ಮಡಿಕೇರಿ, ಏ. ೧೨: ಕೊಡಗಿನಲ್ಲಿ ಎಲ್ಲಾ ರೀತಿಯ ಸಮಾರಂಭಗಳಲ್ಲಿ ಮದ್ಯ ಬಳಕೆ ಸಾಮಾನ್ಯ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕಲಾಗಿದ್ದು, ಅಬಕಾರಿ ಇಲಾಖೆ ಅನುಮತಿ ನೀಡುವದನ್ನು ಕೈಬಿಟ್ಟಿದೆ.
ಚುನಾವಣೆ ಸಮಯದಲ್ಲಿ ಸಭೆ-ಸಮಾರಂಭಗಳಲ್ಲಿ ರೂ. ೧೧,೫೦೦ ಹಣವನ್ನು ಸನ್ನದು ಶುಲ್ಕ ಎಂದು ಪಾವತಿಸಿ ಅಬಕಾರಿ ಇಲಾಖೆ ಮೂಲಕ ಅನುಮತಿ ಪಡೆದು ಮದ್ಯ ಬಳಕೆಗೆ ಅವಕಾಶಕ್ಕೆ ತಾ. ೧೧ ರ ತನಕವೂ ಇತ್ತು. ಆದರೆ, ಅಬಕಾರಿ ಇಲಾಖೆಯ ಮೇಲಧಿಕಾರಿಗಳ ಸೂಚನೆ ಹಿನ್ನೆಲೆ ಅನುಮತಿಯನ್ನು ತಾ. ೧೨ ರಿಂದ ನೀಡಲಾಗುತ್ತಿಲ್ಲ. ಸಭೆ-ಸಮಾರಂಭಗಳಲ್ಲಿ ರಾಜಕಾರಣಿಗಳು ಮದ್ಯ ಹಂಚಬಹುದು ಎಂಬ ದೃಷಿಯಿಂದ ಇಲಾಖೆ ಈ ನಡೆ ಅನುಸರಿಸಿದೆ. ಇದರಿಂದ ಸಹಜವಾಗಿ ಜನರಲ್ಲಿ ಅಸಮಾಧಾನ ಮೂಡಿದೆ.
ಅನುಮತಿ ದೊರೆಯುತ್ತದೆ ಎಂದು ಕೆಲವರು ಮದ್ಯ ಖರೀದಿಸಿಟ್ಟಿದ್ದಾರೆ. ಇದರಿಂದ ಅವರು ನಷ್ಟಕ್ಕೆ ಒಳಗಾಗಿದ್ದಾರೆ. ಜೊತೆಗೆ ಸಮಾರಂಭಗಳಲ್ಲಿ ಮದ್ಯ ಬಳಕೆ ಕಂಡುಬAದಲ್ಲಿ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.