ಶನಿವಾರಸಂತೆ, ಏ. ೧೧: ಸಾಮಾನ್ಯವಾಗಿ ಚೈತ್ರ ಮಾಸ ಅಡಿಯಿಡುತ್ತಿರುವಂತೆ ಎಲ್ಲೆಡೆ ಹಸಿರು ಮೆಣಸಿನಕಾಯಿ ಘಾಟು ವಾತಾವರಣದಲ್ಲಿ ಬೆರೆತು ಸಮೃದ್ಧ ಬೆಳೆಯ ಇರುವಿಕೆಯನ್ನು ಸಾರುತ್ತಿತ್ತು. ಪ್ರತಿ ವರ್ಷ ಮಾರ್ಚ್ ತಿಂಗಳು ಆರಂಭವಾಗುತ್ತಿದ್ದAತೆ ಕೊಡಗು ಜಿಲ್ಲೆಯಲ್ಲೆ ಖ್ಯಾತಿ ಪಡೆದ ಶನಿವಾರಸಂತೆಯ ಸಂತೆ ಮಾರುಕಟ್ಟೆಯಲ್ಲಿ ಮೆಣಸಿನ ಕಾಯಿ ಸಂತೆಯೂ ಭರದಿಂದ ನಡೆಯುತ್ತಿತ್ತು.

ಆದರೆ, ಈ ವರ್ಷ ಏಪ್ರಿಲ್ ತಿಂಗಳ ೨ ನೇ ವಾರವಾದರೂ ಸಂತೆ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಮಾರಾಟದ ಭರಾಟೆ ಕಂಡುಬರುತ್ತಿಲ್ಲ. ೩ ವಾರಗಳಿಂದ ಸಂತೆ ನಡೆಯುತ್ತಿದ್ದು ಸುತ್ತಮುತ್ತಲ ಗ್ರಾಮಗಳಲ್ಲಿ ಬೆರಳೆಣಿಕೆಯ ರೈತರು ತಾವು ಬೆಳೆದಿರುವ ೫೦೦ ಕೆ.ಜಿ. ಯಷ್ಟು ಮೆಣಸಿನಕಾಯಿಯನ್ನು ವಾಹನಗಳಲ್ಲಿ ತುಂಬಿಸಿ ತಂದು ಮಾರಾಟ ಮಾಡುತ್ತಿದ್ದಾರೆ. ವ್ಯಾಪಾರಿಗಳು ೧ ಕೆ.ಜಿ.ಗೆ ರೂ. ೩೫-೪೦ ರ ದರದಲ್ಲಿ ಖರೀದಿಸಿ ಹೊರ ರಾಜ್ಯಗಳಿಗೆ ಸಾಗಿಸುತ್ತಿದ್ದಾರೆ.

ಗದ್ದೆಗಳಲ್ಲೂ ರೈತರು ಮೆಣಸಿನಕಾಯಿ ಬೆಳೆದಂತೆ ಕಾಣುತ್ತಿಲ್ಲ. ಶುಂಠಿ ಬೆಳೆಯೇ ರಾರಾಜಿಸುತ್ತಿದೆ. ಬೆರಳೆಣಿಕೆಯ ರೈತರು ಶೇ.೨ ರಷ್ಟು ಮಾತ್ರ ಹಸಿರು ಮೆಣಸಿನ ಕಾಯಿ ಬೆಳೆದಿರುತ್ತಾರೆ. ಬೆಳೆಯದಿರಲು ರೈತರು ಹಲವಾರು ಕಾರಣಗಳನ್ನು ನೀಡುತ್ತಾರೆ.

“ಮೆಣಸಿನ ಗಿಡ ಬೆಳೆಯುವ ಫಾರಂ ಮಾಲೀಕರು ಕಳಪೆ ಗುಣಮಟ್ಟದ ಗಿಡ ವಿತರಣೆ ಮಾಡುತ್ತಿದ್ದಾರೆ. ರಸಗೊಬ್ಬರದ ಬೆಲೆ ರೂ.೧೧೮೫ ರಿಂದ ರೂ.೧೯೫೦ ರವರಗೆ ಇದೆ. ಡೀಸಲ್ ಬೆಲೆ ಅಧಿಕವಾಗಿದೆ. ಔಷಧಿಯ ಬೆಲೆ ದ್ವಿಗುಣವಾಗಿದ್ದು; ಔಷಧಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಿಲ್ಲ. ವ್ಯಾಪಾರಗಾರರಲ್ಲಿ ತರಬೇತಿ ಕೊರತೆಯಿದೆ. ಮುಖ್ಯವಾಗಿ ಕಾರ್ಮಿಕರ ಕೊರತೆಯಿದ್ದು ಓರ್ವ ಕಾರ್ಮಿಕನ ಕೂಲಿ ರೂ.೧೮೦ ರಿಂದ ದಿಢೀರನೇ ರೂ.೪೦೦ಕ್ಕೆ ಏರಿದೆ. ವಾಡಿಕೆ ಮಳೆ ಸುರಿಯದೆ ಬಿರು ಬಿಸಿಲಿನ ವಾತಾವರಣ. ಜೊತೆಗೆ ಕೊಳವೆ ಬಾವಿಯಿದ್ದರೂ ವಿದ್ಯುತ್ ಸರಬರಾಜು ಸಮರ್ಪಕವಾಗಿ ನೀಡುತ್ತಿಲ್ಲ. ಹೀಗಿರುವಾಗ ಮೆಣಸಿನ ಕಾಯಿ ಬೆಳೆಯುವುದಾದರೂ ಹೇಗೆ ಎಂದು ಕೂಜಗೇರಿ ಗ್ರಾಮದ ಪ್ರಗತಿಪರ ರೈತ ಕೆ.ಟಿ.ಹರೀಶ್ ಹಾಗೂ ಇತರ ಬೆಳೆಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಹಸಿ ಮೆಣಸಿನಕಾಯಿ ಬೆಳೆ ಹೆಸರುವಾಸಿಯಾಗಿದ್ದು ಶನಿವಾರಸಂತೆಯ ಸಂತೆ ಮಾರುಕಟ್ಟೆ ಜಿಲ್ಲೆ, ರಾಜ್ಯದಲ್ಲೂ ಖ್ಯಾತಿ ಗಳಿಸಿದ್ದು ಬೇಸಿಗೆಯಲ್ಲಿ ಬೆಳೆಯುತ್ತಿದ್ದ ಮೆಣಸಿನ ಕಾಯಿ ಬೆಳೆ ರೈತರ ಮಳೆಗಾಲದ ಸಂಸಾರ ನಿರ್ವಹಣೆಗೆ ಜೀವನಾಧಾರ ವಾಗಿತ್ತು. ಮಕ್ಕಳ ಶಾಲಾ ಶುಲ್ಕ ಕಟ್ಟಲು ಸಹಕಾರಿಯಾಗಿತ್ತು. ಇಂದು ಮೆಣಸಿನಕಾಯಿ ಬೆಳೆಯುತ್ತಿದ್ದ ರೈತರು ಹಲವಾರು ಕಾರಣಗಳಿಂದ ಕಂಗಾಲಾ ಗಿದ್ದು ಬೆಳೆಯನ್ನೇ ತ್ಯಜಿಸುವಂತಾಗಿದೆ.

-ಶ.ಗ. ನಯನತಾರಾ