ಮಡಿಕೇರಿ, ಏ. ೧೨: ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ನೀಡಲಾಗಿದೆ. ವಿದ್ಯಾರ್ಥಿಗಳು ರಜೆಯ ಮಜಾ ಅನುಭವಿಸಲು ಸ್ನೇಹಿತರೊಂದಿಗೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಹಜ. ಕುಟುಂಬ ಸಮೇತರಾಗಿ ಬೇಸಿಗೆ ರಜೆಯನ್ನು ‘ಎಂಜಾಯ್’ ಮಾಡಲು ಬಹುತೇಕರು ಪ್ರವಾಸಕ್ಕೆ ತೆರಳುತ್ತಾರೆ. ಬೇಸಿಗೆಯಲ್ಲಿ ನದಿ, ತೊರೆಗಳು, ಕೆರೆಗಳು ಹಾಗೂ ತೋಡುಗಳಲ್ಲಿ ನೀರಿನ ಹರಿವು ಸಹಜವಾಗಿ ಕಡಿಮೆ ಇರಲಿದೆ. ನೀರು ಕಡಿಮೆ ಇರುವುದರಿಂದ ಸಹಜವಾಗಿ ಎಲ್ಲರನ್ನೂ ಈಜಲು ಆಕರ್ಷಿಸುತ್ತದೆ. ಸಾಮಾನ್ಯವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಘಟನೆಗಳು ನಡೆಯುವುದು ಏಪ್ರಿಲ್ ಹಾಗೂ ಮೇ ತಿಂಗಳನಲ್ಲಿಯೇ.

ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಸ್ನೇಹಿತರೊಂದಿಗೆ ಸ್ನಾನ ಮಾಡಲೆಂದು ನದಿಗಿಳಿದು ಪ್ರಾಣಕಳೆದುಕೊಂಡ ಹಲವು ಉದಾಹರಣೆಗಳು ಕೊಡಗು ಜಿಲ್ಲೆಯಲ್ಲಿಯೇ ಇವೆ. ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ. ಸ್ನೇಹಿತರೊಂದಿಗೆ ನೀರಿನಲ್ಲಿ ಈಜಲು ತೆರಳಿ ಪ್ರಾಣ ಕಳೆದುಕೊಂಡವರಲ್ಲಿ ಹದಿಹರೆಯದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ನೀರಿಗಿಳಿಯುವ ಹುಚ್ಚಾಟ ಬಿಡಲಿ ಪ್ರವಾಸಿಗರು!

ಕೊಡಗು ಜಿಲ್ಲೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಓಡಾಟ ಕಂಡು ಬರುತ್ತದೆ. ಜಲಪಾತ, ನದಿಗಳಲ್ಲಿ ನೀರಿಗಿಳಿಯುವ ಹುಚ್ಚಾಟದಿಂದ ಅದೆಷ್ಟೋ ಪ್ರವಾಸಿಗರು ನೀರಿನಲ್ಲೇ ಪ್ರಾಣಬಿಟ್ಟವರಿದ್ದಾರೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಪ್ರವಾಸಿಗರು ನೀರಿಗಿಳಿದು ಪ್ರಾಣಬಿಟ್ಟವರ ಸಂಖ್ಯೆ ಹೆಚ್ಚಿದ್ದರೂ ಸಹ ಪ್ರವಾಸಿಗರು ಎಚ್ಚೆತ್ತುಕೊಂಡಿಲ್ಲ. ನೀರಿಗಿಳಿಯುವ ದುಸ್ಸಾಹಸಕ್ಕೆ ಕೈ ಹಾಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಮೇ ೨೯ ರಂದು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದ ತೆಲಂಗಾಣ ಮೂಲದ ಮೂವರು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದರು. ಕೊಡಗು ಜಿಲ್ಲೆಯ ಪ್ರವಾಸಿ ತಾಣ ಮುಕ್ಕೋಡ್ಲುವಿನ ಕೋಟೆ ಅಬ್ಬಿ ಜಲಪಾತದಲ್ಲಿ ಈ ಘಟನೆ ನಡೆದಿತ್ತು. ಬಹುತೇಕ ಪ್ರವಾಸಿಗರಿಗೆ ನೀರಿನ ಆಳದ ಬಗ್ಗೆ ಮಾಹಿತಿ ಇರುವುದಿಲ್ಲ. ಮೋಜಿಗಾಗಿ ನೀರಿಗಿಳಿಯುವ ದುಸ್ಸಾಹಸಕ್ಕೆ ಕೈ ಹಾಕಿ ಪ್ರಾಣ ಕಳೆದುಕೊಳ್ಳುತ್ತಾರೆ.

ಕಳೆದ ವರ್ಷ ಏಪ್ರಿಲ್ ೨೬ ರಂದು ಪ್ರವಾಸಕ್ಕೆಂದು ಕುಟುಂಬ ಸದಸ್ಯರೊಂದಿಗೆ ಬಂದಿದ್ದ ಬಾಲಕನೋರ್ವ ಕಾವೇರಿ ನದಿಯಲ್ಲಿ ಕಾಲು ಜಾರಿ ಬಿದ್ದು ಮುಳುಗಿದ ಘಟನೆ ಜಿಲ್ಲೆಯ ಕುಶಾಲನಗರ ತಾಲೂಕಿನ ದುಬಾರೆಯಲ್ಲಿ ನಡೆದಿತ್ತು. ಯುವಕ ಸ್ನಾನ ಮಾಡಲು ಕಲ್ಲಿನ ಮೇಲೆ ನಿಂತಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಪ್ರಾಣಕಳೆದುಕೊಂಡಿದ್ದ. ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ನೀರಿಗಿಳಿಯುವ ದುಸ್ಸಾಹಸಕ್ಕೆ ಕೈ ಹಾಕಿ ಪ್ರಾಣ ಕಳೆದುಕೊಳ್ಳಬೇಡಿ ಎಂಬುದೇ ಎಲ್ಲರ ಕಳಕಳಿಯ ಮನವಿ.

- ಕೆ.ಎಂ ಇಸ್ಮಾಯಿಲ್ ಕಂಡಕರೆ