲಿ ಚೀಲವೊಂದಕ್ಕೆ ರೂ. ೪೦೦ಕ್ಕೆ ದೊರೆತರೆ ಸುಣ್ಣ ಗೂಡಿನಲ್ಲಿ ತಯಾರಾದ ಉತ್ತಮ ಗುಣಮಟ್ಟದ ಯಾವುದೇ ರಾಸಾಯನಿಕವಿಲ್ಲದೆ ಭೂಮಿಗೆ ಫಲಕಾರಿಯಾದ ಬೇಯಿಸಿ ಸಿದ್ದಗೊಂಡ ಚಿಪ್ಪಿಸುಣ್ಣ ಕೆಜಿಗೆ ೧೭ ರೂಪಾಯಿ ತಗುಲಲಿದೆ. ಸುಣ್ಣದ ಗುಣಮಟ್ಟ ಅರಿತ ಹಲವು ವರ್ಷಗಳ ಗ್ರಾಹಕರಿರುವರೆಂದು ತಂಗವೇಲು ಹೇಳುತ್ತಾರೆ.