ಮೀಸಲಾತಿ ರದ್ದು: ಸರ್ಕಾರದ ನಿರ್ಧಾರ ದೋಷಪೂರಿತ

ನವದೆಹಲಿ, ಏ. ೧೩: ಲಿಂಗಾಯತರು ಮತ್ತು ಒಕ್ಕಲಿಗರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ತಲಾ ಶೇಕಡಾ ಎರಡರಷ್ಟು ಹೆಚ್ಚಿಸಿ, ಮುಸ್ಲಿಮರಿಗೆ ಶೇ. ೪ ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರ ಬುಡವನ್ನೇ ಅಲುಗಾಡಿಸು ವಂತಹದ್ದಾಗಿದ್ದು, ಮೇಲ್ನೋಟಕ್ಕೆ ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ನ್ಯಾಯಾಲಯದ ಮುಂದೆ ಮಂಡಿಸಲಾದ ಆಧಾರಗಳಿಂದ ಕರ್ನಾಟಕ ಸರ್ಕಾರದ ನಿರ್ಧಾರ ಸಂಪೂರ್ಣವಾಗಿ ತಪ್ಪಾದ ಊಹೆಯನ್ನು ಆಧರಿಸಿದೆ ಎಂಬುದನ್ನು ತೋರುತ್ತದೆ ಎಂದು ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕರ್ನಾಟಕದ ಮುಸ್ಲಿಂ ಸಮುದಾಯದ ಸದಸ್ಯರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್, ದುಷ್ಯಂತ್ ದವೆ ಮತ್ತು ಗೋಪಾಲ್ ಶಂಕರನಾರಾಯಣನ್, ಮುಸ್ಲಿಮರ ಕೋಟಾ ರದ್ದುಗೊಳಿಸಲು ಯಾವುದೇ ಅಧ್ಯಯನ ನಡೆಸಿಲ್ಲ ಮತ್ತು ಯಾವುದೇ ಪ್ರಾಯೋಗಿಕ ಮಾಹಿತಿಯು ಸರ್ಕಾರದ ಬಳಿ ಲಭ್ಯವಿಲ್ಲ ಎಂದು ಹೇಳಿದರು. ಕರ್ನಾಟಕದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅರ್ಜಿಗಳಿಗೆ ಉತ್ತರ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಕೋರಿದರು ಮತ್ತು ಅರ್ಜಿದಾರರು ಪ್ರಶ್ನಿಸಿರುವ ಮಾರ್ಚ್ ೨೪ ರ ಸರ್ಕಾರಿ ಆದೇಶದ ಆಧಾರದ ಮೇಲೆ ಯಾವುದೇ ನೇಮಕಾತಿ ಮತ್ತು ಪ್ರವೇಶಗಳನ್ನು ಮಾಡಲಾಗುವುದಿಲ್ಲ ಎಂದು ಪೀಠಕ್ಕೆ ಭರವಸೆ ನೀಡಿದರು. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದವರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ಅವಕಾಶ ನೀಡದೆ ಯಾವುದೇ ಮಧ್ಯಂತರ ಆದೇಶ ನೀಡಬಾರದು ಎಂದರು. ಹೆಚ್ಚಿನ ವಿಚಾರಣೆ ಗಾಗಿ ಏಪ್ರಿಲ್ ೧೮ಕ್ಕೆ ಈ ವಿಷಯವನ್ನು ನ್ಯಾಯಪೀಠ ಮುಂದೂಡಿದೆ.

ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಜೆಡಿಎಸ್‌ಗೆ ವಾಪಸ್

ಕಡೂರು, ಏ. ೧೩: ಇತ್ತೀಚಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಮತ್ತೆ ಜೆಡಿಎಸ್‌ಗೆ ಮರಳಿದ್ದಾರೆ. ಕಾಂಗ್ರೆಸ್‌ನಿAದ ಟಿಕೆಟ್ ಸಿಗದೆ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದ ದತ್ತಾ ಅವರು ಇಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರ ಸಮ್ಮುಖದಲ್ಲಿ ಜೆಡಿಎಸ್‌ಗೆ ವಾಪಸ್ಸಾದರು. ಈ ಸಂದರ್ಭ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಕಡೂರಿನ ಜೆಡಿಎಸ್ ಅಭ್ಯರ್ಥಿಯಾಗಿ ವೈ.ಎಸ್.ವಿ. ದತ್ತಾ ಸ್ಪರ್ಧಿಸಲಿದ್ದಾರೆ. ನಮ್ಮ ಕುಟುಂಬ, ಪಕ್ಷ ದತ್ತ ಅವರ ಜೊತೆ ಇದ್ದು, ನಾಮಪತ್ರ ಸಲ್ಲಿಸುವಾಗ ಖುದ್ದು ಹಾಜರಿರುವುದಾಗಿ ತಿಳಿಸಿದರು. ವೈ.ಎಸ್.ವಿ. ದತ್ತಾ ಮಾತನಾಡಿ, ದೇವೇ ಗೌಡರು ಮತ್ತು ನನ್ನ ನಡುವಿನ ಸಂಬAಧ ರಾಜಕೀಯವನ್ನು ಮೀರಿದ್ದು ಎಂದು ಭಾವುಕರಾದರು. ಜೆಡಿಎಸ್ ಪಕ್ಷ ಕಟ್ಟುವಲ್ಲಿ ದತ್ತ ಅವರ ಪಾತ್ರ ಮಹತ್ವದ್ದಾಗಿದೆ. ನಡು ರಾತ್ರಿಯಲ್ಲಿಯೂ ದತ್ತಾ ಅವರನ್ನು ಕರೆದು ದೇವೇ ಗೌಡರು ಚರ್ಚೆ ಮಾಡುತ್ತಿದ್ದರು ಎಂದು ಹೆಚ್.ಡಿ. ರೇವಣ್ಣ ಹೇಳಿದರು.

