ಮಡಿಕೇರಿ, ಏ. ೧೩: ಸುಮಾರು ೯೮೦ ವರ್ಷಗಳಿಗೂ ಹಿಂದಿನ ಇತಿಹಾಸವಿರುವ ಹಾಗೂ ದೇವಸ್ಥಾನದ ಎದುರು ದೇವಸ್ಥಾನಕ್ಕೆ ಮುಖಮಾಡಿ ನಿಂತಿರುವ ಐರಾವತ (ಕಲ್ಲಿನ ಆನೆ) ಹೊಂದಿರುವ ಜಿಲ್ಲೆಯ ಏಕೈಕ ದೇವಸ್ಥಾನವೆಂಬ ಹೆಗ್ಗಳಿಕೆ ಹೊಂದಿರುವ ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಗ್ರಾಮಕ್ಕೆ ಸೇರಿದ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಬಿಸು ಚಂಗ್ರಾAದಿ ಹಾಗೂ ಎಡಮ್ಯಾರ್ ಒಂದ್ ನೂತನ ವರ್ಷಾಚರಣೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭದ್ರಕಾಳಿ, ಗುಂಡಿಯತ್ ಅಯ್ಯಪ್ಪ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಹಾಗೂ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.
ಈ ಕುರಿತು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ತಕ್ಕಮುಖ್ಯಸ್ಥರಾದ ಚಮ್ಮಟೀರ ಸುಗುಣ ಮುತ್ತಣ್ಣ ಮಾಹಿತಿ ನೀಡಿ ಬಿಸು ಸಂಕ್ರಮಣದ ಎಡಮ್ಯಾರ್ ಒಂದ್ ಪ್ರಯುಕ್ತ ತಾ. ೧೪ ರಂದು ಬೆಳಿಗ್ಗೆ ೮ ಗಂಟೆಗೆ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದ ಆವರಣದಲ್ಲಿ ಗಣಪತಿ ಹೋಮ ಹಮ್ಮಿಕೊಳ್ಳಲಾಗಿದ್ದು, ಬಳಿಕ ೧೧ ಗಂಟೆಗೆ ಶ್ರೀ ಭದ್ರಕಾಳಿ ದೇವಿಯ ವಿಗ್ರಹಕ್ಕೆ ದೇವಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಬೆಳ್ಳಿಯ ಕವಚ ಧಾರಣಾ ಪೂಜೆ ಸೇರಿದಂತೆ ದೇವಸ್ಥಾನ ಅವರಣದಲ್ಲಿ ನಿರ್ಮಿಸಲಾಗಿರುವ ವಿಶೇಷ ಭದ್ರತಾ ಕೊಠಡಿ ಹಾಗೂ ನವೀಕರಣಗೊಂಡಿರುವ ಅರ್ಚಕರ ಮನೆಯ ಗೃಹ ಪ್ರವೇಶ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಯುಕ್ತ ನೆರೆದ ಭಕ್ತಾದಿಗಳಿಗೆ ಮಧ್ಯಾಹ್ನದ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇದರ ವಾರ್ಷಿಕ ಬೋಡ್ ನಮ್ಮೆ ಅಥವಾ ಬೇಡು ಹಬ್ಬ ಇದೇ ಮೇ ೨೦ ಹಾಗೂ ೨೧ರಂದು ನಡೆಯಲಿದ್ದು, ವರ್ಷಂಪ್ರತಿ ಇಲ್ಲಿ ನವರಾತ್ರಿ ಉತ್ಸವ ಕೂಡ ವಿಜೃಂಭಣೆಯಿAದ ನಡೆಯುತ್ತದೆ.