ಚೆಟ್ಟಳ್ಳಿ, ಏ. ೧೨: ಮಳೆದೇವರೆಂದೇ ಪ್ರಸಿದ್ಧಿ ಪಡೆದಿರುವ ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ) ಭಗವತಿಯ ನೆಲೆಗೆ ಸುಮಾರು ೩೦೦ ವರ್ಷಗಳ ಇತಿಹಾಸವಿದೆ. ಪೊವ್ವೊದಿ ದೇವರ ಹಾಡಿನ ಪ್ರಕಾರ ಏಳು ಸಮುದ್ರಗಳು ದಾಟಿ ನೆತ್ತಕಡ ಹಾಗೂ ಪಾಕಡ (ರಕ್ತದ ಹಾಗೂ ಹಾಲಿನ ಸಮುದ್ರ) ಒಳಗಿಂದ ಪಾಜಿಯು ದೇವ ಲೋಕದಲ್ಲಿ ಗಾಳಿಯ ರಭಸಕ್ಕೆ ಪಾಮಂಜಿಯು ಸಮುದ್ರ ದಂಡೆಯಲ್ಲಿ ಹರಡಿ ಅದರಲ್ಲಿ ದೊಡ್ಡದಾದ ಹುತ್ತ ಒಂದು ಬೆಳೆಯ ತೊಡಗಿ ಕಾಳೆ (ಭೀಕರ) ಸಿಡಿಲು ಹುತ್ತಕ್ಕೆ ಬಡೆಯಿತಂತೆ. ಹುತ್ತ ಒಡೆದು ಆಲದ ಮರವಾಗಿ ಬೆಳೆದು ಗಾಳಿಯ ರಭಸಕ್ಕೆ ಆಲದ ಮರದಲ್ಲಿದ್ದ ಚಿನ್ನದ ಹಾಗೂ ಬೆಳ್ಳಿಯ ಶಂಖ ಒಡೆದು ಚಿನ್ನದ ಶಂಖದಲ್ಲಿ ಮೂರು ದೇವತೆಗಳು ಬೆಳ್ಳಿಯ ಶಂಖದಲ್ಲಿ ಬೇಟೆಗಾರ ಅಯ್ಯಪ್ಪ ಹಾಗೂ ನಾಗದೇವ ಹುಟ್ಟಿತಂತೆ. ಆ ಸಮಯದಲ್ಲಿ ಲೋಕಸುತ್ತಿ ಬಂದAತ ಕಿರಕೊಟ ಹಕ್ಕಿಯು ಆ ಆಲದ ಮರದಲ್ಲಿ ಬಂದು ಕುಳಿತಾಗ ದೇವತೆಗಳು ನಮಗೆ ಭೂಲೋಕದಲ್ಲಿ ಉತ್ತಮ ನೆಲೆಯನ್ನು ತೋರಿಸಿದರೆ ನಿನಗೆ ನಿತ್ಯವು ಆಹಾರ ದೊರೆಯುವ ವರವನ್ನು ನೀಡುತ್ತೇವೆಂದು ಭಾಷೆ ನೀಡಿದಕ್ಕೆ ಒಪ್ಪಿದ ಕಿರಕೊಟ ಹಕ್ಕಿಯು ದೇವತೆಗಳನ್ನು ತನ್ನ ಹೆಗಲಲ್ಲಿ ಹೊತ್ತು ಹಾರಿತಂತೆ.
ಕೇರಳಕ್ಕೆ ಬಂದು ಸುತ್ತಲು ನೋಡಿದಾಗ ಮೀನಿನ ಹಾಗೂ ಸೇಂದಿಯ ವಾಸನೆ ಇದ್ದುದರಿಂದ ಕೇರಳದಲ್ಲಿ ಬೈತೂರಪ್ಪನನ್ನು ಕೇಳಿದಾಗ ನನ್ನ ಸಹೋದರ ಮಕ್ಕಿ ಶಾಸ್ತಾವನ್ನು ಕೇಳುವಂತೆ ಸೂಚಿಸಿದಾಗ ಮಕ್ಕಿ ಶಾಸ್ತಾವು ಪೊಮ್ಮಾಲೆ ಕೊಡಗಿನಲ್ಲಿ ನೆಲೆಯಾಗಿರುವ ಇಗ್ಗುತಪ್ಪನನ್ನು ಕೇಳುವಂತೆ ಹೇಳಿದಂತೆ, ಬ್ರಹ್ಮಗಿರಿ ತಪ್ಪಲಿನಲ್ಲಿ ಹುಟ್ಟಿ ಬೆಳೆದಿರುವ ಕಾವೇರಿ ಮಾತೆಯನ್ನು ಕೇಳುತ್ತಾರೆ. ಕಾವೇರಿ ಮಾತೆಯು ಒಪ್ಪಿ ನೂರೊಕ್ಕ ನಾಡಿನ ಬೆಟ್ಟ ತುದಿಯಲ್ಲಿ ನಿಂತು ಬಾಣಬಿಟ್ಟ ಜಾಗದಲ್ಲಿ ನೆಲೆಯಾಗುವಂತೆ ತಿಳಿಸುತ್ತಾರೆ. ಅದೇ ರೀತಿ ಶ್ರೀಮಂಗಲ ಗ್ರಾಮದಲ್ಲಿ ಶ್ರೀಮಂಗಲ ಭಗವತಿಯಾಗಿ ನೆಲೆನಿಂತಳು ಎಂಬ ನಂಬಿಕೆಯಿದೆ. ಈ ಊರಿನವರಾದ ಮುಳ್ಳಂಡ, ಪುತ್ತರಿರ, ಬಟ್ಟೀರ, ಪಳಂಗAಡ, ಕೆಚ್ಚಟ್ಟೀರ, ಬೊಪ್ಪಟ್ಟಿರ, ಕೊಂಗAಡ, ಐಯ್ಯಂಡ್ರ, ಲಕ್ಕಂಡ್ರ, ಪೇರಿಯನ, ಪರ್ಲಕೋಟಿ, ಕೆದಂಬಾಡಿ, ಅರ್ಚಕರು ಹಾಗೂ ಹಲವು ಕುಟುಂಬಗಳು ಇಲ್ಲಿ ದೇವತಾ ಕೈಂಕರ್ಯವನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ.
