ಕೋವರ್ ಕೊಲ್ಲಿ ಇಂದ್ರೇಶ್
ಬೆಂಗಳೂರು, ಏ. ೧೪: ಕಂದಾಯ ಅಧಿಕಾರಿಗಳು ಕೃಷಿ ಯೋಗ್ಯವಲ್ಲದ ಮತ್ತು ಕಂದಾಯ ನಿಗದಿಪಡಿಸದೆ ಇದ್ದು ಅದನ್ನು ಏ ಅಥವಾ ಬಿ ಖರಾಬು ಎಂದು ವರ್ಗೀಕರಿಸಿದ್ದರೆ ಅದರ ಮಾಲೀಕತ್ವ ಭೂ ಹಿಡುವಳಿದಾರರಿಗೇ ಸೇರಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯವು ಹೇಳಿದೆ.
ಪ್ರಕರಣವೊಂದರ ವಿಚಾರಣೆಯ ನಂತರ ಮಂಗಳವಾರ ಈ ತೀರ್ಪು ನೀಡಿರುವ ನ್ಯಾಯಾಲಯವು ಖರಾಬು ಭೂಮಿ ಯ ಮಾಲೀಕತ್ವ ಹಿಡುವಳಿದಾರನದ್ದೇ ಹೊರತು ರಾಜ್ಯ ಸರ್ಕಾರದ್ದಲ್ಲ ಎಂದು ಸ್ಪಷ್ಟ ಪಡಿಸಿದೆ. ಖರಾಬು ಭೂಮಿಯ ಮಾಲೀಕತ್ವದ ಕುರಿತಾದ ಪ್ರಕರಣವೊಂದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ ಅವರ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಹೊನ್ನಿಹಾಳ ಗ್ರಾಮದ ಭೂಮಾಲೀಕರಾದ ಅರ್ಜಿದಾರರು ತಮ್ಮ ಜಮೀನಿನ ಖರಾಬು ಭಾಗಕ್ಕೆ ಅಧಿಕಾರಿಗಳು ಪರಿಹಾರವನ್ನು ನಿರಾಕರಿಸಿದ ನಂತರ ನ್ಯಾಯಾಲಯದ ಮೆಟ್ಟಿಲೇರಿದ್ದರು. ೧೯೯೫-೯೬ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನದಿಂದಾಗಿ ಅವರ ಜಮೀನುಗಳು ಮುಳುಗಡೆಯಾಗಿದ್ದವು. ಪರಿಹಾರವನ್ನು ನಿರ್ಧರಿಸುವಾಗ, ವಿಶೇಷ ಭೂಸ್ವಾಧೀನ ಅಧಿಕಾರಿ (Sಐಂಔ) ಜಮೀನಿನ ಆ ಭಾಗವನ್ನು ಫೂಟ್ ಖರಾಬು ಎಂದು ವರ್ಗೀಕರಿಸಿರುವುದರಿಂದ ಇದರ ಮಾಲೀಕತ್ವ ಸರ್ಕಾರದ್ದೇ ಆಗಿದೆ ಮತ್ತು ಇದಕ್ಕೆ ಪರಿಹಾರ ನೀಡಲು ಸಾದ್ಯವಿಲ್ಲ ಎಂದು ತಿರಸ್ಕರಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಗೌಡ ಅವರು ಜಮೀನಿನ ಖರಾಬ್ ಭಾಗವು ಯಾವಾಗಲೂ ಒಬ್ಬ ವ್ಯಕ್ತಿಯ ಮಾಲೀಕತ್ವವನ್ನು ಹೊಂದಿದೆ ಎಂದು ಕಾನೂನು ಗುರುತಿಸುತ್ತದೆ ಮತ್ತು ವ್ಯಕ್ತಿಯು ಆ ಭೂಮಿಯ ಮೇಲಿನ ಹಕ್ಕುಗಳನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ, ಅದರಲ್ಲಿ ಒಂದು ಭಾಗವನ್ನು ಅನರ್ಹ ಎಂದು ವರ್ಗೀಕರಿಸಲಾಗಿದೆ. ಸರ್ವೆ ನಂಬರ್ ಎಂದು ಅಳೆಯುವ ಮತ್ತು ವರ್ಗೀಕರಿಸಿದ ಪ್ರತಿಯೊಂದು ಭೂಮಿಯೂ, ಸದರಿ ಸರ್ವೆ ನಂಬರ್ನ ಮಾಲೀಕತ್ವ ಯಾವಾಗಲೂ ವ್ಯಕ್ತಿಗೆ ಇರುತ್ತದೆ ಮತ್ತು ಅದನ್ನು ಅನರ್ಹ ಎಂದು ಗುರುತಿಸಿದ್ದರೂ ಕೂಡ ಅದರ ಯಾವುದೇ ಭಾಗಕ್ಕೆ ರಾಜ್ಯ ಸರ್ಕಾರ ಹಕ್ಕು ದಾರ ಆಗುವುದಿಲ್ಲ ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ ವಾದಿಸಿದ ಸರ್ಕಾರೀ ವಕೀಲರು ಫೂಟ್ ಖರಾಬು ಎಂದು ವರ್ಗೀಕರಿಸಲಾದ ಆಸ್ತಿ ರಾಜ್ಯಕ್ಕೆ ಸೇರಿದ್ದು, ಪರಿಹಾರ ಪಾವತಿಸುವ ಅಗತ್ಯವಿಲ್ಲ ಎಂದು ವಾದಿಸಿದ್ದರು. ಖರಾಬು ಭಾಗಕ್ಕೆ ಕಂದಾಯವನ್ನು ಸಂಗ್ರಹಿಸದ ಕಾರಣ, ಇದು ರಾಜ್ಯ ಸರ್ಕಾರಕ್ಕೆ ಸೇರಿದ ಭೂಮಿ ಮತ್ತು ‘ಎ' ಅಥವಾ ಬಿ ಖರಾಬು ಎಂದು ವರ್ಗೀಕರಿಸಿದ ಆ ಭೂಮಿಯ ಭಾಗವು ರಾಜ್ಯ ಸರ್ಕಾರದ ಮಾಲೀಕತ್ವದಾಗಿದ್ದು ಭೂ ಮಾಲೀಕರಿಗೆ ಪರಿಹಾರ ನೀಡಲು ಸಾದ್ಯವಿಲ್ಲ ಎಂದು ವಾದಿಸಿದ್ದರು.
ಭೂಮಿಗೆ ಕಂದಾಯವನ್ನು ನಿಗದಿಪಡಿಸಲಾಗಿಲ್ಲ ಅಥವಾ ಸಾರ್ವಜನಿಕರು ಅಥವಾ ಸಾಮಾನ್ಯ ಜನರು ಭೂಮಿಯ ಒಂದು ಭಾಗವನ್ನು ಬಳಸುತ್ತಿದ್ದಾರೆ ಎಂಬ ಆಧಾರದ ಮೇಲೆ ರಾಜ್ಯ ಸರ್ಕಾರವು ಅರ್ಜಿದಾರರಿಗೆ ಪರಿಹಾರವನ್ನು ನಿರಾಕರಿಸುವಂತಿಲ್ಲ. ಕೇವಲ ಸಾರ್ವಜನಿಕರು ಭೂಮಿಯನ್ನು ಬಳಸುವುದರಿಂದ ಭೂಮಿಯ ಹಕ್ಕು ರಾಜ್ಯ ಸರ್ಕಾರಕ್ಕೆ ಸೇರುವುದಿಲ್ಲ ಎಂದು ನ್ಯಾಯಮೂರ್ತಿ ಸಂಜಯ್ ಗೌಡ ಹೇಳಿದರು.
ಅರ್ಜಿದಾರರಿಗೆ ಸೇರಿದ ಖರಾಬು ಭಾಗಕ್ಕೆ ಪಾವತಿಸಬೇಕಾದ ಪರಿಹಾರವನ್ನು ಮೂರು ತಿಂಗಳೊಳಗೆ ನಿರ್ಧರಿಸಿ ಪಾವತಿಸುವಂತೆ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.