ಮಡಿಕೇರಿ, ಏ. ೧೦ : ಬೆಟ್ಟ-ಗುಡ್ಡ., ಕಾಡು., ನದಿ-ತೊರೆಗಳಿಂದಾವೃತವಾಗಿರುವ ಕೊಡಗು ಸಾಕಷ್ಟು ಕೃಷಿ ಭೂಮಿಯನ್ನು ಕೂಡ ಹೊಂದಿರುವ ಜಿಲ್ಲೆ., ಕೊಡಗು ಎಂದರೆ ಅದು ಕೃಷಿ ಪ್ರಧಾನವಾದ ಜಿಲ್ಲೆ ಎಂಬ ಹೆಗ್ಗಳಿಕೆ ಹಿಂದೆ ಇತ್ತು, ಎಲ್ಲಿ ನೋಡಿದರಲ್ಲಿ ಸಂಪತ್ಭರಿತ ಗದ್ದೆ ಬಯಲು., ಸೊಂಪಾಗಿ ಬೆಳೆದ ಪೈರು., ಅಲ್ಲಲ್ಲಿ ಮೈದಾನಗಳಲ್ಲಿ, ಗೋಮಾಳಗಳಲ್ಲಿ ಅಗಣಿತ ಸಂಖ್ಯೆಯಲ್ಲಿ ಮೇಯುತ್ತಿದ್ದ ದನ-ಕರುಗಳು ಕಂಗೊಳಿಸುತ್ತಿದ್ದವು., ಆಧುನಿಕತೆ ಬೆಳೆಯುತ್ತಿರುವಂತೆ ಕೃಷಿ ಭೂಮಿಗಳು ಶುಂಠಿ ಬೆಳೆಯುವ ಪ್ರದೇಶಗಳಾಗಿ ಮಾರ್ಪಟ್ಟವು., ನಂತರದಲ್ಲಿ ತೋಟಗಳಾದವು., ಇದೀಗ ಗದ್ದೆಗಳು ಸೈಟುಗಳಾಗುತ್ತಿದ್ದು, ಕಾಂಕ್ರಿಟಿಕರಣಗೊಳ್ಳುತ್ತಿವೆ., ದನ, ಹಸು-ಕರುಗಳಿಗೆ ಮೇಯಲು ಜಾಗವಿಲ್ಲದಂತಾಗಿ ಬಹುತೇಕ ಮಂದಿ ತಾವು ಸಾಕಿ ಸಲಹುತ್ತಿದ್ದ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವರು ಬೀದಿಗೆ ಬಿಡುತ್ತಿದ್ದರೆ, ಇನ್ನೂ ಕೆಲವು ಕಳ್ಳ ಸಾಗಾಣಿಕೆ ಮೂಲಕ ಕಸಾಯಿಖಾನೆ ಪಾಲಾಗುತ್ತಿವೆ..!
ಹೀಗೇ ಬೀದಿ ಪಾಲಾಗುತ್ತಿರುವ, ಕಸಾಯಿಖಾನೆ ಸೇರುತ್ತಿರುವ ಜಾನುವಾರುಗಳ ರಕ್ಷಣೆಗೆಂದು ಜಿಲ್ಲೆಯಲ್ಲಿ ಅಲ್ಲಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ. ಖಾಸಗಿಯಾಗಿ, ಟ್ರಸ್ಟ್ಗಳು, ಮಠ ಮಾನ್ಯಗಳು ಗೋಶಾಲೆ ತೆರೆದು ಗೋವುಗಳ ರಕ್ಷಣೆಗೆ ಮುಂದಾಗಿವೆ. ಇದರೊಂದಿಗೆ ಸರಕಾರ ಕೂಡ ಪ್ರತಿ ಜಿಲ್ಲೆಗೊಂದರAತೆ ಗೋಶಾಲೆ ತೆರೆಯುವ ಯೋಜನೆ ರೂಪಿಸಿದೆ. ಆದರೆ., ಇಂದಿನ ಪರಿಸ್ಥಿತಿಯಲ್ಲಿ ಈ ಬಿರು ಬೇಗೆಯಲ್ಲಿ ಒಂದೆರಡು ಗೋವುಗಳನ್ನು ಸಾಕುವದೇ ಕಷ್ಟಕರವಾಗಿರುವಾಗ ಹತ್ತಿಪ್ಪತ್ತು ಗೋವುಗಳನ್ನು ಸಾಕಿ ಸಲಹುವದು ಸುಲಭದ ಕಾಯಕವಲ್ಲ. ಹಾಗಾಗಿ ಗೋಶಾಲೆಗಳು ಸರಕಾರದ
ನೆರವಿನ ನಿರೀಕ್ಷೆಯಲ್ಲಿ ದಿನ ದೂಡುವಂತಾಗಿದೆ..!