ತಾ. ೧೧ ರಂದು ರಾತ್ರಿ ತಕ್ಕಮುಖ್ಯಸ್ಥರು ಹಾಗೂ ಊರಿನವರೆಲ್ಲ ದೇವಾಲಯದಲ್ಲಿ ಸೇರಿ ದೇವರಿಗೆ ಶುದ್ಧ ಕಲಶ ಪೂಜೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವರನ್ನು ಕರೆಯುತ್ತ ದೇವರ ದೀಪವನ್ನು ಬೊಳಕ್ ಮರದಲ್ಲಿಟ್ಟರು. ದೇವಾಲಯದ ಹಾಗೂ ದೇವರ ಬೊಳಕ್ ಮರದ ಸುತ್ತ ದುಡುಕೊಟ್ಟ್ ಹಾಡಿಗೆ ಸರಿಯಾಗಿ ಚೌರಿಆಟ್ ಕುಣಿದರು. ಅಂದು ರಾತ್ರಿಯಿಂದ ೩ ದಿನ ಊರಿನ ಪುರುಷರು ದೇವಾಲಯದ ಸುತ್ತ ಮಲಗುವ ಸಂಪ್ರದಾಯವಿದೆ. ತಾ. ೧೨ ರ ಬೆಳಗ್ಗಿನಿಂದ ದೇವಾಲಯದ ಹಬ್ಬದ ಕಟ್ಟಿನಂತೆ ಊರವರು ಮರ ಕಡಿಯುವುದು, ಮದುಮಾಂಸ ಸೇವನೆ, ಶುದ್ಧ ಮುದ್ರಿಕೆಯಲ್ಲಿರುವುದು, ಊರು ಬಿಟ್ಟು ಹೋಗದಿರುವುದು ಹಾಗೂ ಊರು ಬಿಟ್ಟು ಹೋದರೂ, ಸ್ನಾನಮಾಡಿ ಮನೆ ಪ್ರವೇಶಿಸುವುದು ಎಂಬೆಲ್ಲ ಕಟ್ಟು ನಿಟ್ಟಿನ ಕ್ರಮವಿದ್ದು ಊರಿನವರು ಚಾಚು ತಪ್ಪದೇ ಪಾಲಿಸುತ್ತಾ ಬರುತ್ತಿದ್ದಾರೆ.
ತಾ. ೧೪ ಪಟ್ಟಣಿ ಹಬ್ಬವಾಗಿದ್ದು, ಅಂದು ಬೆಳಿಗ್ಗೆ ಪುತ್ತರಿರ ಕುಟುಂಬದ ಜಾಗದಲ್ಲಿರುವ ಭಗವತಿ ದೇವರ ಪೂರ್ವನೆಲೆಗೆ ಅರ್ಚಕರು ಪೂಜೆ ಸಲ್ಲಿಸುವರು, ಬೆಳಿಗ್ಗೆ ಹಾಗೂ ಮಧ್ಯಾಹ್ನ ಹಿಟ್ಟು ಹಾಗೂ ತರಕಾರಿ ಸಾರನ್ನು ಮಾತ್ರ ಊರಿನ ಮನೆಮನೆಗಳಲ್ಲಿ ಸೇವಿಸಿ ದೇವಾಲಯಕ್ಕೆ ತೆರಳುವರು. ಮಧ್ಯಾಹ್ನ ೨ ಗಂಟೆಗೆ ಮುಳ್ಳಂಡ ಐನ್ಮನೆಯಿಂದ ದೇವತಕ್ಕರಾದ ಮುಳ್ಳಂಡ ಕರಣ್ ಕಾವೇರಪ್ಪ ದೇವ ಭಂಡಾರವನ್ನು ತರುವಾಗ ಎತ್ತ್ ಪೋರಾಟ ವಾದ್ಯ ಹಾಗೂ ದುಡಿಕೊಟ್ಟ್ ಹಾಡಿನೊಂದಿಗೆ ಊರಿನವರು ದೇವಾಲಯಕ್ಕೆ ಸ್ವಾಗತಿಸುವರು. ದೇವರ ಭಂಡಾರವು ದೇವಾಲಯದ ಮುಂಬಾಗಿಲಿಗೆ ತಲುಪುತಿದ್ದಂತೆ ವಿಶೇಷವಾಗಿ ಅಲಂಕರಿಸಿದ ಪೊವ್ವೊದಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ದೇವರ ಭಂಡಾರ ಹಾಗೂ ಊರಿನವರಿಗೆಲ್ಲ ಪುಣ್ಯತ್ ನೀರನ್ನು