ಸುಂಟಿಕೊಪ್ಪ, ಏ. ೧೧: ಕೊಡಗರಹಳ್ಳಿಯಲ್ಲಿ ನೆಲೆಸಿರುವ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವರ ವಾರ್ಷಿಕ ಹಬ್ಬ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಶ್ರೀ ಗಣಹೋಮದೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಶ್ರೀ ಬೈತೂರಪ್ಪ ಪೊವ್ವದಿ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಮತ್ತು ರುದ್ರಾಭೀಷೇಕವನ್ನು ದೇವಾಲಯದ ಪ್ರಧಾನ ಅರ್ಚಕರಾದ ಭಾನು ಪ್ರಕಾಶ್ ಭಟ್, ರಘುಪತಿ ಭಟ್ ಹಾಗೂ ರಮೇಶ್ ವೈದ್ಯ ಅವರ ತಂಡ ನೆರವೇರಿಸಿತು.

ದೇವತಕ್ಕರಾದ ಜಗ್ಗಾರಂಡ ಹ್ಯಾರಿ ಕಾರ್ಯಪ್ಪ ಅವರ ಮನೆಯಿಂದ ದೇವರ ಭಂಡಾರವನ್ನು ಅರ್ಚಕ ನರಸಿಂಹ ಭಟ್ ಅವರ ನೇತೃತ್ವದಲ್ಲಿ ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ದುಡಿಕೊಟ್ಟ್ ಪಾಟ್, ಸಾಂಪ್ರದಾಯಿಕ ಕೊಡವ ಓಲಗದೊಂದಿಗೆ ದೇವಾಲಯಕ್ಕೆ ತಂದು ಪೂಜೆ ನೆರವೇರಿಸಲಾಯಿತು. ಮಹಾಪೂಜೆಯ ಬಳಿಕ ತೀರ್ಥ ಪ್ರಸಾದ ನೆರವೇರಿತು. ದೇವಾಲಯದ ವಾರ್ಷಿಕ ಹಬ್ಬದ ಸಂದರ್ಭ ದೇವಾಲಯಕ್ಕೆ ಒಳಪಟ್ಟ ಕುಟುಂಬಗಳು ಸಾಂಪ್ರದಾಯಿಕ ವೇಷ ಭೂಷಣದೊಂದಿಗೆ ದೇವಾಲಯದ ಆವರಣದಲ್ಲಿ ಸೇರಿ ಸಾಂಪ್ರ‍್ರದಾಯಿಕ ಬೊಳಕಾಟ್ ನೃತ್ಯ ಸೇವೆ ಸಲ್ಲಿಸಿದರು.

ಈ ಸಂದರ್ಭ ಕೊಡಗರಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಾರ್ಷಿಕ ಹಬ್ಬವನ್ನು ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯ ಟ್ರಸ್ಟ್ ಮೇಲುಸ್ತುವಾರಿಯಲ್ಲಿ ದೇವತಕ್ಕರು ಮತ್ತು ಮುಕ್ಕಾಟಿಯವರ ನೇತೃತ್ವದಲ್ಲಿ ಗ್ರಾಮಸ್ಥರು, ದಾನಿಗಳು ಮತ್ತು ಹಿತೈಷಿಗಳು ಯಶಸ್ವಿಯಾಗಿ ನಡೆಸಿಕೊಟ್ಟರು.