ಭಾಗಮಂಡಲ, ಏ. ೧೩ : ಜಿಲ್ಲೆಯ ವೀರಾಜಪೇಟೆ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕಿಳಿದಿರುವ ಹಾಲಿ ಶಾಸಕ ಕೆ.ಜಿ. ಬೋಪಯ್ಯ ಪ್ರಚಾರ ಕಾರ್ಯ ಆರಂಭಿಸುವ ಮುನ್ನ ಗುರುವಾರ ಭಾಗಮಂಡಲದ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಗಳ ಅಧಿಕೃತ ಘೋಷಣೆ ಆಗಿದೆ. ಪಕ್ಷ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ಕೊಟ್ಟಿದೆ. ಯಾವುದೇ ಕೆಲಸ ಮಾಡಬೇಕಾದರೆ ದೇವರಲ್ಲಿ ನಂಬಿಕೆ ಇಟ್ಟು ಮುಂದಡಿ ಇಡುವುದು ಸಂಪ್ರದಾಯ. ಅಂತೆÀಯೇ ಕೊಡಗಿನ ಪವಿತ್ರ ಕ್ಷೇತ್ರಗಳಾದ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಸರ್ವರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಜಿಲ್ಲೆಯಲ್ಲಿ ಮಳೆ ಇಲ್ಲದೆ ಜನ ಪರಿತಪಿಸುವಂತಾಗಿದೆ ಸಕಾಲದಲ್ಲಿ ಮಳೆ ಆಗಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಕಾವೇರಿ ಮಾತೆ ಭಕ್ತರಿಗೆ ಅನುಗ್ರಹಿಸಲಿ ಎಂದು ಸಮಸ್ತ ಜನರ ಪರವಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು. ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.