ಬಿ.ಜೆ.ಪಿ. ತೊರೆಯುತ್ತಿರುವ ಮಾಜಿ ಶಾಸಕರುಗಳು

ಹಾವೇರಿ, ಏ. ೧೩: ಮೇ ೧೦ ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ನೆಹರು ಓಲೇಕಾರ ಗುರುವಾರ ಪಕ್ಷ ತೊರೆಯುವುದಾಗಿ ಹೇಳಿದ್ದಾರೆ. ೬೫ ವರ್ಷ ವಯಸ್ಸಿನ ಪರಿಶಿಷ್ಟ ಜಾತಿ ಸಮುದಾಯದಿಂದ ಎರಡು ಬಾರಿ ಶಾಸಕರಾಗಿದ್ದ ಅವರು ಚುನಾವಣೆಯಲ್ಲಿ ಪಕ್ಷ ತಮ್ಮನ್ನು ಕಡೆಗಣಿಸಿರುವುದನ್ನು ವಿರೋಧಿಸಿ ತಮ್ಮ ಬೆಂಬಲಿಗರೊAದಿಗೆ ಪ್ರತಿಭಟನೆಗೆ ಇಳಿದಿದ್ದಾರೆ. ಹೀಗೆ ಟಿಕೆಟ್ ದೊರೆಯದೆ ಬಿಜೆಪಿ ಪಕ್ಷ ತೊರೆಯುತ್ತಿರುವ ಐದನೇ ಶಾಸಕ ನೆಹರು ಒಲೇಕಾರ್ ಆಗಿದ್ದಾರೆ. ಇದಕ್ಕೂ ಮುನ್ನಾ ಟಿಕೆಟ್ ವಂಚಿತ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಅವರು ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತೋರ್ವ ಶಾಸಕ ಲಕ್ಷ್ಮಣ ಸವದಿ ರಾಜೀನಾಮೆ ಘೋಷಿಸಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿದ್ದ ಆರ್. ಶಂಕರ್ ಕೂಡಾ ರಾಜೀನಾಮೆ ನೀಡಿದ್ದಾರೆ. ಸುಳ್ಯ ಕ್ಷೇತ್ರದ ಶಾಸಕ ಮೀನುಗಾರಿಕಾ ಸಚಿವ ಎಸ್.ಅಂಗಾರ ಸಹ ರಾಜೀನಾಮೆ ನೀಡಿದ್ದಾರೆ. ಹಾವೇರಿ ಪರಿಶಿಷ್ಟ ಜಾತಿ ಮೀಸಲಿ ಕ್ಷೇತ್ರದಲ್ಲಿ ನೆಹರು ಓಲೇಕಾರ್ ಬದಲಿಗೆ ಗವಿಸಿದ್ದಪ್ಪ ದ್ಯಾಮಣ್ಣನವರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಾವಿರಾರು ಬಿಜೆಪಿ ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ಓಲೇಕಾರ ಹೇಳಿದ್ದಾರೆ. ಕಾರ್ಯಕರ್ತರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ. ಅವರೊಂದಿಗಿನ ಸಭೆ ನಂತರ ಭವಿಷ್ಯದ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಪಾಕ್‌ನಿಂದ ಬಂದ ಡ್ರೋಣ್ ಹೊಡೆದುರುಳಿಸಿದ ಸೇನಾಪಡೆ