ಕೊಡಗು ಜಿಲ್ಲೆಯಲ್ಲಿ ಒಂದು ಗೋಸದನ ಸೇರಿದಂತೆ ಒಟ್ಟು ಆರು ಗೋಶಾಲೆಗಳಿವೆ. ಈ ಪೈಕಿ ಒಂದು ಸರಕಾರಿ ಗೋಶಾಲೆಯಾಗಿದ್ದು, ಒಂದು ಮಠಕ್ಕೆ ಸೇರಿದ್ದಾಗಿದೆ. ಎರಡು ಗೊಶಾಲೆಗಳನ್ನು ಟ್ರಸ್ಟ್ ಮೂಲಕ ನಿರ್ವಹಣೆ ಮಾಡಲಾಗುತ್ತಿದ್ದರೆ, ಮತ್ತೆರಡನ್ನು ಖಾಸಗಿ ವ್ಯಕ್ತಿಗಳು ನಡೆಸುತ್ತಿದ್ದಾರೆ. ಸರಕಾರಿ ಗೋಶಾಲೆ ಸರಕಾರದ ಅನುದಾನದಿಂದ
(ಮೊದಲ ಪುಟದಿಂದ) ಅಧಿಕಾರಿಗಳ ಮಟ್ಟದಲ್ಲಿ ನಿರ್ವಹಣೆಯಾಗುತ್ತಿದ್ದು, ಇನ್ನುಳಿದೆಲ್ಲವೂ ದಾನಿಗಳ., ಪ್ರಾಣಿಪ್ರಿಯರ ನೆರವು, ಸಹಕಾರದಿಂದ ಮುನ್ನಡೆಯುತ್ತಿವೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಸಂಕಷ್ಟದ ಪರಿಸ್ಥಿತಿಗೆ ತಲಪಿವೆ..!
ಅತಂತ್ರ ಸ್ಥಿತಿಯಲ್ಲಿ ಶ್ರೀಕೃಷ್ಣ ಗೋಶಾಲೆ..!
ಆಧುನಿಕತೆಯ ನಾಗಾಲೋಟದಲ್ಲಿ ಕೃಷಿ ಭೂಮಿಗಳು ಮಾಯವಾಗಿ ಎಲ್ಲವೂ ವಾಣಿಜ್ಯ ಪ್ರದೇಶಗಳಾಗುತ್ತಿರುವ ಪ್ರಸ್ತುತದ ಸನ್ನಿವೇಶದಲ್ಲಿ ಅಲ್ಲಿ, ಇಲ್ಲಿ ಎಂಬAತೆ ಕೆಲವರು ಹವ್ಯಾಸವನ್ನು ಬಿಡಲಾಗದೆಯೋ., ಪ್ರಾಣಿಗಳ ಮೇಲಿನ ಮಮಕಾರದಿಂದಲೋ., ಇನ್ನೂ ಕೆಲವರು ಅದನ್ನೇ ಉದ್ಯಮವನ್ನಾಗಿ ಮಾಡಿಕೊಂಡಿದ್ದವರು ಒಂದÀಷ್ಟು ಗೋವುಗಳನ್ನು ಸಾಕಿ, ಸಲಹುತ್ತಾ ಬರುತ್ತಿದ್ದರು. ಈ ನಡುವೆ ೨೦೧೮-೧೯ರಲ್ಲಿ ಸಂಭವಿಸಿದ ದುರಂತದಲ್ಲಿ ಬಹುತೇಕ ಮಂದಿ ಮನೆ, ಮಠಗಳನ್ನು ಕಳೆದುಕೊಂಡ ಸಂದರ್ಭದಲ್ಲಿ ಜಾನುವಾರುಗಳು ಬೀದಿಪಾಲಾದವು. ಆಹಾರ, ನೀರಿಲ್ಲದೆ ಬಳಲುತ್ತಿದ್ದ ಹಾಗೂ ಕಸಾಯಿಖಾನೆಗಳಿಗೆ ರವಾನೆಯಾಗುತ್ತಿದ್ದ ಗೋವುಗಳನ್ನು ರಕ್ಷಿಸುವ ಸಲುವಾಗಿ ಒಂದಷ್ಟು ಮಂದಿ ಸೇರಿಕೊಂಡು ಟ್ರಸ್ಟ್ ರಚನೆ ಮಾಡಿಕೊಂಡು ಶ್ರೀಕೃಷ್ಣ ಗೋಶಾಲೆಯನ್ನು ಭಾಗಮಂಡಲ ಸನಿಹದ ಚೆಟ್ಟಿಮಾನಿಯಲ್ಲಿ ಸ್ಥಾಪನೆ ಮಾಡಿದರು. ಜಾಗದ ಸಮಸ್ಯೆ ಹಾಗೂ ಮಳೆಗಾಲದಲ್ಲಿ ಅಲ್ಲಿನ ವಾತಾವರಣ ಗೋಶಾಲೆಗೆ ಹಿತವೆನಿಸದ ಕಾರಣ ಕುಶಾಲನಗರ ತಾಲೂಕಿನ ಚಿಕ್ಕತ್ತೂರು ಗ್ರಾಮಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಬಯಲು ಪ್ರದೇಶವನ್ನು ಭೋಗ್ಯಕ್ಕೆ ಪಡೆದು ಗೋಶಾಲೆಗೆ ಅಗತ್ಯವಾದ ಶೆಡ್ಗಳನ್ನು ನಿರ್ಮಾಣ ಮಾಡಿ ಗೋವುಗಳನ್ನು ಪಾಲನೆ ಮಾಡಲಾಗುತ್ತಿದೆ.
೪೫ ಗೋವುಗಳಿಗೆ ಆಶ್ರಯ
ಆರಂಭದಲ್ಲಿ ಹತ್ತು ಗೋವುಗಳೊಂದಿಗೆ ಆರಂಭಗೊAಡ ಈ ಶಾಲೆಯಲ್ಲಿ ಇದೀಗ ೪೫ರಷ್ಟು ಗೋವುಗಳಿವೆ. ಎತ್ತು, ಹಸು-ಕರು, ಎಮ್ಮೆ, ಕೋಣ ಎಲ್ಲವೂ ಇಲ್ಲಿವೆ. ಹೆಚ್ಚಾಗಿ ದೇಶೀಯ ಗೋವುಗಳೇ ಇಲ್ಲಿ ಆಶ್ರಯ ಕಂಡುಕೊAಡಿವೆ. ಬೀಡಾಡಿ ದನಗಳು ಸೇರಿದಂತೆ ಕಳ್ಳಸಾಗಾಣಿಕೆ ಸಂದರ್ಭ ವಶಕ್ಕೆ ಪಡೆಯಲಾಗುವ ಗೋವುಗಳನ್ನು ಕೂಡ ಇಲ್ಲಿಗೆ ತಂದು ಬಿಡಲಾಗುತ್ತಿದೆ. ಎಲ್ಲ ಜಾನುವಾರುಗಳಿಗೂ ತಂಗಲು ಕೊಟ್ಟಿಗೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಮ್ಮೆ, ಕೋಣ-ಕರುಗಳಿದ್ದು, ಅವುಗಳಿಗೆ ಬಿಸಿಲ ಬೇಗೆಯಲ್ಲಿ ದಣಿವಾಣಿರಿಸಿಕೊಳ್ಳಲು ಪುಟ್ಟ ಕೊಳವೊಂದನ್ನು ಕೂಡ ನಿರ್ಮಾಣ ಮಾಡಲಾಗಿದೆ.
ಆರೈಕೆಯೇ ಸವಾಲು..!