ಹಾಕಿ ಆರತಿ ಬೆಳಗಿ ಸ್ವಾಗತಿಸುವರು. ದೇವರ ಭಂಡಾರವನ್ನು ಹಾಗೂ ಎತ್ತ್ ಪೋರಾಟವನ್ನು ದೇವಾಲಯದ ಮೂರು ಸುತ್ತು ತಂದು ದೇವಭಂಡಾರವನ್ನು ದೇವರ ಸನ್ನಿಧಿಯಲ್ಲಿಟ್ಟರೆ ಎತ್ತ್ ಪೋರಾಟವನ್ನು ದೇವರ ಗುಡಿಯ ಮುಂದೆ ಅರ್ಪಿಸುವರು. ದೇವರ ಹೂ ಮಾಲೆಯನ್ನು ಪಡೆದು ಬಿಳಿಯ ಹಾಗೂ ಸಾಂಪ್ರದಾಯಿಕ ಕುಪ್ಪಸ ಧರಿಸಿದ ಊರಿನವರು ಚೌರಿ (ಕೃಷ್ಣಮೃಗದ ಕೂದಲಿನಲ್ಲಿ ವಿಶೇಷವಾಗಿ ತಯಾರಿಸಿದ ಚಾಮರ) ಯನ್ನು ಹಿಡಿದು ಕುಪ್ಪಸ ದಟ್ಟಿದನ್ನು ಧರಿಸಿ ಹಾಡುಗಾರರ ದುಡಿ ಕೊಟ್ಟಿಗೆ ದೇವಾಲಯದ ಹಾಗೂ ದೇವರ ಬೊಳಕ್ ಮರದ ಸುತ್ತ ಚೌರಿ ಆಟನ್ನು ಕುಣಿವರು.
ತಾ. ೧೫ ರಂದು ದೊಡ್ಡಹಬ್ಬ. ಅಂದು ಕೂಡ ಮಧ್ಯಾಹ್ನ ೨ ಗಂಟೆಗೆ ಮುಳ್ಳಂಡ ಐನ್ಮನೆಯಿಂದ ಭಂಡಾರ ತರುವ ಸಂಪ್ರದಾಯವಿದ್ದು, ಅಂದು ಚೌರಿಆಟ್, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ತೆಂಗೆಪೋರ್ ಎಂಬ ಸಂಪ್ರದಾಯದAತೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಿಗೆ ತೆಂಗಿನಕಾಯಿ ಕೀಳುವ ಸ್ಪರ್ಧೆ ಇರುವುದು. ನಂತರ ಊರಿನವರು, ಭಕ್ತರು ಹಾಗೂ ಹರಕೆ ಹೊತ್ತವರು ದೇವರಿಗೆ ಭಂಡಾರವನ್ನು ಅರ್ಪಿಸಿದ ನಂತರ ದೇವರ ದೀಪವನ್ನು ಬೊಳಕ್ ಮರದಿಂದ ತೆಗೆದು ದೇವಾಲಯದ ೩ ಸುತ್ತು ಬಂದು ದೇವಾಲಯದ ಗರ್ಭಗುಡಿಯೊಳಗೆ ಇಡಲಾಗುವುದು. ಅಂದು ಅನ್ನದಾನವಿರುವುದು.
ತಾ. ೧೬ ರಂದು ದೇವರ ಭಂಡಾರ ಅಂದು ಬೆಳಿಗ್ಗೆ ೭ಕ್ಕೆ ದೇವರಿಗೆ ಶುದ್ಧ ಕಲಶ ಪೂಜೆ ಮಾಡಿ ದುಡಿಕೊಟ್ಟ್ ಹಾಡಿನೊಂದಿಗೆ ಭಂಡಾರವನ್ನು ದೇವತಕ್ಕಾಮೆಯನ್ನು ಹೊಂದಿರುವ ಮುಳ್ಳಂಡ ಐನ್ಮನೆಗೆ ತಂದು ತಕ್ಕರ ಮರ್ಯಾದಿಯಂತೆ ಊರಿನವರಿಗೆ ಊಟೋಪಚಾರದ ವ್ಯವಸ್ಥೆ ಮಾಡುವ ಮೂಲಕ ಚೆಟ್ಟಳ್ಳಿ ಶ್ರೀಮಂಗಲ ಭಗವತಿಯ ಉತ್ಸವಕ್ಕೆ ತೆರೆಬೀಳುವುದು.
-ಪುತ್ತರಿರ ಕರುಣ್ ಕಾಳಯ್ಯ