(ವಿಶೇಷ ವರದಿ: ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಏ. ೧೦: ಬೆಟ್ಟಗುಡ್ಡಗಳ ನಡುವೆ, ಪಯಸ್ವಿನಿ ನದಿ ದಾಟಿ ಮನೆ ಸೇರಬೇಕು. ೩ ಕಿಲೋಮೀಟರ್‌ವರೆಗೆ ಬರಿಗಾಲಿನಲ್ಲೇ ನಡೆಯುತ್ತಾ ಗೂಡು ಸೇರಬೇಕು. ಮನೆಯ ಬಳಿ ವಾಹನ ಹೋಗಲೂ ದಾರಿಯಿಲ್ಲ. ರಸ್ತೆ ಬದಿ ವಾಹನ ನಿಲ್ಲಿಸಿ ಮೂರು ಕಿಲೋಮೀಟರ್ ನಡೆಯಲೇಬೇಕು. ಮನೆ ಇದ್ದರೂ ಮನೆಗೆ ದಾರಿ ಯಾವುದಯ್ಯಾ? ಎಂಬುದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗಡಿಭಾಗವಾದ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯು. ಚೆಂಬುವಿನ ೪ ಕುಟುಂಬಗಳ ಕರುಣಾಜನಕ ಕಥೆಯಾಗಿದೆ.

ಕಳೆದ ೩ ದಶಕಗಳಿಂದ ಮನೆಗೆ ದಾರಿಯಿಲ್ಲದೇ ೩ ಕಿಲೋಮೀಟರ್ ನಡೆಯಬೇಕಾದ ಪರಿಸ್ಥಿತಿ ಯು.ಚೆಂಬುವಿನ ನಾಲ್ಕು ಕುಟುಂಬಗಳದ್ದು. ಹಲವು ಬಾರಿ ರಸ್ತೆಗಾಗಿ ಮನವಿ ಸಲ್ಲಿಸಿದರೂ ಸಹ ಯಾರೂ ಕೂಡ ಇತ್ತ ತಿರುಗಿ ನೋಡಿಲ್ಲ. ರಸ್ತೆಗಾಗಿ ಮನವಿ ಸಲ್ಲಿಸಿ ಬೇಸತ್ತ ಕುಟುಂಬವೊAದು ದಯಾಮರಣಕ್ಕೆ ಅವಕಾಶ ನೀಡಿ ಎಂದು ರಾಷ್ಟçಪತಿಗಳಿಗೆ ಅರ್ಜಿ ಸಲ್ಲಿಸಿದೆ. ರಸ್ತೆ ನೀಡಿ, ಇಲ್ಲವೋ ನಮ್ಮನ್ನು ಸಾಯಲು ಬಿಡಿ ಎಂದು ಕುಟುಂಬಸ್ಥರು ಆಡಳಿತ ವರ್ಗದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಯು.ಚೆಂಬು ಗ್ರಾಮದ ೪ ಕುಟುಂಬಗಳ ಮನೆಗೆ ರಸ್ತೆಯಿಲ್ಲ. ಮೂರು ಕುಟುಂಬಗಳು ಪಯಸ್ವಿನಿ ನದಿ ದಾಟಿ ಮನೆ ಸೇರಬೇಕು. ಪಯಸ್ವಿನಿ ನದಿಯ ಬಳಿ ಯಾವುದೇ ಸೇತುವೆ ಕೂಡ ಇಲ್ಲ. ನೀರಿನಲ್ಲೇ ಸಾಹಸಮಯವಾಗಿ ನಡೆಯಬೇಕು. ಮತ್ತೊಂದು ಕುಟುಂಬದವರು ಬೆಟ್ಟ -ಗುಡ್ಡಗಳ ನಡುವೆ ನಡೆದು ಗೂಡು ಸೇರುತ್ತಿದ್ದಾರೆ. ೪ ಕುಟುಂಬಗಳಲ್ಲಿ ವೃದ್ಧರು, ಮಕ್ಕಳು ಸೇರಿ ೨೦ಕ್ಕೂ ಅಧಿಕ ಮಂದಿ ಜೀವನ ನಡೆಸುತ್ತಿದ್ದಾರೆ. ರಸ್ತೆಯಿಲ್ಲದೆÀ ಮನೆಯಿಂದ ಹೊರಬಾರದೆ, ಮನೆಯೇ ಪ್ರಪಂಚ ಎಂದು ಜೀವನ ಸಾಗಿಸುತ್ತಿದ್ದಾರೆ.

ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೆ ಆಸ್ಪತ್ರೆ ಸೇರುವುದು ಕಷ್ಟಕರ. ಪಯಸ್ವಿನಿ ನದಿ ದಾಟಿ ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಗ್ರಾಮಸ್ಥರದ್ದು. ಆದರೂ ಕೂಡ ಇದುವರೆಗೆ ಜಿಲ್ಲಾಡಳಿತ ಇವರ ಕೂಗಿಗೆ ಸ್ಪಂದಿಸಿಯೇ ಇಲ್ಲ.

ನಡೆದೇ ಶಾಲೆ ಸೇರುವ ವಿದ್ಯಾರ್ಥಿಗಳು!

ಯು.ಚೆಂಬುವಿನ ನಾಲ್ಕು ಕುಟುಂಗಳಲ್ಲಿ ಮಕ್ಕಳು ಕೂಡ ಇದ್ದಾರೆ. ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ೩ ಕಿಲೋಮೀಟರ್ ಮನೆಯಿಂದ ನಡೆದೇ ಶಾಲೆ ಸೇರುತ್ತಾರೆ. ಮಳೆಗಾಲದಲ್ಲಿ ಶಾಲೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ. ಶಾಲೆಗೆ ಹೋಗುವಾಗ ಕಿರಿದಾದ ದಾರಿಯಲ್ಲಿ ಜಾರಿ ಬಿದ್ದು ಅನೇಕ ಬಾರಿ ವಿದ್ಯಾರ್ಥಿಗಳಿಗೆ ಗಾಯವುಂಟಾದ ಘಟನೆಗಳು ಕೂಡ ಇವೆ.

ಕೃಷಿ ಚಟುವಟಿಕೆಗಳಿಗೆ ತೊಂದರೆ, ಕೆಲಸಕ್ಕೆ ಅಧಿಕ ಸಂಬಳ ನೀಡಿದರು ಬಾರದ ಜನರು

ಮನೆಗೆ ದಾರಿಯಿಲ್ಲದ ಕಾರಣದಿಂದ ಯು.ಚೆಂಬುವಿನ ನಾಲ್ಕು ಕುಟುಂಬಗಳ ಕೃಷಿ ಚಟುವಟಿಕೆಗಳಿಗೆ ಕೂಡ ಹಿನ್ನಡೆಯಾಗಿದೆ.

ಕರಿಮೆಣಸು, ಕಾಫಿ ಹಾಗೂ ಅಡಿಕೆ ಕುಯ್ಲಿಗೆ ಕೂಲಿ ಕಾರ್ಮಿಕರಿಗೆ ಅಧಿಕ ಸಂಬಳ ನೀಡಿದರೂ ಕೂಡ ಬಾರದ ಕಾರಣ ಅಡಿಕೆ ಹಾಗೂ ಕರಿಮೆಣಸು ಬೆಳೆಯುವುದನ್ನೇ ಗ್ರಾಮಸ್ಥರು ನಿಲ್ಲಿಸಿದ್ದಾರೆ.

ಹಸುವಿಗೆ ಮೇವಿಲ್ಲದೆ ಹಾಗೂ ಹಸುಗಳಿಗೆ ರೋಗ ಬಾಧಿಸಿದರೆ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ರಸ್ತೆಯಿಲ್ಲದ ಕಾರಣದಿಂದ ಹೈನುಗಾರಿಕೆಯಲ್ಲಿ ಆಸಕ್ತಿ ತೋರುತ್ತಿದ್ದ ಗ್ರಾಮಸ್ಥರು ಹಸು ಸಾಕುವುದನ್ನು ಕೂಡ ನಿಲ್ಲಿಸಿದ್ದಾರೆ.