ಶ್ರೀನಗರ, ಏ. ೧೩: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ರಜೌರಿಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭದ್ರತಾ ಪಡೆಗಳು ಪಾಕಿಸ್ತಾನದ ಡ್ರೋಣ್'ವೊಂದನ್ನು ಹೊಡೆದುರುಳಿಸಿವೆ. ಏಪ್ರಿಲ್ ೧೨ ಮತ್ತು ೧೩ ರ ಮಧ್ಯರಾತ್ರಿಯ ಸಮಯದಲ್ಲಿ, ಸುದರ್ಬಾನಿ ಸೆಕ್ಟರ್‌ನ ರಜೌರಿಯ ಬೆರಿ ಪಟ್ಟನ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ಅನುಮಾನಾಸ್ಪದ ಚಲನೆಯೊಂದನ್ನು ಭದ್ರತಾ ಪಡೆಗಳು ಪತ್ತೆಹಚ್ಚಿದ್ದವು. ಕೂಡಲೇ ಗುಂಡು ಹಾಕಿ ಡ್ರೋಣ್'ನ್ನು ಹೊಡೆದುರುಳಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೊಡೆದುರುಳಿಸಲಾದ ಡ್ರೋಣ್ ನಲ್ಲಿ ೧೩೧ ಸುತ್ತು ಏಕೆ-೪೭. ೫ ನಿಯತಕಾಲಿಕೆಗಳು ಹಾಗೂ ರೂ. ೨ ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಡ್ರೋಣ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಲ್‌ಒಸಿಗೆ ಸಮೀಪವಿರುವ ಹಲವು ಗ್ರಾಮಗಳಲ್ಲಿ ಸೇನೆ ಮತ್ತು ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಈ ವಸ್ತುಗಳನ್ನು ಸಾಗಿಸಲು ಪದೇ ಪದೇ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಲಿಪ್ಯಾಡ್ ಬಳಿ ಆಕಸ್ಮಿಕ ಬೆಂಕಿ: ಅಪಾಯದಿಂದ ಸಿಎಂ ಪಾರು

ಉಡುಪಿ, ಏ. ೧೩: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿ ಕೊಂಡಿದ್ದು, ಅದೃಷ್ಟವಶಾತ್ ಬೊಮ್ಮಾಯಿಯವರು ಅಪಾಯದಿಂದ ಪಾರಾ ಗಿದ್ದಾರೆ. ಉಡುಪಿ ಜಿಲ್ಲೆ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್ ಬಳಿ ಮುಖ್ಯಮಂತ್ರಿಗಳ ಎಸ್ಕಾರ್ಟ್ ಹೋದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು, ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬೈಂದೂರು ಅಗ್ನಿಶಾಮಕದಳ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿದ್ದು, ಬಳಿಕ ಅರೆಶಿರೂರು ಹೆಲಿಪ್ಯಾಡ್ ಮೂಲಕ ಮುಖ್ಯಮಂತ್ರಿಗಳು ಕೊಲ್ಲೂರಿಗೆ ತೆರಳಿದರು. ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಇದರ ಬೆನ್ನಲ್ಲೆ ಸಿಎಂ ಬೊಮ್ಮಾಯಿ ಅವರು ಟೆಂಪಲ್ ರನ್ ಶುರು ಮಾಡಿದ್ದಾರೆ. ಇದರಂತೆ ಇಂದು ಉಡುಪಿಗೆ ಭೇಟಿ ನೀಡಿದ್ದು ಉಡುಪಿ ಜಿಲ್ಲೆ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್ ಬಳಿ ಮುಖ್ಯಮಂತ್ರಿಗಳ ಎಸ್ಕಾರ್ಟ್ ಹೋದ ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಆತಂಕ ಸೃಷ್ಟಿಯಾಗಿದ್ದು. ಅದೃಷ್ಟವಶಾತ್ ಸಿಎಂ ಬೊಮ್ಮಾಯಿ ಸ್ವಲ್ಪದರಲ್ಲಿ ಅಪಾಯ ದಿಂದ ಪಾರಾಗಿದ್ದಾರೆ. ಇದೀಗ ಸಿಎಂ ಬೊಮ್ಮಾಯಿ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ನಟ ರಿಷಬ್ ಶೆಟ್ಟಿ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಆಕಸ್ಮಿಕವಾಗಿ ಇಬ್ಬರ ಭೇಟಿ ಆಗಿದೆ. ಮುಖ್ಯಮಂತ್ರಿಗಳನ್ನು ನೋಡುತ್ತಿದ್ದಂತೆಯೇ ನಟ ರಿಷಬ್ ಅವರು ಕಾಲು ಮುಟ್ಟಿ ಆಶೀರ್ವಾದ ಪಡೆದರು. ಈ ವೇಳೆ ಮುಖ್ಯಮಂತ್ರಿಗಳು ರಿಷಬ್ ಅವರ ಬೆನ್ನು ತಟ್ಟಿ ಖುಷಿಪಟ್ಟರು.