ಬೀಡಾಡಿ ದನಗಳೊಂದಿಗೆ ಅಪರಾಧ ಪ್ರಕರಣಗಳಲ್ಲಿನ ಗೋವುಗಳನ್ನು ತಂದು ಬಿಡಲಾಗುತ್ತಿದ್ದು, ಇವುಗಳ ಪೈಕಿ, ವಯಸ್ಸಾದ ಅಶಕ್ತ ಹಾಗೂ ಕಾಯಿಲೆಗೆ ತುತ್ತಾಗಿರುವ ಜಾನುವಾರುಗಳೂ ಇರುತ್ತವೆ. ಅವುಗಳ ಪಾಲನೆ ಇಲ್ಲಿ ಸವಾಲಾಗಿ ಪರಿಣಮಿಸುತ್ತದೆ. ಅವುಗಳಿಗೆ ಚಿಕಿತ್ಸೆ, ಪಾಲನೆಗಾಗಿ ದಿನನಿತ್ಯ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಆದರೂ ಕೆಲವೊಂದು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪುವ ಸಂದರ್ಭ ಅವುಗಳ ಅಂತ್ಯಕ್ರಿಯೆ ನೆರವೇರಿಸಲು ಪರದಾಡುವ ಪರಿಸ್ಥಿತಿ ಕೂಡ ಎದುರಾಗುತ್ತಿದೆ.
ದಾನಿಗಳ ನೆರವು
ಈ ಗೋಶಾಲೆ ಪ್ರಾರಂಭವಾಗಿದ್ದೇ ದಾನಿಗಳ., ಪ್ರಾಣಿಪ್ರಿಯರ ಸಹಾಯ, ನೆರವಿನಿಂದಾಗಿ. ಆರಂಭದಲ್ಲಿ ಕೆಲವರು ಹಣದ ರೂಪದಲ್ಲಿ, ಮೇವಿನ ರೂಪದಲ್ಲಿ, ವಸ್ತುಗಳ ರೂಪದಲ್ಲಿ ನೆರವು ನೀಡಿದ್ದಾರೆ. ಈಗಲೂ ಕೆಲವರು ನೀಡುತ್ತಿದ್ದಾರೆ. ಆದರೆ ಮೊದಲು ನೀಡಿದವರ ಪೈಕಿ ಅನೇಕರು ಇದೀಗ ನೆರವು ನೀಡುವದನ್ನು ನಿಲ್ಲಿಸಿದ್ದಾರೆ. ಗೋಶಾಲೆಯ ಟ್ರಸ್ಟಿಗಳು ಹಾಗೂ ಗೋವುಗಳ ಮೇಲೆ ಪ್ರೀತಿ ಇರುವವರು ನೀಡುತ್ತಿರುವ ನೆರವಿನಿಂದಾಗಿ ಗೋಶಾಲೆ ಮುನ್ನಡೆಯುತ್ತಿದೆ. ಪ್ರಸ್ತುತ ಗೋಶಾಲೆಯಲ್ಲಿ ಕಾವಲುಗಾರರು ಸೇರಿ ನಾಲ್ವರು ಕೆಲಸಗಾರರಿದ್ದು, ಅವರುಗಳ ಸಂಬಳ, ಗೋವುಗಳ ಆರೈಕೆಗೆ ಮೇವು, ಔಷಧಿ ವೆಚ್ಚವನ್ನೆಲ್ಲ ಸಿಗುವ ನೆರವಿನ ಹಣದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಲಾಗುತ್ತಿದೆ.
