ಸೋಮವಾರಪೇಟೆ,ಏ.೧೨: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ-ಕಾಜೂರು ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ದ್ವಿಚಕ್ರ ವಾಹನ ಸವಾರರ ಮೇಲೆ ಕಾಡಾನೆಯೊಂದು ಧಾಳಿ ನಡೆಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಸವಾರರು ಪಾರಾಗಿದ್ದಾರೆ.

ಕಾಜೂರು-ಯಡವಾರೆ ಮುಖ್ಯರಸ್ತೆಯ ಕಾಜೂರು ಅರಣ್ಯದ ತಿರುವಿನಲ್ಲಿ ಘಟನೆ ನಡೆದಿದ್ದು, ಬೈಕ್ ಚಾಲಕ ಕಂಚಿಲ್ಪಾಡಿ ರವಿ ಹಾಗೂ ಹಿಂಬದಿ ಸವಾರ ಅಮೆಮನೆ ನಾರಾಯಣಪ್ಪ ಅವರುಗಳು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರವಿ ಅವರು ತಮ್ಮ ಹೀರೋ ಹೋಂಡಾ ಬೈಕ್‌ನಲ್ಲಿ ಮಾವ ನಾರಾಯಣಪ್ಪ ಅವರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತರುತ್ತಿದ್ದ ಸಂದರ್ಭ, ಅರಣ್ಯದ ತಿರುವಿನಲ್ಲಿ ಎದುರಾದ ಕಾಡಾನೆ ಬೈಕ್ ಮೇಲೆ ಧಾಳಿ ನಡೆಸಿದೆ.

ತಕ್ಷಣ ಕೆಳಬಿದ್ದ ಈರ್ವರು ಪಕ್ಕದಲ್ಲಿರುವ ಆನೆ ಕಂದಕಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ರಸ್ತೆ ಬದಿಯಲ್ಲಿ ಬಿದ್ದ ಬೈಕ್‌ನ್ನು ತುಳಿದು ಜಖಂಗೊಳಿಸಿದ ಕಾಡಾನೆ, ನಂತರ ಬೈಕ್‌ನ್ನು ಕಂದಕದೊಳಗೆ ಎಸೆದಿದೆ.

ಕಾಜೂರು ವ್ಯಾಪ್ತಿಯಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಈ ಹಿಂದೆ ನಿರ್ದಿಷ್ಟ ಜಾಗದಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಗಳು ಇದೀಗ ಆನೆ ಕಂದಕ ಮತ್ತು ಬ್ಯಾರಿಕೇಡ್ ಅಳವಡಿಕೆಯ ನಂತರ ಮುಖ್ಯ ರಸ್ತೆಯಲ್ಲಿಯೇ ಸಂಚರಿಸುತ್ತಿವೆ.

ಬಿರು ಬೇಸಿಗೆಯ ಹಿನ್ನೆಲೆ ಅರಣ್ಯದಲ್ಲಿ ನೀರು ಮತ್ತು ಮೇವಿಗೆ ಸಮಸ್ಯೆಯಾಗಿದ್ದು, ಕಾಡಾನೆಗಳು ಜನ ವಸತಿ ಪ್ರದೇಶಕ್ಕೆ ಲಗ್ಗೆಯಿಡುತ್ತಿವೆ. ಇದರಿಂದಾಗಿ ಜನಸಾಮಾನ್ಯರು ರಸ್ತೆಯಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ತಕ್ಷಣ ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಮೂಲಕ ರೈಲ್ವೇ ಬ್ಯಾರಿಕೇಡ್ ಹಾಗೂ ಆನೆ ಕಂದಕವನ್ನು ಸುಸ್ಥಿತಿಗೆ ತರಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.