(ಮೊದಲ ಪುಟದಿಂದ) ಒಂದೆಡೆ ಮನೆಗೆ ದಾರಿಯಿಲ್ಲದೆ, ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿರುವ ಯು.ಚೆಂಬುವಿನ ನಾಲ್ಕು ಕುಟುಂಬಗಳಿಗೆ ಆನೆ ಕಾಟ ತಪ್ಪಿದಲ್ಲ. ಸಂಜೆ ೫ ಗಂಟೆಯೊಳಗೆ ಏನಾದರೂ ಮಾಡಿ ಮನೆ ಸೇರಲೇಬೇಕು. ಇಲ್ಲದಿದ್ದರೆ ಆನೆಗಳು ಯಾವ ಕಡೆಯಿಂದ ದಾಳಿ ಮಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ.

ಆನೆ ಭಯದಿಂದ ಗ್ರಾಮಸ್ಥರು ಮನೆಯಿಂದ ಹೊರಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಸ್ವಾತಂತ್ರ‍್ಯ ದೊರೆತು ೭ ದಶಕಗಳು ಕಳೆದರೂ ಸಹ ಇಂದಿಗೂ ಕೂಡ ಮಾನವರ ಮೂಲ ಸೌಕರ್ಯಗಳಲ್ಲಿ ಒಂದಾಗಿರುವ ರಸ್ತೆಯೇ ಗ್ರಾಮಸ್ಥರಿಗೆ ಇಲ್ಲದಿದ್ದರೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರವಾಗಿದೆ.

ಮೂರು ದಶಕಗಳಿಂದ ರಸ್ತೆಗಾಗಿ ಮನವಿ ಸಲ್ಲಿಸುತ್ತಾ ಬಂದಿರುವ ಕುಟುಂಬಗಳ ಬಗ್ಗೆ ನಿರ್ಲಕ್ಷ ತೋರಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಏನಿದು ರಸ್ತೆ ವಿವಾದ?

೧೯೨೬ ರಲ್ಲಿ ಯು.ಚೆಂಬುವಿನ ಅರಣ್ಯ ಪ್ರದೇಶವನ್ನು ಖಾಸಗಿ ಸಂಸ್ಥೆಗೆ ೯೯೯ ವರ್ಷಕ್ಕೆ ಗುತ್ತಿಗೆಗೆ ನೀಡಲಾಗಿತ್ತು.

ಅರಣ್ಯ ಪ್ರದೇಶವನ್ನು ನಾಶಗೊಳಿಸಿ ರಬ್ಬರ್ ತೋಟವನ್ನಾಗಿ ಮಾರ್ಪಾಡು ಮಾಡಲಾಗಿತ್ತು. ಅರಣ್ಯದಂಚಿನಲ್ಲಿ ಕುಟುಂಬಗಳು ಜೀವನ ನಡೆಸುತ್ತಾ ಬಂದಿವೆ. ಅರಣ್ಯವನ್ನು ರಬ್ಬರ್ ತೋಟವನ್ನಾಗಿ ಪರಿವರ್ತಿಸಿದ ಬಳಿಕ ಆಡಳಿತ ವರ್ಗ ಗುತ್ತಿಗೆ ನೀಡಿದವರನ್ನು ಪ್ರಶ್ನಿಸಲು ಹೋಗಿಲ್ಲ. ಆದರೆ ರಸ್ತೆಯ ಬಗ್ಗೆ ಮನವಿ ನೀಡಿದರೆ ಮೀಸಲು ಅರಣ್ಯ ಎಂದು ಕಾರಣಗಳು ಹೇಳಿ ಸತಾಯಿಸುತ್ತಿದ್ದಾರೆ ಎಂದು ಯು.ಚೆಂಬು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಹಿಂದೆ ಯು.ಚೆಂಬು ಗ್ರಾಮದ ನಾಲ್ಕು ಮನೆಗಳಿಗೆ ಹಾದುಹೋಗಲು ಸಮೀಪವಿರುವ ತೋಟದ ರಸ್ತೆ ಸಹಕಾರಿಯಾಗಿತ್ತು. ಇದೀಗ ಹೊಸದಾಗಿ ಒಡೆತನ ಹೊಂದಿರುವ ಸಂಸ್ಥೆಯೊAದು ಏಕಾಏಕಿ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ, ದೈನಂದಿನ ಜೀವನ ಸಾಗಿಸಲು ಅಸಾಧ್ಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.