ಮೇವಿಗೆ ತೊಂದರೆ
ಪ್ರಸ್ತುತ ಗೋಶಾಲೆಯಲ್ಲಿ ೪೫ಗೋವುಗಳಿದ್ದು, ಪ್ರತಿನಿತ್ಯ ಅವುಗಳಿಗೆ ಮೇವು, ಹಿಂಡಿ, ನೀರು ನೀಡಬೇಕಾಗುತ್ತದೆ. ಬಿಸಿಲ ಬೇಗೆಗೆ ಎಲ್ಲಿಯೂ ಹಸಿರು ಹುಲ್ಲು ಸಿಗುತ್ತಿಲ್ಲ. ಹುಲ್ಲು ಬೆಳೆಯಲು ಸಾಕಾಗುವಷ್ಟು ವ್ಯವಸ್ಥೆ, ಹಣಕಾಸಿನ ಲಭ್ಯತೆಯೂ ಇಲ್ಲ. ಒಣ ಹುಲ್ಲು ದೊರಕುವದೂ ಕಷ್ಟವಾಗಿರುವ ಸನ್ನಿವೇಶದಲ್ಲಿ ಒಂದಷ್ಟು ಮಂದಿ ಪ್ರಾಣಿ ಪ್ರೇಮಿಗಳು ಒಣ ಹುಲ್ಲನ್ನು ತಂದು ಕೊಡುತ್ತಿದ್ದಾರೆ. ಅದರಲ್ಲೇ ಈ ಮೂಕ ಪ್ರಾಣಿಗಳನ್ನು ಸಲಹಲಾಗುತ್ತಿದೆ.
ಮುಚ್ಚುವ ಪರಿಸ್ಥಿತಿ..!
ಪ್ರಸ್ತುತ ಶ್ರೀಕೃಷ್ಣ ಗೋಶಾಲೆ ಚಿಕ್ಕತ್ತೂರು ಗ್ರಾಮದ ಖಾಸಗಿ ಒಡೆತನದ ಜಾಗವನ್ನು ಭೋಗ್ಯಕ್ಕೆ ಪಡೆದು ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಇದೀಗ ಈ ಜಾಗ ಬೇರೆಯವರಿಗೆ ಮಾರಾಟವಾಗಿದ್ದು, ಇದೀಗ ಜಾಗವನ್ನು ಬಿಟ್ಟುಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರು ವರ್ಷಕ್ಕೆ ರೂ.೪೦ಸಾವಿರದಂತೆ ಭೋಗ್ಯಕ್ಕೆ ಪಡೆಯಲಾಗಿತ್ತು. ಕಳೆದ ಡಿಸೆಂಬರ್ನಲ್ಲಿ ಜಾಗ ಮಾರಾಟವಾದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳ ಒಳಗಡೆ ಜಾಗ ಬಿಟ್ಟುಕೊಡುವಂತೆ ಸೂಚನೆ ನಿಡಲಾಗಿತ್ತು. ಆದರೆ, ಗೋಶಾಲೆಗೆ ಪೂರಕವಾದ ಸೂಕ್ತ ಜಾಗ ಲಭ್ಯವಾಗದ ಹಿನ್ನೆಲೆಯಲ್ಲಿ ಇನ್ನೂ ಬಿಟ್ಟುಕೊಡಲಾಗಿಲ್ಲ. ಜಾಗದ ಹುಡುಕಾಟ ನಡೆಯುತ್ತಿದೆ. ಜಾಗ ಲಭ್ಯವಾಗದಿದ್ದಲ್ಲಿ ಗೋಶಾಲೆಯನ್ನು ಅನಿವಾರ್ಯವಾಗಿ ಮುಚ್ಚಬೇಕಾಗುತ್ತದೆ. ಮತ್ತೊಮ್ಮೆ ಎಲ್ಲ ಗೋವುಗಳು ಬೀದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾದರೂ ಆದೀತು..!
ನೆರವಿನ ನಿರೀಕ್ಷೆಯಲ್ಲಿ..,
ಯಾವದೇ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕಾದರೆ ಹತ್ತು ಕೈಗಳು ಜೋಡಿಕೆಯಾದರೆ ಯಶಸ್ಸು ಸಾಧ್ಯ. ಇಲ್ಲಿಯೂ ಅನಾಥವಾಗಿರುವ ಗೋವುಗಳ ರಕ್ಷಣೆ ಹಾಗೂ ಪಾಲನೆಗೆ ನೆರವಿನ ಹಸ್ತ ಚಾಚುವ ಸಹೃದಯರು ಬೇಕಾಗಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಸರಕಾರ ನೆರವಿಗೆ ಧಾವಿಸಬೇಕಿದೆ..!
? ಕುಡೆಕಲ್ ಸಂತೋಷ್, ಕೆ.ಕೆ.ನಾಗರಾಜಶೆಟ್ಟಿ