ಸೋಮವಾರಪೇಟೆ, ಏ. ೧೨ : ತಾಲೂಕಿನ ಶಾಂತಳ್ಳಿ-ಬೆಟ್ಟದಳ್ಳಿಯ ಸಿದ್ಧಾರ್ಥ ನಗರ ಗ್ರಾಮಾಭಿವೃದ್ಧಿ ಸಮಿತಿ ಮತ್ತು ಮಾನವತಾ ಯುವಕ ಸಂಘದ ವತಿಯಿಂದ ತಾ. ೧೪ರಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೨ನೇ ಜನ್ಮ ದಿನಾಚರಣೆ ಮತ್ತು ಹೋಬಳಿ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಸಿ. ಜಗದೀಶ್ ತಿಳಿಸಿದ್ದಾರೆ. ತಾ. ೧೪ರಂದು ಬೆಳಿಗ್ಗೆ ೭ ಗಂಟೆಗೆ ಗ್ರಾಮಾಭಿವೃದ್ಧಿ ಸಮಿತಿ ಖಜಾಂಚಿ ಬಿ.ಆರ್. ಅಜಿತ್ ಧ್ವಜಾರೋಹಣ ನಡೆಸಲಿದ್ದಾರೆ. ೧೦ ಗಂಟೆಗೆ ಸೋಮವಾರಪೇಟೆಯ ಬಾಣಾವರ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗ್ರಾಮಾಭಿವೃದ್ಧಿ ಸಮಿತಿ ಸದಸ್ಯ ಬಿ.ಆರ್. ಯೋಗೇಶ್ ಮಾಲಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ ೩ಕ್ಕೆ ಸಿದ್ದಾರ್ಥ ನಗರದ ಅಂಬೇಡ್ಕರ್ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ಕುಂದಳ್ಳಿ ರವಿ, ಬೆಂಗಳೂರಿನ ಪತ್ರಕರ್ತರು ಹಾಗೂ ಪ್ರಗತಿಪರ ಚಿಂತಕರಾದ ರಾ. ಚಿಂತನ್, ಸಕಲೇಶಪುರದ ಡಿಎಸ್‌ಎಸ್ ರಾಜ್ಯ ಸಂಚಾಲಕ ಎಸ್.ಎನ್. ಮಲ್ಲಪ್ಪ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಪ್ರಯುಕ್ತ ಏ. ೧೫ರಂದು ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಮಕ್ಕಳಿಗೆ ಮತ್ತು ಹಿರಿಯರಿಗೆ ಇತರ ಕ್ರೀಡೆಗಳನ್ನು ನಡೆಸಲಾಗುವುದು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಗದೀಶ್ ತಿಳಿಸಿದ್ದಾರೆ.