ಶನಿವಾರಸಂತೆ, ಏ. ೧೦: ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮುಖ್ಯವಾಗಿದ್ದು ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಪ್ರೇಮ ಮೂಡಿಸಬೇಕೆಂದು ನಿವೃತ್ತ ಯೋಧ ಎ.ಎಸ್. ಮಹೇಶ್ ಅಭಿಪ್ರಾಯಪಟ್ಟರು. ಶನಿವಾರಸಂತೆಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಯಲ್ಲಿ ನಡೆದ ವಾರ್ಷಿಕ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗಿನಂತಹ ಪುಣ್ಯಭೂಮಿಯಲ್ಲಿ ಜನಿಸಿರುವುದೇ ಪುಣ್ಯವಾಗಿದ್ದು ಜಿಲ್ಲೆ ದೇಶಕ್ಕೆ ವೀರ ಸೈನಿಕರ ಕೊಡುಗೆ ನೀಡಿದೆ. ಮಕ್ಕಳು ಉಗ್ರವಾದಿಗಳಾಗದೇ ಸೌಮ್ಯವಾದಿಗಳಾಗುವಂತೆ ಮಾಡುವುದು ಪೋಷಕರ ಕರ್ತವ್ಯ ಎಂದರು.

ಶನಿವಾರಸAತೆ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಮಾತನಾಡಿ, ಮಕ್ಕಳು ನಿಷ್ಕಲ್ಮಶ ಮನಸ್ಸಿನವರಾಗಿದ್ದು ಸ್ವಚ್ಛಂದ ಕನಸನ್ನು ಕಾಣಬೇಕು. ಆ ಕನಸನ್ನು ನನಸಾಗಿಸಲು ಪೋಷಕರು ಸಹಕಾರ ನೀಡುವ ಸೂತ್ರದಾರರಾಗ ಬೇಕು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಮಾನವೀಯ ಮೌಲ್ಯಗಳ ಶಿಕ್ಷಣ ನೀಡಬೇಕು ಎಂದು ಕರೆ ನೀಡಿದರು.

ಗೋಪಾಲಪುರದ ನಿವೃತ್ತ ಯೋಧ ಯಶವಂತ್ ಕುಮಾರ್ ಮಾತನಾಡಿದರು. ಈ ಸಂದರ್ಭ ಪೂರ್ವ ಪ್ರಾಥಮಿಕ ಶಾಲೆಯಿಂದ ಎಸ್‌ಎಸ್‌ಎಲ್‌ಸಿವರೆಗಿನ ವಿದ್ಯಾರ್ಥಿಗಳಿಗೆ ಅತಿಥಿ ಗಣ್ಯರು ಬಹುಮಾನ ವಿತರಿಸಿದರು. ವಿದ್ಯಾಸಂಸ್ಥೆಗೆ ಎಸ್‌ಎಸ್‌ಎಲ್‌ಸಿ ಪರಿಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಪಡೆದಿರುವುದನ್ನು ಪರಿಗಣಿಸಿ ಶಿಕ್ಷಣ ಇಲಾಖೆ ವತಿಯಿಂದ ಅಭಿನಂದನಾ ಫಲಕವನ್ನು ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಅವರು ವಿದ್ಯಾಸಂಸ್ಥೆ ಅಧ್ಯಕ್ಷೆ ಡಿ. ಸುಜಲಾದೇವಿಯವರಿಗೆ ವಿತರಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷೆ ಡಿ. ಸುಜಲಾ ದೇವಿ ಮಾತನಾಡಿದರು. ಶಿಕ್ಷಕ ವೃಂದದವರು, ಸಿಬ್ಬಂದಿ, ಪೋಷಕರು ಹಾಜರಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.