ಸೋಮವಾರಪೇಟೆ, ಏ.೧೨ : ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹದಲ್ಲಿದ್ದ ಮಾಜೀ ಸಚಿವ ಬಿ.ಎ. ಜೀವಿಜಯ ಅವರು ಸದ್ಯದ ಪರಿಸ್ಥಿತಿಯಲ್ಲಿ ಅಸಮಾಧಾನಿತರಾಗಿದ್ದು, ಇವರ ಮುಂದಿನ ನಡೆ ಏನು? ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಈಗಾಗಲೇ ಕಾಂಗ್ರೆಸ್ ವರಿಷ್ಠ ನಾಯಕರಿಗೆ ಪತ್ರ ಬರೆದು ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಮಾಜೀ ಸಚಿವ, ಪ್ರಭಾವಿ ರಾಜಕೀಯ ಮುಖಂಡರೂ ಆಗಿರುವ ಬಿ.ಎ. ಜೀವಿಜಯ ಅವರು ವಿಧಾನ ಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಯಾವ ನಡೆ ಅನುಸರಿಸುತ್ತಾರೆ? ಎಂಬ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಶುರುವಾಗಿದೆ.

ಶಾಸಕರಾಗಬೇಕೆಂಬ ಆಶಯದೊಂದಿಗೆ ಕಾಂಗ್ರೆಸ್‌ನ ಸ್ಥಳೀಯ ನಾಯಕರ ಆಹ್ವಾನದ ಮೇರೆ ಜೆಡಿಎಸ್ ತೊರೆದು ಕೈ ಪಡೆ ಸೇರಿದ್ದ ಜೀವಿಜಯ ಅವರಿಗೆ ಈ ಬಾರಿ ಸ್ಪರ್ಧಿಸುವ ಅವಕಾಶ ಲಭಿಸಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಮಾಜಿ ಸಚಿವರು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ-ಪ್ರಭಾವ ಬೀರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊAಡಿರುವ ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡರೂ ಆಗಿರುವ ಬಿ.ಎ. ಜೀವಿಜಯ ಅವರು, ‘ಸದ್ಯಕ್ಕೆ ನಾನು ಕಾಂಗ್ರೆಸ್‌ನಲ್ಲಿದ್ದರೂ ರಾಜಕೀಯ ನಿವೃತ್ತಿ ಘೋಷಿಸಿದ್ದೇನೆ. ಪಕ್ಷದ ವರಿಷ್ಠರಿಗೆ ಪತ್ರ ಬರೆದು ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆ. ಆದರೆ ನಮ್ಮ ಮನವಿಗೆ ಹೈಕಮಾಂಡ್ ಸ್ಪಂದಿಸಿಲ್ಲ. ಟಿಕೆಟ್ ಘೋಷಣೆ ಸಂದರ್ಭ ಕನಿಷ್ಟ ಪಕ್ಷ ನಮ್ಮನ್ನು ಕರೆದು ಮಾತನಾಡಿಸಿಲ್ಲ. ನಾನೀಗ ಪಂಜರದಿAದ ಹೊರ ಬಂದಿರುವ ಪಕ್ಷಿಯಾಗಿದ್ದೇನೆ. ಯಾವ ನಾಯಕರ ಹಂಗೂ ಇಲ್ಲ’ ಎಂದಿದ್ದಾರೆ.

‘ಕಾAಗ್ರೆಸ್ ಟಿಕೆಟ್ ಪಡೆದಿರುವ ಡಾ. ಮಂಥರ್‌ಗೌಡ ಅವರು ಎರಡು ಬಾರಿ ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಆದರೆ ಅವರಿಗೆ ನನ್ನ ಬೆಂಬಲ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಪಕ್ಕದ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ತಂದೆ ಸ್ಪರ್ಧಿಸುತ್ತಿದ್ದು, ಇಲ್ಲಿ ಮಗ ಕಾಂಗ್ರೆಸ್‌ನಿAದ ಸ್ಪರ್ಧಿಸುತ್ತಿದ್ದಾರೆ. ಇದು ಯಾವ ಹೊಂದಾಣಿಕೆ ಎಂಬುದು ಅರ್ಥವಾಗುತ್ತಿಲ್ಲ. ನಾವುಗಳು ರಾಮಕೃಷ್ಣ ಹೆಗ್ಗಡೆಯವರ ಕಾಲದಿಂದಲೂ ಮೌಲ್ಯಾಧಾರಿತ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ರಾಜಕೀಯ ಧೃವೀಕರಣವನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು’ ಎಂದು ಜೀವಿಜಯ ಸ್ಪಷ್ಟ ಅಭಿಪ್ರಾಯ ಹೊರಹಾಕಿದ್ದಾರೆ.

ಮತ್ತೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಹರಪಳ್ಳಿ ರವೀಂದ್ರ ಅವರು ಜೆಡಿಎಸ್ ಸಂಪರ್ಕದಲ್ಲಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೀವಿಜಯ ಅವರು, ‘ಯಾರಿಗೆ ಯಾವ ಪಕ್ಷದಿಂದ ಟಿಕೆಟ್ ಲಭಿಸುತ್ತದೆ ಎಂಬುದನ್ನು ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲ. ತಾನು ಪಕ್ಷೇತರ ಅಭ್ಯರ್ಥಿಗಳ ಪರವಾಗಿಲ್ಲ. ರವೀಂದ್ರ ಅವರು ಯಾವುದಾದರೂ ಪಕ್ಷದಿಂದ ಟಿಕೆಟ್ ತಂದರೆ ಬೆಂಬಲ ನೀಡುವ ಬಗ್ಗೆ ಯೋಚಿಸಬಹುದು. ಅದಕ್ಕೂ ಮುನ್ನ ನನ್ನ ಸಾವಿರಾರು ಬೆಂಬಲಿಗರೊAದಿಗೆ ಚರ್ಚೆ ನಡೆಸುತ್ತಿದ್ದು, ಅವರುಗಳ ಒಮ್ಮತದ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ ಮಡಿಕೇರಿ ಕ್ಷೇತ್ರದಲ್ಲಿ ತಮ್ಮದೇ ಬಲ ಹೊಂದಿರುವ ಬಿ.ಎ. ಜೀವಿಜಯ ಅವರು ಕಳೆದ ಐದಾರು ವಿಧಾನ ಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು, ಈ ಬಾರಿಯ ಚುನಾವಣಾ ಕಣದಿಂದ ಹೊರಬಂದಿದ್ದಾರೆ. ಆದರೂ ಸಹ ಚುನಾವಣಾ ಫಲಿತಾಂಶದ ಮೇಲೆ ಇವರ ನಡೆ ಪರಿಣಾಮ ಬೀರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ೨೦೦೮ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿAದ ಸ್ಪರ್ಧಿಸಿದ್ದ ಜೀವಿಜಯ ಅವರು ೫೩,೪೯೯ ಮತಗಳನ್ನು ಪಡೆದಿದ್ದರು. ೨೦೧೩ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ೫೨,೦೬೭ ಮತಗಳು, ೨೦೧೮ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ೫೪,೬೧೬ ಮತಗಳನ್ನು ಪಡೆದುಕೊಂಡಿದ್ದರು. ಈ ಬಾರಿ ಕಾಂಗ್ರೆಸ್‌ನಿAದ ಸ್ಪರ್ಧಿಸಿ ಗೆಲುವು ಸಾಧಿಸುವ ತವಕದಲ್ಲಿದ್ದ ಜೀವಿಜಯ ಅವರಿಗೆ ಟಿಕೆಟ್ ಲಭಿಸದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. - ವಿಜಯ್ ಹಾನಗಲ್